ಬೆಂಗಳೂರು: ದಿವಂಗತ ಅನಂತ್ ಕುಮಾರ್ ಆಶಯದಂತೆ ಬೆಂಗಳೂರು ವಿಶ್ವವಿದ್ಯಾಲಯದ ನಡುವೆ ಹರಿಯುತ್ತಿರುವ ವೃಷಭಾವತಿ ನದಿ ನೀರು ಶುದ್ದೀಕರಣಕ್ಕೆ ಅಗತ್ಯ ಯೋಜನೆ ರೂಪಿಸುವಂತೆ ಮಾಲಿನ್ಯ ನಿಯಂತ್ರಣ ಮಂಡಳಿಯ ಅಧಿಕಾರಿಗಳಿಗೆ ಸೂಚಿಸಿರುವುದಾಗಿ ಸಚಿವ ಸಿ.ಸಿ ಪಾಟೀಲ್ ತಿಳಿಸಿದರು.
ವೃಷಭಾವತಿ ನದಿಯ ಶುದ್ದೀಕರಣಕ್ಕೆ ಅದಮ್ಯ ಚೇತನ ಮುಖ್ಯಸ್ಥೆ ಡಾ. ತೇಜಸ್ವಿನಿ ಅನಂತ್ ಕುಮಾರ್ ಕೈಜೋಡಿಸುವ ಭರವಸೆ ನೀಡಿದ್ದು, ಅವರ ಸಹಕಾರದಲ್ಲಿ ಶುದ್ದೀಕರಣ ಕಾರ್ಯದ ಯೋಜನೆ ಶೀಘ್ರವೇ ರೂಪಿಸಲಾಗುವುದು ಎಂದರು.
ಬೆಂಗಳೂರು ವಿಶ್ವವಿದ್ಯಾಲಯದ ಜ್ಞಾನಭಾರತಿ ಕ್ಯಾಂಪಸ್ನಲ್ಲಿಂದು ಬೆಂಗಳೂರು ವಿಶ್ವವಿದ್ಯಾಲಯದ ಸಹಯೋಗದಲ್ಲಿ ಅದಮ್ಯ ಚೇತನ ಸಂಸ್ಥೆ ಕಾರ್ಯಕ್ರಮ ಆಯೋಜಿಸಿತ್ತು. ಈ ವೇಳೆ ಗಿಡ ನೆಟ್ಟು ನೀರೆರೆದು ಮಾತನಾಡಿದ ಸಚಿವ ಪಾಟೀಲ್, ವೃಷಭಾವತಿ ನದಿಯ ಶುದ್ದೀಕರಣದ ಬಗ್ಗೆ ಡಾ. ತೇಜಸ್ವಿನಿ ಅನಂತ್ ಕುಮಾರ್ ಹಾಗೂ ಕುಲಪತಿ ಕೆ. ಆರ್. ವೇಣುಗೋಪಾಲ್ ಚರ್ಚೆ ನಡೆಸಿದ್ದಾರೆ. ಈ ಬಗ್ಗೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ ಎಂದು ಹೇಳಿದರು.
ಕಳೆದ 201 ವಾರಗಳಿಂದ ಗಿಡ ನೆಡುವ ಕಾರ್ಯವನ್ನು ಸತತವಾಗಿ ನಡೆಸಿಕೊಂಡು ಬರುತ್ತಿರುವ ಡಾ.ತೇಜಸ್ವಿನಿ ಅನಂತಕುಮಾರ್ ಅವರು, ಅರಣ್ಯ, ಪರಿಸರ ಮತ್ತು ಜೀವಶಾಸ್ತ್ರ ಇಲಾಖೆ ಮಾಡುವ ಕೆಲಸವನ್ನು ಮಾಡುತ್ತಿದ್ದಾರೆ. ಈ ಇಲಾಖೆಯ ಸಚಿವ ಆಗಿರುವವರೆಗೂ ಸರ್ಕಾರ ಹಾಗೂ ಇಲಾಖೆಯಿಂದ ಬೇಕಾಗಿರುವ ಎಲ್ಲಾ ರೀತಿಯ ಸಹಕಾರ ನೀಡಲಿದ್ದೇನೆ ಎನ್ನುವ ಭರವಸೆ ನೀಡಿದ್ರು.
ಅದಮ್ಯ ಚೇತನ ಮುಖ್ಯಸ್ಥೆ ಡಾ. ತೇಜಸ್ವಿನಿ ಅನಂತಕುಮಾರ್ ಮಾತನಾಡಿ, ಅನಂತಕುಮಾರ್ ಅವರು 2016 ಜನವರಿ 3 ರಂದು ಚಾಲನೆ ನೀಡಿದ ಕಾರ್ಯಕ್ರಮ ಇದಾಗಿದೆ. ಬೆಂಗಳೂರು ನಗರವನ್ನು ಮತ್ತಷ್ಟು ಹಸಿರೀಕರಣ ಮಾಡುವ ಕನಸನ್ನು ಅವರು ಕಂಡಿದ್ದರು. ಅವರ ಕನಸನ್ನು ಮುಂದುವರೆಸಿಕೊಂಡು ಹೋಗುತ್ತಿದ್ದೇವೆ. ವೃಷಭಾವತಿ ನದಿಯ ಬಗ್ಗೆ ಅನಂತಕುಮಾರ್ ಪ್ರಧಾನಿ ನರೇಂದ್ರ ಮೋದಿ ಭಗೀರಥರ ಮಾದರಿಯಲ್ಲಿ ಗಂಗೆಯನ್ನು ಸ್ವಚ್ಚ ಮಾಡಿದಾಗ, ನಾವು ವೃಷಭಾವತಿಯನ್ನು ಯಾಕೆ ಸ್ವಚ್ಚ ಮಾಡಬಾರದು ಎನ್ನುವ ಕನಸನ್ನು ಹೊಂದಿದ್ದರು. ಈ ಬಗ್ಗೆ ಸಚಿವರೊಂದಿಗೆ ಚರ್ಚಿಸಿದ್ದು, ಇದರ ಶುದ್ದೀಕರಣಕ್ಕೆ ಅದಮ್ಯ ಚೇತನ ಸಂಸ್ಥೆ ಸಂತಸದಿಂದ ಕೈಜೊಡಿಸಲಿದೆ ಎಂದು ಹೇಳಿದರು.