ಬೆಂಗಳೂರು/ರಾಮನಗರ: ಹಿಜಾಬ್ ವಿವಾದದ ನಡುವೆಯೂ ರಾಜ್ಯಾದ್ಯಂತ ಇಂದಿನಿಂದ ಪಿಯು, ಪದವಿ ಕಾಲೇಜುಗಳಲ್ಲಿ ತಗರತಿಗಳು ಮತ್ತೆ ಆರಂಭವಾಗಿದೆ.
ಪ್ರೌಢಶಾಲಾ ತರಗತಿ ಬೆನ್ನಲ್ಲೇ ಇಂದಿನಿಂದ ಪದವಿ ಪೂರ್ವ ಮತ್ತು ಪದವಿ ಕಾಲೇಜುಗಳು ಶುರುವಾಗಿದ್ದು, ಬೆಂಗಳೂರಿನಲ್ಲಿ ಎಂದಿನಂತೆ ತರಗತಿಗಳು ಶುರುವಾಗಿವೆ. ಅತಿ ಸೂಕ್ಷ್ಮ ಕಾಲೇಜುಗಳನ್ನು ಸರ್ಕಾರ ಗುರುತಿಸಿದೆ. ಕಾಲೇಜು ಆರಂಭ ಹಿನ್ನೆಲೆಯಲ್ಲಿ ಸಂಬಂಧಪಟ್ಟ ಎಲ್ಲಾ ಅಧಿಕಾರಿಗಳಿಗೂ ಜವಾಬ್ದಾರಿ ನೀಡಲಾಗಿದೆ. ಎಸಿ, ಡಿಸಿ ತಹಶೀಲ್ದಾರ್ ಹಾಗೂ ಪೊಲೀಸ್ ಅಧಿಕಾರಿಗಳಿಗೂ ಜವಾಬ್ದಾರಿ ವಹಿಸಲಾಗಿದ್ದು, ಹೈಕೋರ್ಟ್ ಆದೇಶ ಪಾಲನೆಗೆ ಸೂಚನೆ ನೀಡಲಾಗಿದೆ.
ಯಾವುದೇ ರೀತಿಯ ಅಹಿತಕರ ಘಟನೆಗಳು ನಡೆಯದಂತೆ ಕಾಲೇಜುಗಳ ಮುಂಭಾಗ ಖಾಕಿ ಹದ್ದಿನ ಕಣ್ಣಿಟ್ಟಿದೆ. ಕಾಲೇಜಿನಲ್ಲಿ ಹಿಜಾಬ್, ಕೇಸರಿ ಶಾಲು ಧರಿಸಲು ಅವಕಾಶ ಇಲ್ಲ.
ಶೇಷಾದ್ರಿಪುರಂ ಕಾಲೇಜಿನ ಪ್ರಾಂಶುಪಾಲರಾದ ಮೀರಾ ಮಾತನಾಡಿ, ವಿದ್ಯಾರ್ಥಿಗಳು ಜವಾಬ್ದಾರಿಯುತವಾಗಿ ವರ್ತಿಸುತ್ತಿದ್ದಾರೆ. ಎಲ್ಲ ವಿದ್ಯಾರ್ಥಿಗಳು ಒಗ್ಗಟಿನಿಂದ ಇದ್ದು, ಘಟನೆ ನಡೆಯುವ ಮುನ್ನವೂ ಈಗಲೂ ಯಾವ ಬದಲಾವಣೆಯೂ ಇಲ್ಲ. ಎಂದಿನಂತೆ ತರಗತಿಗಳು ಶುರುವಾಗಿದ್ದು ವಿದ್ಯಾರ್ಥಿಗಳು ಹಾಜರಾಗಿದ್ದಾರೆ ಎಂದರು.
ರಾಮನಗರ: ರಾಮನಗರ ಜಿಲ್ಲೆಯ ಶಾಲಾ, ಕಾಲೇಜುಗಳ 100 ಮೀಟರ್ ಅಂತರದಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ಜಿಲ್ಲಾಧಿಕಾರಿ ಡಾ.ರಾಕೇಶ್ ಕುಮಾರ್ ಆದೇಶ ಹೊರಡಿಸಿದ್ದು, 5 ಜನರಿಗಿಂತ ಹೆಚ್ಚು ಜನ ಸೇರಿದರೆ ಕೇಸ್ ದಾಖಲು ಮಾಡುವುದಾಗಿ ಎಚ್ಚರಿಕೆ ಕೊಟ್ಟಿದ್ದಾರೆ.
ಅಲ್ಲದೇ ಯಾರಾದರೂ ಗುಂಪುಗೂಡಿ ಗಲಾಟೆ ಮಾಡಿದರೆ ಅವರ ವಿರುದ್ಧವೂ ಕ್ರಿಮಿನಲ್ ಕೇಸ್ ದಾಖಲು ಮಾಡಲಾಗುವುದೆಂದು ರಾಮನಗರ ಜಿಲ್ಲಾಡಳಿತದಿಂದ ಆದೇಶ ಹೊರಡಿಸಲಾಗಿದೆ.
ಇದನ್ನೂ ಓದಿ: ವಿಜಯಪುರದಲ್ಲಿ ಹಿಜಾಬ್ ಧರಿಸಿಯೇ ತರಗತಿಗೆ ಹಾಜರು: ಪ್ರತಿಭಟನೆ ನಡೆಸಿ ಮನೆಗೆ ವಾಪಸ್