ಬೆಂಗಳೂರು: ದೀಪಾವಳಿ ಹಬ್ಬಕ್ಕೆ ವಿಶೇಷ ಮೆರುಗು ನೀಡೋದು ಹಣತೆಗಳಾದರೂ, ಪಟಾಕಿ ಸದ್ದಿಲ್ಲದಿದ್ದರೆ ಹಬ್ಬ ಕಳೆಗಟ್ಟಲ್ಲ. ಆದರೆ ಈ ಬಾರಿ ಪಟಾಕಿ ಬೆಲೆ ದುಬಾರಿಯಾಗಿದೆ. ಆದರೂ ಗ್ರಾಹಕರು ಮಾತ್ರ ಖರೀದಿಯಲ್ಲಿ ಹಿಂದೆ ಬಿದ್ದಿಲ್ಲ.
ಬೆಂಗಳೂರಿನಲ್ಲಿ ಹಸಿರು ಪಟಾಕಿಗೆ ಮಾತ್ರ ಸರ್ಕಾರ ಅನುಮತಿ ನೀಡಿದ್ದರೂ ವ್ಯಾಪಾರಿಗಳು ಮಾತ್ರ ಎಲ್ಲ ಬಗೆಯ ಪಟಾಕಿಗಳನ್ನು ಮಾರಾಟ ಮಾಡುತ್ತಿದ್ದಾರೆ. ರಾಜಾಜಿನಗರದ ರಾಮಮಂದಿರ ಮೈದಾನದಲ್ಲಿ ಹಾಕಲಾಗಿರುವ 25 ಮಳಿಗೆಗಳಲ್ಲೂ ಗ್ರಾಹಕರು ಯಥೇಚ್ಛವಾಗಿ ಪಟಾಕಿ ಕೊಂಡು ದೀಪಾವಳಿ ಆಚರಿಸಿದರು.
ಈ ಮಧ್ಯೆ ಮಳೆ ದೀಪಾವಳಿ ಸಂಭ್ರಮಕ್ಕೆ ಅಡ್ಡಿ ಮಾಡುತ್ತಿದೆ. ಈ ವರ್ಷ ಮಲ್ಲೇಶ್ವರಂ ಮೈದಾನದಲ್ಲಿ ಪಟಾಕಿ ಮಾರಾಟ ನಡೆಯುತ್ತಿಲ್ಲ. ಹೀಗಾಗಿ ಸುತ್ತಲಿನ ಪ್ರದೇಶದ ಜನರು ರಾಜಾಜಿನಗರ ಮೈದಾನಕ್ಕೆ ಬಂದು ಖರೀದಿಯಲ್ಲಿ ತೊಡಗಿದ್ದಾರೆ.
ವ್ಯಾಪಾರಿಗಳಿಗೆ ತಲೆಬಿಸಿ:
ಈ ಬಾರಿ ಗ್ರಾಹಕರಿಂದ ಬೇಡಿಕೆ ಇದ್ದರೂ, ಪೂರೈಕೆ ಇಲ್ಲದ ಕಾರಣ ಹೆಚ್ಚಿನ ವ್ಯಾಪಾರಿಗಳಿಗೆ ತಲೆಬಿಸಿಯಾಗಿದೆ. ಕಳೆದ ಬಾರಿ ಕೋವಿಡ್ ಇದ್ದ ಹಿನ್ನೆಲೆಯಲ್ಲಿ ಪಟಾಕಿ ಮಾರಾಟಕ್ಕೆ ಅಂತಿಮ ಕ್ಷಣದವರೆಗೂ ಅನುಮತಿ ನೀಡಿರಲಿಲ್ಲ. ಈ ಬಾರಿಯೂ ಅದೇ ಅನುಮಾನದಿಂದ ಪಟಾಕಿಗಳಿಗೆ ಮೊದಲೇ ಆರ್ಡರ್ ನೀಡಿರಲಿಲ್ಲ. ಇದರಿಂದ ಪೂರೈಕೆಯಲ್ಲಿ ಶೇ 30-40ರಷ್ಟು ವ್ಯತ್ಯಯವಾಗಿದೆ ಎಂದು ವ್ಯಾಪಾರಿಗಳು ತಿಳಿಸಿದರು. ಜೊತೆಗೆ ಕಚ್ಛಾವಸ್ತುಗಳ ಬೆಲೆಯೇರಿಕೆ ಆಗಿರುವುದರಿಂದ ಪಟಾಕಿಗಳ ಬೆಲೆಯಲ್ಲೂ ಏರಿಕೆ ಕಂಡುಬಂದಿದೆ.
ವ್ಯಾಪಾರಿ ವೆಂಕಟೇಶ್ ಮಾತನಾಡಿ, ಮಳಿಗೆ ಹಾಕಬಹುದಾ, ಇಲ್ಲವಾ ಎಂಬ ಗೊಂದಲ ಇತ್ತು. ಕಾನೂನುಬದ್ಧವಾಗಿ ಪಟಾಕಿಗಳು ಸಿಗೋದು ತಡವಾಯ್ತು. ಇನ್ನು ಬಿಬಿಎಂಪಿ ಹಾಗೂ ಪೊಲೀಸ್ ಇಲಾಖೆಯಿಂದ ಪರವಾನಗಿ ಕೂಡ ತಡವಾಗಿ ಸಿಕ್ಕಿದೆ. ಅಲ್ಲದೆ ಪಟಾಕಿ ಮಾರಾಟಕ್ಕೂ ಕೇವಲ ಮೂರೇ ದಿನ ಅವಕಾಶ ಸಿಕ್ಕಿರುವುದರಿಂದ ಹೆಚ್ಚು ಮಾರಾಟ ಮಾಡಲು ಸಾಧ್ಯವಾಗುತ್ತಿಲ್ಲ. ಇದರ ಮಧ್ಯೆ ಮಳೆಯೂ ಅಡ್ಡಿ ಮಾಡುತ್ತಿರುವುದರಿಂದ ವ್ಯಾಪಾರ ಅಷ್ಟಕಷ್ಟೆ ಇದೆ ಎನ್ನುತ್ತಾರೆ.
ಪಟಾಕಿ ಕೊಳ್ಳಲು ಬಂದಿದ್ದ ಬಾಲಕ ದೀಕ್ಷಿತ್ ಮಾತನಾಡಿ, ಪಟಾಕಿ ದರ ಜಾಸ್ತಿ ಇದೆ. ಈ ಕಾರಣಕ್ಕಾಗಿ ಸಣ್ಣಪುಟ್ಟ ಪಟಾಕಿಗಳನ್ನು ಹಚ್ಚಿ ದೀಪಾವಳಿ ಆಚರಿಸಿದ್ದೇವೆ ಎಂದರು.
ಹಸಿರು ಪಟಾಕಿ ನಿಯಮ ಪಾಲನೆಯಾಗಿಲ್ಲ:
ಬೆಂಗಳೂರಲ್ಲಿ ಹಸಿರು ಪಟಾಕಿಗಳ ಮಾರಾಟಕ್ಕೆ ಮಾತ್ರ ಅನುಮತಿ ಇದ್ದರೂ, ಈ ನಿಯಮವನ್ನು ಮಾರಾಟಗಾರರು ಪಾಲನೆ ಮಾಡುತ್ತಿಲ್ಲ. ಹೆಚ್ಚು ಶಬ್ದ, ಹೊಗೆಸೂಸುವ ಮಾಲಿನ್ಯ ಪಟಾಕಿಗಳನ್ನೂ ಮಾರಾಟ ಮಾಡಲಾಗುತ್ತಿದೆ. ಗ್ರಾಹಕರೂ ಈ ಪಟಾಕಿಗಳಿಗೆ ಹೆಚ್ಚಿನ ಮೊರೆ ಹೋಗುತ್ತಿದ್ದಾರೆ.