ಬೆಂಗಳೂರು : ಮಾಜಿ ಸಚಿವ ಹಾಗೂ ರಾಮನಗರ ಜಿಲ್ಲೆ ಪ್ರಮುಖ ರಾಜಕೀಯ ನಾಯಕ ಪಿಜಿಆರ್ ಸಿಂಧ್ಯಾ ಅವರು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರನ್ನು ಭೇಟಿಯಾಗಿ ಸಮಾಲೋಚನೆ ನಡೆಸಿದರು.
ಆರು ಬಾರಿಯ ಶಾಸಕ, ಮಾಜಿ ಸಚಿವ ಪಿ.ಜಿ.ಆರ್. ಸಿಂಧ್ಯಾ ಜಾತ್ಯಾತೀತ ಜನತಾದಳ (ಜೆಡಿಎಸ್) ಪಕ್ಷ ತೊರೆದು 2021ರ ಮಾ.31ರಂದು ಕಾಂಗ್ರೆಸ್‌ಗೆ ಸೇರ್ಪಡೆಯಾಗಿದ್ದರು.
1983 ಹಾಗೂ 85ರಲ್ಲಿ ಕನಕಪುರದಲ್ಲಿ ಜನತಾ ಪಕ್ಷದಿಂದ ಗೆದ್ದಿದ್ದ ಅವರು, 89 ಹಾಗೂ 94ರಲ್ಲಿ ಜನತಾದಳದಿಂದ ಮತ್ತು 1999ರಲ್ಲಿ ಜೆಡಿಯುನಿಂದ ಹಾಗೂ 2004ರಲ್ಲಿ ಜೆಡಿಎಸ್‌ನಿಂದ ಸ್ಪರ್ಧಿಸಿ ಗೆದ್ದಿದ್ದರು.
2008ರಲ್ಲಿ ಇಲ್ಲಿಗೆ ಸಾತನೂರಿನಿಂದ ಡಿಕೆ ಶಿವಕುಮಾರ್ ಬರುತ್ತಿದ್ದಂತೆ ಪಿಜಿಆರ್ ಸಿಂಧ್ಯಾ ನೇಪಥ್ಯಕ್ಕೆ ಸರಿದಿದ್ದರು. ಮಧ್ಯದಲ್ಲೊಮ್ಮೆ ಜೆಡಿಎಸ್ ತೊರೆದು ಬಹುಜನ ಸಮಾಜವಾದಿ ಪಕ್ಷವನ್ನೂ ಸೇರಿದ್ದರು. ನಂತರ ಪುನಃ ಜೆಡಿಎಸ್‌ಗೆ ಮರಳಿದ್ದ ಅವರು, 2013ರ ಚುನಾವಣೆಯಲ್ಲಿ ಇದೇ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ವಿರುದ್ಧ ಸ್ಪರ್ಧಿಸಿ ಪರಾಭವಗೊಂಡಿದ್ದರು.
2017ರಲ್ಲಿ ಅವರನ್ನು ಜೆಡಿಎಸ್ ಪಕ್ಷ ರಾಷ್ಟ್ರೀಯ ಕಾರ್ಯಾಧ್ಯಕ್ಷರನ್ನಾಗಿ ನೇಮಕ ಮಾಡಿತ್ತು. ಆದರೆ, ಅಂತಿಮವಾಗಿ ಅವರು ಜೆಡಿಎಸ್ ತೊರೆದು ಕಾಂಗ್ರೆಸ್ ಪಕ್ಷ ಸೇರ್ಪಡೆಯಾಗಿದ್ದು, ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ನೇತೃತ್ವದ ರಾಷ್ಟ್ರೀಯ ಪಕ್ಷಕ್ಕೆ ಬೆಂಬಲವಾಗಿ ನಿಂತಿದ್ದಾರೆ.
ಇಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರನ್ನು ಸಿಂಧ್ಯಾ ಅವರು ಭೇಟಿಯಾಗಿ ನಾಳೆ ರಾಮನಗರದಲ್ಲಿ ಆರಂಭವಾಗುವ ಪಾದಯಾತ್ರೆ ಹಾಗೂ ಮುಂಬರುವ ದಿನಗಳಲ್ಲಿ ಜಿಲ್ಲೆಯಲ್ಲಿ ಕೈಗೊಳ್ಳಬಹುದಾದ ರಾಜಕೀಯ ಚಟುವಟಿಕೆಗಳ ಕುರಿತು ಚರ್ಚಿಸಿದ್ದಾರೆ.
ಜಿಲ್ಲೆಯ ನಾಲ್ಕು ವಿಧಾನಸಭಾ ಕ್ಷೇತ್ರಗಳ ಪೈಕಿ ಹೆಚ್ಚಿನ ಸ್ಥಾನವನ್ನು ಗೆದ್ದುಕೊಳ್ಳುವ ನಿಟ್ಟಿನಲ್ಲಿ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಕಾರ್ಯತಂತ್ರ ರೂಪಿಸುತ್ತಿದ್ದು, ಬಹುವರ್ಷಗಳ ಜಿಲ್ಲಾ ರಾಜಕೀಯ ಅನುಭವ ಹೊಂದಿರುವ ಸಿಂಧ್ಯಾ ಸಹ ತಮ್ಮ ಅನುಭವವನ್ನು ಡಿಕೆಶಿಗೆ ತಿಳಿಸಿದ್ದಾರೆ ಎಂದು ತಿಳಿದು ಬಂದಿದೆ.
ಓದಿ : ದಾಂಪತ್ಯಕ್ಕಿಂತ ದೇಶ ದೊಡ್ಡದು.. ಮದುವೆಯಾದ ಮರುದಿನವೇ ಗನ್ ಹಿಡಿದು ಉಕ್ರೇನ್ ರಕ್ಷಣೆಗೆ ನಿಂತ ನವಜೋಡಿ!