ಬೆಂಗಳೂರು : ನಿಗೂಢ ಸ್ಫೋಟಕ್ಕೆ ಮನೆಯಲ್ಲಿದ್ದ ಮೂವರು ಗಂಭೀರವಾಗಿ ಗಾಯಗೊಂಡ ಘಟನೆ ಯಲಚೇನಹಳ್ಳಿಯಲ್ಲಿ ಇಂದು ಬೆಳ್ಳಂಬೆಳಗ್ಗೆ ಸಂಭವಿಸಿದೆ. ಬಿಹಾರ ಮೂಲದ ಗೌತಮ್, ಮಂದಿಲ್ ಹಾಗೂ ಸೋನಿ ಎಂಬುವರು ಗಾಯಗೊಂಡಿದ್ದಾರೆ.
ಬೆಳಗ್ಗೆ ಸಂಭವಿಸಿದ ಸ್ಫೋಟಕ್ಕೆ ಮನೆಯಲ್ಲಿದ್ದ ವಸ್ತುಗಳು ಚೆಲ್ಲಾಪಿಲ್ಲಿಯಾಗಿದ್ದು, ಒಳಗಿದ್ದ ಮೂವರೂ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಗ್ಯಾಸ್ ಸಿಲಿಂಡರ್ ಸೋರಿಕೆಯಿಂದ ಸ್ಫೋಟ ಸಂಭವಿಸಿದೆ ಎಂದು ಅಂದಾಜಿಸಲಾಗಿತ್ತಾದರೂ ಪರಿಶೀಲನೆ ವೇಳೆ ಸಿಲಿಂಡರ್ ಸ್ಫೋಟಗೊಂಡಿಲ್ಲ ಎಂದು ತಿಳಿದು ಬಂದಿದೆ. ಸ್ಥಳಕ್ಕೆ ಭೇಟಿ ನೀಡಿರುವ ಕುಮಾರಸ್ವಾಮಿ ಲೇಔಟ್ ಪೊಲೀಸರು ಪರಿಶೀಲನೆ ನಡೆಸ್ತಿದ್ದಾರೆ.
ಒಂದು ವರ್ಷದ ಹಿಂದೆ ಇಬ್ಬರು ಯುವಕರಿಗೆ ಮನೆ ಬಾಡಿಗೆ ಕೊಡಲಾಗಿತ್ತು. ಆ ಯುವಕರು ಬೇರೆ ರಾಜ್ಯದವರಾಗಿದ್ದು, ಸೆಕ್ಯೂರಿಟಿ ಗಾರ್ಡ್ ಆಗಿ ಕೆಲಸ ಮಾಡುತ್ತಿದ್ದಾರೆ. ಎದುರುಗಡೆ ಇರುವ ಮಹಿಳೆ ನಮ್ಮ ಮನೆಯ ಬಳಿ ಬಟ್ಟೆ ಒಣ ಹಾಕಲು ಬಂದಿದ್ದರು. ಬೆಳಗ್ಗೆ 7.30 ಕ್ಕೆ ನಾನು ನೀರಿನ ಮೋಟಾರು ಹಾಕಲು ಬಂದಾಗ ಎಲ್ಲವೂ ಸರಿಯಾಗಿತ್ತು. ಬಳಿಕ ನಾನು ಸ್ನಾನಕ್ಕೆ ತೆರಳಿದ್ದಾಗ ಸ್ಫೋಟ ಸಂಭವಿಸಿದೆ. ಜೋರಾದ ಶಬ್ದಕ್ಕೆ ಮನೆಯ ಕಿಟಕಿ ಗಾಜುಗಳು ಪುಡಿ-ಪುಡಿಯಾಗಿವೆ. ಮಹಿಳೆಗೆ ಗಾಯವಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ ಎಂದು ಮನೆ ಮಾಲೀಕ ವೆಂಕಟಸ್ವಾಮಿ ತಿಳಿಸಿದ್ದಾರೆ.
ಓದಿ: ಆಂಧ್ರಪ್ರದೇಶ: 100ಕ್ಕೂ ಹೆಚ್ಚು ಗ್ಯಾಸ್ ಸಿಲಿಂಡರ್ಗಳು ಸ್ಫೋಟ, ಸುತ್ತಮುತ್ತಲ ನಿವಾಸಿಗಳ ಸ್ಥಳಾಂತರ