ಬೆಂಗಳೂರು: ಮಹಾನಗರದಲ್ಲಿ ಕಾಂಗ್ರೆಸ್ ಪಕ್ಷದ ಎರಡನೇ ದಿನದ ಪಾದಯಾತ್ರೆ ಆರಂಭಗೊಂಡಿದ್ದು, ಪಾದಯಾತ್ರೆಗೆ ಬೆಂಬಲ ಸಿಕ್ಕಿದೆ. ಬಿಟಿಎಂ ಲೇಔಟ್ ಅದ್ವೈತ ಪೆಟ್ರೋಲ್ ಬಂಕ್ನಿಂದ ಆರಂಭವಾಗಿರುವ ಪಾದಯಾತ್ರೆ ಸಂಜೆ ಅರಮನೆ ಮೈದಾನ ತಲುಪಲಿದೆ. ಮಾರುತಿನಗರ, ಹೊಸೂರು ಮುಖ್ಯರಸ್ತೆ, ಫೋರಂ ಮಾಲ್, ಪಾಸ್‌ಪೋರ್ಟ್ ಆಫೀಸ್, ಇನ್‌ಫೆಂಟ್ ಜೀಸಸ್ ರಸ್ತೆ, ಜಸ್ಮಾ ದೇವಿ ಭವನ (ನಗರಪಾಲಿಕೆ ಮೈದಾನ), ಹಾಸ್ಮ್ಯಾಟ್ ಆಸ್ಪತ್ರೆ, ಟ್ರಿನಿಟಿ ಸರ್ಕಲ್, ಗುರುನಾನಕ್ ಮಂದಿರ್, ತಿರುವಳ್ಳುವರ್ ಪ್ರತಿಮೆ, ಕೋಲ್ಸ್ ಪಾರ್ಕ್, ನಂದಿದುರ್ಗ ರಸ್ತೆ, ಜೆ.ಸಿ. ನಗರ ಪೊಲೀಸ್ ಠಾಣೆ, ಮುನಿರೆಡ್ಡಿ ಪಾಳ್ಯ ಮಾರ್ಗವಾಗಿ ಟಿ.ವಿ.ಟವರ್, ಮೇಖ್ರಿ ಸರ್ಕಲ್ ಮೂಲಕ ಅರಮನೆ ಮೈದಾನ ತಲುಪಲಿದೆ.
ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್, ವಿಧಾನಪರಿಷತ್ ಪ್ರತಿಪಕ್ಷ ನಾಯಕ ಬಿಕೆ ಹರಿಪ್ರಸಾದ್, ಮಾಜಿ ಸಚಿವರಾದ ಯು ಟಿ ಖಾದರ್, ಪ್ರಿಯಾಂಕ ಖರ್ಗೆ, ಕೆಪಿಸಿಸಿ ಕಾರ್ಯಾಧ್ಯಕ್ಷರಾದ ರಾಮಲಿಂಗಾರೆಡ್ಡಿ, ಸಲೀಂ ಅಹಮ್ಮದ್ ಸೇರಿ ಕಾಂಗ್ರೆಸ್ ನಾಯಕರು ಪಾದಯಾತ್ರೆಯಲ್ಲಿ ಭಾಗಿಯಾಗಿದ್ದಾರೆ.
ಇದನ್ನೂ ಓದಿ: ನಾಳಿನ ಪಾದಯಾತ್ರೆಯಲ್ಲಿ ಸರ್ವರಿಗೂ ಹೆಜ್ಜೆ ಹಾಕುವ ಅವಕಾಶ: ಡಿಕೆಶಿ
ಮಾರ್ಗದುದ್ದಕ್ಕೂ ಸಾರ್ವಜನಿಕರಿಂದ ಭವ್ಯ ಸ್ವಾಗತ ಕೋರಲಾಗಿದೆ. ನಾಯಕರಿಗೆ ಬೃಹತ್ ಹಾರ ಹಾಕಿ ಹಾಗೂ ಹೂವು ಎರಚುವ ಮೂಲಕ ಕಾಂಗ್ರೆಸ್ ನಾಯಕರ ಪಾದಯಾತ್ರೆಗೆ ಬೆಂಬಲ ವ್ಯಕ್ತಪಡಿಸಿದ್ದಾರೆ. ಮಾರ್ಗದುದ್ದಕ್ಕೂ ಡಿಕೆ ಶಿವಕುಮಾರ್ ಅಭಿಮಾನಿಗಳು ಘೋಷಣೆ ಕೂಗುತ್ತಿದ್ದಾರೆ. ಕಾಂಗ್ರೆಸ್ ಪಾದಯಾತ್ರೆ ಬೆಂಗಳೂರು ನಗರದಲ್ಲಿ ಎರಡನೇ ದಿನವನ್ನು ಉತ್ತಮವಾಗಿ ಆರಂಭಿಸಿದ್ದು, ಇಂದು ಸಹ ಸಾಂಸ್ಕೃತಿಕ ಕಲಾತಂಡಗಳು ಪಾದಯಾತ್ರೆಯ ಮೆರುಗುವ ಹೆಚ್ಚಿಸಿವೆ. ಸಂಚಾರ ದಟ್ಟಣೆ ಸಹ ಸಾಕಷ್ಟು ಕಿರಿಕಿರಿ ಉಂಟು ಮಾಡಿದ್ದು, ಪಾದಯಾತ್ರೆ ಸಾಗುವ ಮಾರ್ಗದ ಇಕ್ಕೆಲಗಳಲ್ಲಿ ಜನರು ಹೆಚ್ಚಿನ ಸಂಖ್ಯೆಯಲ್ಲಿ ಸೇರಿದ್ದಾರೆ.