ದೊಡ್ಡಬಳ್ಳಾಪುರ/ತುಮಕೂರು: ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕು ಮತ್ತು ತುಮಕೂರು ಜಿಲ್ಲೆಯ ಕೊರಟಗೆರೆ ತಾಲೂಕಿನ ಗಡಿಭಾಗದಲ್ಲಿರುವ ಚಿಗೇರಹಳ್ಳಿಯಲ್ಲಿ ಸ್ಥಾಪಿಸಲಾಗಿರುವ ಬಿಬಿಎಂಪಿ ತ್ಯಾಜ್ಯ ವಿಲೇವಾರಿ ಘಟಕವನ್ನು ಮುಚ್ಚುವಂತೆ ಒತ್ತಾಯಿಸಿ ಚಿಗೇರಹಳ್ಳಿ ಗ್ರಾಮಸ್ಥರು ನಡೆಸುತ್ತಿರುವ ಹೋರಾಟ 10ನೇ ದಿನಕ್ಕೆ ತಲುಪಿದೆ. ದಿನೇ ದಿನೇ ತೀವ್ರಗೊಂಡ ಹೋರಾಟಕ್ಕೆ ಕೆಲ ಸಂಘಟನೆಗಳಿಂದ ಬೆಂಬಲ ಸಿಕ್ಕಿತ್ತು. ಆದ್ರೆ ಒಮಿಕ್ರಾನ್ ವೈರಸ್ ನೆಪ ಇಟ್ಟುಕೊಂಡು ಹೋರಾಟಗಾರರನ್ನು ಬಂಧಿಸುವ ಮೂಲಕ ಹೋರಾಟವನ್ನು ಹತ್ತಿಕ್ಕುವ ಕೆಲಸವನ್ನು ಜಿಲ್ಲಾಡಳಿತ ಮಾಡಿದೆ ಎನ್ನುವ ಆರೋಪಗಳು ಕೇಳಿಬಂದಿವೆ.
ಹೋರಾಟ ಸ್ಥಳಕ್ಕೆ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಸಹ ಭೇಟಿ ನೀಡಿ ಬೆಂಬಲ ಸೂಚಿಸಿದ್ದರು. ದಿನೇ ದಿನೇ ಹೋರಾಟಕ್ಕೆ ಕೆಲ ಸಂಘಟನೆಗಳಿಂದ ಬೆಂಬಲ ಸಹ ಸಿಕ್ಕಿತ್ತು. ಇದು ತೀವ್ರಗೊಳ್ಳುತ್ತಿದ್ದದ್ದನ್ನು ಮನಗಂಡ ಜಿಲ್ಲಾಡಳಿತ ಒಮಿಕ್ರಾನ್ ವೈರಸ್ ನಿಯಂತ್ರಣದ ನೆಪ ಹೇಳಿ ಬಿಬಿಎಂಪಿ ಜಂಟಿ ಆಯುಕ್ತ ಸರ್ಫರಾಜ್ ಖಾನ್, ತಹಶೀಲ್ದಾರ್ ಶಿವರಾಜ್ ಮತ್ತು ಡಿವೈಎಸ್ಪಿ ನಾಗರಾಜ್ ನೇತೃತ್ವದ ಅಧಿಕಾರಿಗಳ ತಂಡ ಹೋರಾಟಗಾರರನ್ನು ಬಲವಂತವಾಗಿ ಬಂಧಿಸಿ ರಾಜಾನುಕುಂಟೆ ಬಳಿ ಕಲ್ಯಾಣ ಮಂಟಪದಲ್ಲಿ ಇಟ್ಟಿದೆ ಎನ್ನಲಾಗ್ತಿದೆ. ಪ್ರತಿಭಟನೆಯ ಸ್ಥಳದಲ್ಲಿದ್ದ ಪೆಂಡಾಲ್ ಅನ್ನು ಸಹ ಪೊಲೀಸರು ತೆಗೆದುಕೊಂಡು ಹೋಗಿದ್ದಾರೆ. ಬಂಧಿಸಲ್ಪಟ್ಟ ಸ್ಥಳದಲ್ಲಿಯೇ ಹೋರಾಟಗಾರರು ಪ್ರತಿಭಟನೆಗೆ ಇಳಿದಿದ್ದಾರೆ.
ಜಿಲ್ಲಾಡಳಿತ ನಿಯಮ ಉಲ್ಲಂಘಿಸಿದೆ:
ಒಮಿಕ್ರಾನ್ ವೈರಸ್ ನೆಪ ಹೇಳಿದ ಜಿಲ್ಲಾಡಳಿತ 50 ಹೋರಾಟಗಾರರನ್ನು ಬಂಧಿಸಲು 300ಕ್ಕೂ ಹೆಚ್ಚು ಪೊಲೀಸರನ್ನು ಕರೆತಂದಿದ್ದು, ಒಮಿಕ್ರಾನ್ ನಿಯಂತ್ರಣಕ್ಕಾಗಿ ಜಾರಿಯಾದ ನಿಯಮಗಳ ಉಲ್ಲಂಘನೆಯಲ್ಲವೇ ಎಂಬುದು ಹೋರಾಟಗಾರರ ಅಕ್ರೋಶವಾಗಿದೆ. ಹೋರಾಟಗಾರರನ್ನು ಬಂಧಿಸುವಾಗ ಕೆಲವರಿಗೆ ಗಾಯವಾಗಿತ್ತು. ಪಕ್ಕೆಲುಬು ಮುರಿತಕ್ಕೆ ಒಳಗಾದ ರೈತನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದುಬಂದಿದೆ.
ಕಿತ್ತುಕೊಂಡಿರುವ ಪೆಂಡಾಲ್ ವಾಪಸ್ ಕೊಡುವ ತನಕ ಮತ್ತು ನಾವು ಮಾಡುತ್ತಿರುವ ಶಾಂತಿಯುತ ಹೋರಾಟಕ್ಕೆ ಅನುವು ಮಾಡಿಕೊಡುವ ತನಕ ಊಟ ಮಾಡುವುದಿಲ್ಲವೆಂದು ಹೋರಾಟಗಾರರು ಉಪವಾಸದ ಎಚ್ಚರಿಕೆ ರವಾನಿಸಿದ್ದಾರೆ.
ಹಿನ್ನೆಲೆ:
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಹಾಗೂ ಖಾಸಗಿಯವರ ಜಂಟಿ ಸಹಯೋಗದಿಂದ ಪ್ರಾರಂಭವಾಗಿರುವ ಈ ಘಟಕ ದೊಡ್ಡಬಳ್ಳಾಪುರ, ಕೊರಟಗೆರೆ ಕ್ಷೇತ್ರದ ರೈತರ ಬದುಕಿಗೆ 6 ವರ್ಷದಿಂದ ಮಾರಕವಾಗಿದೆ. ಪ್ರಸ್ತುತ ಇದೇ ಘಟಕದ ವಿಷಯುಕ್ತ ಅನಿಲ ಮತ್ತು ಕಸದ ರಾಶಿಯ ಕೊಳಚೆ ನೀರು ಕೊರಟಗೆರೆ ಕ್ಷೇತ್ರದ ಮಾವತ್ತೂರು ಕೆರೆಗೆ ಸೇರಿ, ಜಲಚರಗಳನ್ನು ಬಲಿ ತೆಗೆದುಕೊಂಡಿದ್ದಲ್ಲದೇ ಕೆರೆ ನೀರು ಕೂಡ ಕಲುಷಿತಗೊಂಡಿದೆ. ಹಾಗಾಗಿ ಇದನ್ನು ಸ್ಥಳಾಂತರಿಸಬೇಕೆಂದು ಸ್ಥಳೀಯರು ನಿರಂತರ ಹೋರಾಟ ನಡೆಸುತ್ತಿದ್ದಾರೆ.
ತುಮಕೂರು ಜಿಲ್ಲೆಯ ಕೊರಟಗೆರೆ ಕ್ಷೇತ್ರದ ಕೋಳಾಲ, ಚಿನ್ನಹಳ್ಳಿ, ಮಾವತ್ತೂರು, ದೊಡ್ಡಸಾಗ್ಗೆರೆ, ಕ್ಯಾಮೇನಹಳ್ಳಿ, ಹೊಳವನಹಳ್ಳಿ, ತೀತಾ ಗ್ರಾಪಂ ಮತ್ತು ದೊಡ್ಡಬಳ್ಳಾಪುರ ಕ್ಷೇತ್ರದ ಭಕ್ತರಹಳ್ಳಿ, ಸಕ್ಕರೆಗೊಲ್ಲಹಳ್ಳಿ, ದೊಡ್ಡಬೆಳವಂಗಲ, ಹುಲೀಕುಂಟೆ, ಸಾಸಲು, ಬರಗೂರು ಗ್ರಾಪಂ ವ್ಯಾಪ್ತಿಯಲ್ಲಿ ವಿಷಯುಕ್ತ ಫ್ಯಾಕ್ಟರಿ ನೀರು ದುರ್ವಾಸನೆ ಬೀರುತ್ತಿದೆ. ಹಳ್ಳದ ಮೂಲಕ ಹರಿಯುತ್ತಿರುವ ಕೊಳಚೆ ನೀರಿನಿಂದ ಅಂರ್ತಜಲ ಕಲುಷಿತವಾಗಿದೆಯೆಂದು ಅನ್ನದಾತರು ಕಿಡಿಕಾರಿದ್ದಾರೆ.
ಸಾಂಕ್ರಾಮಿಕ ರೋಗ ಹೆಚ್ಚಳ:
ಎಂಎಸ್‌ಜಿಪಿ ಕಸ ವಿಲೇವಾರಿ ಘಟಕ ಸ್ಥಾಪನೆಗೆ ಸರ್ಕಾರ ಸ್ಥಳೀಯ ಗ್ರಾಮ ಪಂಚಾಯತ್ನ ಪರವಾನಿಗೆ ಪಡೆದಿಲ್ಲ. ಭಕ್ತರಹಳ್ಳಿ ಗ್ರಾ.ಪಂ.ಯಿಂದ ನಾಲ್ಕು ಬಾರಿ ನೋಟಿಸ್ ಜಾರಿ ಮಾಡಿದರೂ ಘಟಕದ ಮಾಲೀಕರು ಉತ್ತರ ನೀಡಿಲ್ಲ. ಘಟಕಕ್ಕೆ ಪ್ರತಿ ನಿತ್ಯ 8 ರಿಂದ 10ಸಾವಿರ ಟನ್ ಕಸ ಬರುತ್ತಿದೆ. ಅಳತೆ ಮೀರಿ ತರುವ ಕಸ ವಿಲೇವಾರಿ ಆಗದೇ ಕೊಳೆತು ಭೂಮಿಗೆ ಸೇರಿ ಅಂತರ್ಜಲ ಮಟ್ಟ ವಿಷಮಯವಾಗಿದೆ. ಇದರಿಂದ ಸುಮಾರು 100 ಗ್ರಾಮದ ಜನರಿಗೆ ಚರ್ಮ ರೋಗ, ಶ್ವಾಸಕೋಶದ ತೊಂದರೆ, ಕಿಡ್ನಿಯಲ್ಲಿ ಕಲ್ಲು ಸೇರಿದಂತೆ ಹಲವು ಕಾಯಿಲೆಗಳು ಬರುತ್ತಿವೆ.
ವಿಷಪೂರಿತ ಕೊಳಚೆ ನೀರಿನಿಂದ ಸಾಂಕ್ರಾಮಿಕ ರೋಗ ಹೆಚ್ಚಾಗಿದೆ. ಫ್ಯಾಕ್ಟರಿಯ ದುರ್ವಾಸನೆ ರೈತರ ನೆಮ್ಮದಿಯನ್ನು ಕೆಡಿಸಿದೆ. ಅಲ್ಲದೇ ನಮ್ಮ ಗ್ರಾಮಕ್ಕೆ ಹೆಣ್ಣು ಕೂಡಲು ಯಾರೂ ಮುಂದೆ ಬರುತ್ತಿಲ್ಲ. ಸಂಬಂಧಿಕರು ಮನೆಗೆ ಬಂದರೆ ಅರ್ಧ ಗಂಟೆಯೂ ಇರೋದಿಲ್ಲ. ನಮ್ಮ ಊರಿನ ಗ್ರಾಮದೇವತೆ ಅರಸಮ್ಮ ಜಾತ್ರೆ ನಿಲ್ಲಿಸಿ ಐದು ವರ್ಷವಾಗಿದೆ. ಅಂತರ್ಜಲ ಮಟ್ಟ ಕಲುಷಿತವಾಗಿ ಕುಡಿಯಲು ನೀರು ಸಿಗದಿರುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ರೈತರು ಅಸಮಾಧಾನ ವ್ಯಕ್ತಪಡಿಸಿದರು.
ರೈತರ ಆಗ್ರಹವೇನು?
ರೈತರ ಬದುಕನ್ನು ನುಂಗುತ್ತಿರುವ ಘಟಕವನ್ನು ತಕ್ಷಣ ಬಂದ್ ಮಾಡಬೇಕೆಂದು 8 ಗ್ರಾಮ ಪಂಚಾಯತ್ಗಳ ಸದಸ್ಯರು, ಅಧ್ಯಕ್ಷರು-ಉಪಾಧ್ಯಕ್ಷರು, ಎಂಎಸ್‌ಜಿಬಿ ಘಟಕದ ಮುಂಭಾಗ ಅನಿರ್ದಿಷ್ಟಾವಧಿ ಹೋರಾಟ ಶುರು ಮಾಡಿದ್ದಾರೆ. ಈ ಘಟಕದಲ್ಲಿ 10 ನಿಮಿಷ ನಿಂತರೆ ಉಸಿರು ಗಟ್ಟಿದ ವಾತಾವರಣ ಸೃಷ್ಟಿಯಾಗಲಿದೆ. ಒಮ್ಮೆಲೆ ಕೆಮ್ಮು, ಗಂಟಲು ಕೆರೆತ ಕಾಣಿಸಿಕೊಳ್ಳುತ್ತದೆ. ರಾಜ್ಯ ಸರ್ಕಾರ ಮತ್ತು ಅಧಿಕಾರಿ ವರ್ಗ ತಕ್ಷಣ ಘಟಕದ ಮಾಲೀಕರ ವಿರುದ್ಧ ಕ್ರಮ ಕೈಗೊಂಡು ತಕ್ಷಣ ಘಟಕವನ್ನು ಮುಚ್ಚಲೇಬೇಕಾದ ಅನಿವಾರ್ಯತೆ ಇದೆ ಎಂಬುದು ದೊಡ್ಡಬಳ್ಳಾಪುರ ಮತ್ತು ಕೊರಟಗೆರೆ ರೈತರ ಆಗ್ರಹವಾಗಿದೆ.
ಇದನ್ನೂ ಓದಿ: ಬಿಬಿಎಂಪಿ ತ್ಯಾಜ್ಯ ಘಟಕ ಮುಚ್ಚುವಂತೆ ಒತ್ತಾಯಿಸಿ ಗ್ರಾಮಸ್ಥರ ಅನಿರ್ಧಿಷ್ಟಾವಧಿ ಧರಣಿ