ಬೆಂಗಳೂರು: 'ಹೇ.. ಅಲ್ಲಿ ನೋಡೋ ನಮ್ಮ ಏರಿಯಾಗೆ ಹೋಗೋ ಬಸ್ ಬಂತು, ಓಡು ಓಡು ಸೀಟು ಹಿಡಿ..ಈ ಸೀಟಿಗೆ ಬ್ಯಾಗ್ ಹಾಕು, ತಳ್ಳು ನುಗ್ಗಿ ಹತ್ಕೋ ಬೇಗ..'
ಈ ರೀತಿಯ ಸನ್ನಿವೇಶ ಮೆಜೆಸ್ಟಿಕ್ನ ಬಿಎಂಟಿಸಿ ನಿಲ್ದಾಣದಲ್ಲಿ ಕಂಡು ಬಂತು. ಬಸ್ಸಿಲ್ಲದೆ ಪ್ರಯಾಣಿಕರ ಪರದಾಟ ಒಂದೆಡೆಯಾದರೆ, ಮತ್ತೊಂದೆಡೆ ಜನರನ್ನು ನಿಯಂತ್ರಿಸಲಾಗದೆ ಬಿಎಂಟಿಸಿ ಡ್ರೈವರ್, ಕಂಡಕ್ಟರ್ಗಳ ಪೀಕಲಾಟ ಕಂಡು ಬಂತು.
ರಾಜಧಾನಿ ಬೆಂಗಳೂರಿನಲ್ಲಿ ಇಂದಿನಿಂದ ಬಿಎಂಟಿಸಿ ಬಸ್ ಸಂಚಾರ ಆರಂಭವಾಗಿದ್ದು, ಇದೇ ಈಗ ಕೊರೊನಾ ಹಾಟ್ ಸ್ಪಾಟ್ ಆಗಿ ಪರಿವರ್ತನೆ ಆಗ್ತಿದೆಯೇನೋ ಎಂಬಂತೆ ಭಾಸವಾಗುತ್ತಿದೆ. ಬೆರಳೆಣಿಕೆಯಷ್ಟು ಬಸ್ಸುಗಳು ಮಾತ್ರ ಕಾರ್ಯಾಚರಣೆ ನಡೆಸುತ್ತಿದ್ದು, ಇತ್ತ ಬಸ್ ಆಗಮಿಸುತ್ತಿದ್ದಂತೆ ಪ್ರಯಾಣಿಕರು ಮುಗಿಬೀಳುತ್ತಿದ್ದಾರೆ.
ಕೋವಿಡ್ನ ಕಡ್ಡಾಯ ಮಾರ್ಗಸೂಚಿಗಳಾದ ಸಾಮಾಜಿಕ ಅಂತರ, ಫೇಸ್ ಮಾಸ್ಕ್ ನಿಯಮಗಳನ್ನು ಜನರು ಗಾಳಿಗೆ ತೂರಿದ್ದಾರೆ. ಇತ್ತ ಬಸ್ ನಿರ್ವಾಹಕರು ಜನದಟ್ಟಣೆ ನಿಯಂತ್ರಿಸಲಾಗದೆ ಪ್ರಯಾಣಿಕರ ಜೊತೆಗೆ ವಾಗ್ವಾದ ನಡೆಸುತ್ತಿದ್ದಾರೆ. ಬಸ್ಸಿನೊಳಗೆ ಶೇ.50 ರಷ್ಟು ಪ್ರಯಾಣಿಕರಿಗೆ ಅವಕಾಶವಿದ್ದು ದೈಹಿಕ ಅಂತರ ಕಾಪಾಡಿಕೊಳ್ಳಬೇಕಿತ್ತು. ಆದರೆ ಇದ್ಯಾವುದೂ ಇಲ್ಲಿ ಕಂಡು ಬರಲಿಲ್ಲ.
ನಿತ್ಯ ಲಕ್ಷಾಂತರ ಮಂದಿ ಸಂಚಾರ ಮಾಡುವ ಬಿಎಂಟಿಸಿ ಬಸ್ಸುಗಳಲ್ಲಿ ಥರ್ಮಲ್ ಸ್ಕ್ಯಾನಿಂಗ್ ಕೂಡ ಇಲ್ಲ. ಹಾಗಾಗಿ ಕೊರೊನಾ ಮೂರನೇ ಅಲೆಗೆ ಎಲ್ಲ ದಾರಿಯನ್ನು ಮಾಡಿಕೊಡುತ್ತಿದೆ ಅನ್ಲಾಕ್. ಮೂರನೇ ಅಲೆ ಭೀತಿ ಇದ್ರೂ ಜನರು, ಅಧಿಕಾರಗಳಿಗೆ ಇಷ್ಟೊಂದು ನಿರ್ಲಕ್ಷ್ಯ ಏಕೆ? ಎಂಬುದು ತಿಳಿಯುತ್ತಿಲ್ಲ.
ಇತ್ತ ಬಸ್ ಬಿಟ್ಟು ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲು ಬಿಎಂಟಿಸಿ ವಿಫಲವಾಗಿದೆ. ಬೆಂಗಳೂರಿನಾದ್ಯಂತ 9 ಗಂಟೆವರೆಗೆ 1086 ಬಸ್ಸುಗಳು ಸಂಚರಿಸಿವೆ. ಇನ್ನು ಸರಿಯಾದ ಬಸ್ಸುಗಳಿಲ್ಲದೆ ನಿಲ್ದಾಣದಲ್ಲೇ ನಿಂತ ಪ್ರಯಾಣಿಕರು ಶಪಿಸುತ್ತಿದ್ದಾರೆ.
ಇದನ್ನೂ ಓದಿ: ಅನ್ಲಾಕ್ ದುರುಪಯೋಗ, ಕೊರೊನಾ ನಿರ್ಲಕ್ಷ್ಯ ಬೇಡ: ಸಿಎಂ ಬಿಎಸ್ವೈ