ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಅವರ 'ಸಬ್ ಕಾ ಸಾಥ್, ಸಬ್ ಕಾ ವಿಕಾಸ್' ಮತ್ತು 'ಸಬ್ ಕಾ ವಿಶ್ವಾಸ್, ಸಬ್ ಕಾ ಪ್ರಯಾಸ್' ಚಿಂತನೆ ಇಂದು ಭಾರತವನ್ನು ವಿಶ್ವದ ದೊಡ್ಡ ಶಕ್ತಿಗಳಲ್ಲಿ ಸೇರಿಸಿದೆ ಎಂದು ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಹೇಳಿದರು. ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಿಂದ ಆಯೋಜಿಸಿದ್ದ ಸಮಾರಂಭದಲ್ಲಿ 'ಮೋದಿ @20 ಡ್ರೀಮ್ಸ್ ಮೀಟ್ ಡೆಲಿವರಿ' ಪುಸ್ತಕ ಬಿಡುಗಡೆ ಮಾಡಿ ಅವರು ಮಾತನಾಡಿದರು.
ಈ ಪುಸ್ತಕವನ್ನು ಅಧ್ಯಯನ ಮಾಡುವ ಮೂಲಕ, ಮೋದಿ ರಾಷ್ಟ್ರದ ಏಕತೆ-ಸಮಗ್ರತೆ, ಸಾಮಾಜಿಕ ಸಾಮರಸ್ಯ ಮತ್ತು ರಾಷ್ಟ್ರೀಯವಾದಿ ಚಿಂತನೆಯೊಂದಿಗೆ ಮಾಡಿದ ಕಾರ್ಯಗಳ ಬಗ್ಗೆ ಮಾಹಿತಿ ಪಡೆಯುತ್ತೀರಿ. ದೇಶದ ಹಿತಾಸಕ್ತಿ, ಸಾರ್ವಜನಿಕ ಹಿತಾಸಕ್ತಿ ಜನರ ಚಿಂತನೆಯಲ್ಲಿ ಬದಲಾವಣೆ ಆಗಲಿದೆ ಎಂದರು. ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಬಾಲ್ಯದಿಂದ ದೇಶದ ಪ್ರಧಾನಿಯಾಗುವವರೆಗಿನ ಪ್ರಯಾಣವು ಕಷ್ಟ ಮತ್ತು ಕಠಿಣ ಪರಿಶ್ರಮದಿಂದ ಕೂಡಿದೆ. ಪ್ರತಿಯೊಬ್ಬ ವ್ಯಕ್ತಿಯೂ ನರೇಂದ್ರ ಮೋದಿಯವರ ವ್ಯಕ್ತಿತ್ವ ಮತ್ತು ಜೀವನದಿಂದ ಸ್ಫೂರ್ತಿ ಪಡೆಯಬೇಕು ಎಂದು ರಾಜ್ಯಪಾಲರು ಕರೆ ನೀಡಿದರು.
ಧಾರ್ಮಿಕ, ಆಧ್ಯಾತ್ಮಿಕ ಮತ್ತು ರಾಷ್ಟ್ರೀಯ ಚಿಂತನೆಯ ವ್ಯಕ್ತಿ, ಆತ್ಮಸಾಕ್ಷಿ, ಪ್ರಾಮಾಣಿಕ, ಅಸಾಧಾರಣ ವಾಕ್ಚಾತುರ್ಯ ಹೊಂದಿರುವ, ಸಾಮರಸ್ಯ ವ್ಯಕ್ತಿತ್ವ, ಶಿಸ್ತಿನ ಜೀವನ, ತ್ವರಿತ ನಿರ್ಧಾರ ತೆಗೆದುಕೊಳ್ಳುವ ಸಾಮರ್ಥ್ಯ, ದೂರದೃಷ್ಟಿ, ಸಮರ್ಥ ನಾಯಕತ್ವ, ನಮ್ರತೆ ಮತ್ತು ಹೋರಾಟ, ಸಕಾರಾತ್ಮಕತೆ ಮತ್ತು ಧೈರ್ಯದ ಸಂಕೇತವಾಗಿರುವ ಪ್ರಧಾನ ಮಂತ್ರಿ ನರೇಂದ್ರ ಮೋದಿ ಜಾಗತಿಕ ವೇದಿಕೆಯಲ್ಲಿ ಭಾರತವನ್ನು ಶಕ್ತಿಯುತ ದೇಶವಾಗಿ ಮಾಡಿದವರು.
'ಗುಜರಾತ್ ಮಾದರಿ ಅಭಿವೃದ್ಧಿ' ಎಂಬ ಖ್ಯಾತಿ: 12 ವರ್ಷಗಳ ಕಾಲ ಗುಜರಾತ್ ರಾಜ್ಯದ ಮುಖ್ಯಮಂತ್ರಿಯಾಗಿದ್ದರು. ಅವರ ಪರಿಣಾಮಕಾರಿ ಕಾರ್ಯಶೈಲಿ, ಸೇವಾ ಆಧಾರಿತ ಕೆಲಸಗಳಿಂದಾಗಿ ಅವರು ಗುಜರಾತ್ನಲ್ಲಿ ಮುಖ್ಯಮಂತ್ರಿಯಾಗಿ ಸುದೀರ್ಘ ಕಾಲ ಸೇವೆ ಸಲ್ಲಿಸಿದರು. ಅವರ ಅಭಿವೃದ್ಧಿ ಮಂತ್ರ, ಅವರನ್ನು ಗುಜರಾತ್ ರಾಜ್ಯಕ್ಕೆ ಬ್ರಾಂಡ್ ಅಂಬಾಸಿಡರ್ ಆಗಿ ಮಾಡಿತು ಮತ್ತು ಅವರು ಮಾಡಿದ ಅಭಿವೃದ್ಧಿ ಕಾರ್ಯಗಳು 'ಗುಜರಾತ್ ಮಾದರಿ ಅಭಿವೃದ್ಧಿ' ಎಂದು ಖ್ಯಾತಿ ಗಳಿಸಿವೆ. ಇಂದು ಗುಜರಾತ್ ಮಾದರಿ ಅಭಿವೃದ್ಧಿ ಇತರ ರಾಜ್ಯಗಳಿಗೆ ಮಾದರಿಯಾಗಿದೆ.
1990ರಲ್ಲಿ ಮೋದಿ ಅವರು ಮಧ್ಯಪ್ರದೇಶದ ಉಸ್ತುವಾರಿ ನೋಡಿಕೊಳ್ಳುತ್ತಿದ್ದಾಗಿನಿಂದ ನನಗೆ ಪರಿಚಯವಿದೆ. 2013ರಲ್ಲಿ ನಡೆದ ಸಂಸತ್ತಿನ ಮಂಡಳಿಯ ಸಭೆಯಲ್ಲಿ, 2014 ರ ಲೋಕಸಭೆ ಚುನಾವಣೆಯನ್ನು ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಎದುರಿಸಲಾಗುವುದು ಮತ್ತು ಅವರು ಪ್ರಧಾನಿ ಅಭ್ಯರ್ಥಿ ಎಂದು ನಿರ್ಧರಿಸಲಾಯಿತು. ಈ ನಿರ್ಧಾರದಲ್ಲಿ, ಸಂಸತ್ತಿನ ಮಂಡಳಿಯ ಸದಸ್ಯನಾಗಿ ಭಾಗಿಯಾಗಿದ್ದೆ ಎಂದು ರಾಜ್ಯಪಾಲರು ಸ್ಮರಿಸಿದರು.
ಐತಿಹಾಸಿಕ ನಿರ್ಧಾರ: ಮೋದಿ ಅವರು ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದ ನಂತರ ತ್ರಿವಳಿ ತಲಾಖ್ ರದ್ದತಿ, ವಿಧಿ 370 ರದ್ದತಿ, ಜಿಎಸ್‌ಟಿ ಕಾನೂನು ಜಾರಿ, ನೋಟ್ ಬ್ಯಾನ್ ಇತ್ಯಾದಿ ಸೇರಿದಂತೆ ಹಲವು ಪ್ರಮುಖ ಐತಿಹಾಸಿಕ ನಿರ್ಧಾರಗಳನ್ನು ತೆಗೆದುಕೊಳ್ಳಲಾಗಿದೆ. ದೇಶದ ವಿವಿಧ ಸಮಸ್ಯೆಗಳು, ಶೈಕ್ಷಣಿಕ, ಆರ್ಥಿಕ, ಸಾಮಾಜಿಕ ಇತ್ಯಾದಿಗಳನ್ನು ಪರಿಹರಿಸಲು ಪ್ರಧಾನಿ ಮೋದಿ ಅನೇಕ ಪ್ರಮುಖ ಯೋಜನೆಗಳನ್ನು ಮಾಡಿದರು. ಇದರಿಂದಾಗಿ ದೇಶದ ಪ್ರತಿಯೊಬ್ಬ ವ್ಯಕ್ತಿಯೂ ಪ್ರಯೋಜನ ಪಡೆದಿದ್ದಾರೆ ಎಂದರು.
"ವಸುದೇವ್ ಕುಟುಂಬಕಂ" ಚಿಂತನೆ: ಮೋದಿ ಅವರು ಸಂಪುಟ ಸಭೆಗಳಲ್ಲಿ ವಿಷಯಗಳನ್ನು ಬಹಿರಂಗವಾಗಿ ಚರ್ಚಿಸಿ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಾರೆ. ಅದರ ಫಲಿತಾಂಶ ಇಂದು ಜನರ ಮುಂದಿದೆ. ಮೋದಿಯವರ ನಾಯಕತ್ವದಲ್ಲಿ, ಕೋವಿಡ್ ಸಾಂಕ್ರಾಮಿಕ ರೋಗವನ್ನು ನಿಯಂತ್ರಿಸಲು ಲಸಿಕೆ ತಯಾರಿಸುವ ಮೂಲಕ ಮತ್ತು ದೇಶ ಮತ್ತು ವಿದೇಶಗಳಲ್ಲಿ ಬಳಕೆಗೆ ಲಸಿಕೆಗಳನ್ನು ಲಭ್ಯವಾಗುವಂತೆ ಮಾಡುವ ಮೂಲಕ ಭಾರತವು "ವಸುದೇವ್ ಕುಟುಂಬಕಂ" ಚಿಂತನೆಯಲ್ಲಿ ಯಶಸ್ವಿಯಾಗಿದೆ ಎಂದು ಹೇಳಿದರು.
10 ಗಿನ್ನೆಸ್ ದಾಖಲೆ: ಮೋದಿ ನೇತೃತ್ವದಲ್ಲಿ ರಚಿತವಾದ ಕೇಂದ್ರ ಸರ್ಕಾರದಲ್ಲಿ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವ ಸ್ಥಾನ ನೀಡಲಾಯಿತು. ಅವರ ಮಾರ್ಗದರ್ಶನ ಮತ್ತು ದಕ್ಷ ನಾಯಕತ್ವದಲ್ಲಿ, ದುರ್ಬಲ ವರ್ಗಗಳು, ಹಿರಿಯರು, ತೃತೀಯ ಲಿಂಗಿಗಳು ಮತ್ತು ದಿವ್ಯಾಂಗರ ಸಬಲೀಕರಣಕ್ಕಾಗಿ ನಾನು 7 ವರ್ಷಗಳ ಕಾಲ ಅನೇಕ ಮಹತ್ವದ ಕೆಲಸಗಳನ್ನು ಮಾಡಿದ್ದೇನೆ ಮತ್ತು ಆ ಸಮಯದಲ್ಲಿ 10 ಗಿನ್ನೆಸ್ ದಾಖಲೆಗಳನ್ನು ಸಚಿವಾಲಯ ಮಾಡಿದೆ ಎಂದು ಮಾಹಿತಿ ನೀಡಿದರು.
ಇದನ್ನೂ ಓದಿ: ಪಠ್ಯ ಪರಿಷ್ಕರಣೆ ವಿವಾದಕ್ಕೆ ತೆರೆ: ಲೋಪ ತಿದ್ದುಪಡಿ ಮಾಡಲು ಸರ್ಕಾರ ಆದೇಶ