ಬೆಂಗಳೂರು: ರೋಹಿತ್ ಚಕ್ರತೀರ್ಥ ನೇತೃತ್ವದ ಪಠ್ಯ ಪುಸ್ತಕ ರಚನಾ ಸಮಿತಿ ರಚಿಸಿದ ಪಠ್ಯಕ್ರಮದಲ್ಲಿ ರಾಜ್ಯ ಸರ್ಕಾರ ಕೆಲ ಬದಲಾವಣೆ ಮಾಡಿ ಆದೇಶ ಹೊರಡಿಸಿದೆ. ಆದರೆ, ಇದೀಗ ಈ ವಿಚಾರವಾಗಿ ವ್ಯಾಪಕ ಟೀಕೆ ಹಾಗೂ ಆಕ್ರೋಶ ವ್ಯಕ್ತವಾಗುತ್ತಿದೆ.
ಶಾಲೆ ಆರಂಭವಾಗಿ ತಿಂಗಳು ಕಳೆಯುತ್ತಾ ಬಂದರೂ ಹೊಸ ಪಠ್ಯಪುಸ್ತಕ ಎಲ್ಲೆಡೆ ಲಭ್ಯವಾಗುತ್ತಿಲ್ಲ. ಬದಲಾದ ಪಠ್ಯಕ್ರಮದಲ್ಲಿ ಇದೀಗ ಒಂದಿಷ್ಟು ಹೊಸ ಬದಲಾವಣೆ ಮಾಡಿದ್ದು, ಅದನ್ನೂ ಹಿಂಪಡೆದು, ಹೊಸ ಮುದ್ರಣದ ಪುಸ್ತಕ ನೀಡಬೇಕಾಗಿದೆ. ಇದರಿಂದ ಮಕ್ಕಳಿಗೆ ಪುಸ್ತಕ ಸಿಗುವುದು ವಿಳಂಬವಾಗಲಿದೆ ಎಂದು ರಾಜ್ಯಾದ್ಯಂತ ಪಾಲಕರು, ಪೋಷಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಇನ್ನೊಂದೆಡೆ ಪಠ್ಯಕ್ರಮ ಬದಲಿಗೆ ಒತ್ತಾಯಿಸಿದ್ದ ಪ್ರತಿಪಕ್ಷಗಳು ಒಂದಿಷ್ಟು ಬದಲಾವಣೆಯಿಂದ ಏನೂ ಸಾಧಿಸಲು ಸಾಧ್ಯವಿಲ್ಲ ಎಂದು ಟೀಕಿಸುತ್ತಿವೆ.
ಹೊಸ ಪಠ್ಯಕ್ರಮದ ವಿರುದ್ಧ ಕೇಳಿಬಂದ ಅಪಸ್ವರ ಹಾಗೂ ಆಕ್ರೋಶಕ್ಕೆ ಮಣಿದು ಚಕ್ರತೀರ್ಥ ನೇತೃತ್ವದ ಸಮಿತಿಯ ಪಠ್ಯಕ್ರಮದಲ್ಲಿ ಒಂದಿಷ್ಟು ಅಂಶಗಳ ಬದಲಾವಣೆ ಮಾಡಿ ನಿನ್ನೆ(ಸೋಮವಾರ) ಆದೇಶ ಹೊರಡಿಸಿದೆ. ವಿವಾದಿತ 8 ಅಂಶಗಳು ತಿದ್ದುಪಡಿಯಾಗಲಿದ್ದು, ಮಕ್ಕಳ ವಯೋಮಾನ ಮೀರಿದ ಪಠ್ಯ ಬೋಧನೆಯನ್ನು ಕೈಬಿಡಲು ಸುತ್ತೋಲೆ ಹೊರಡಿಸಿದೆ.
ಪಠ್ಯ ಪರಿಷ್ಕರಣೆ ಈ ಬಾರಿ ಹಿಂದೆಂದಿಗಿಂತ ದೊಡ್ಡ ಮಟ್ಟದ ಚರ್ಚೆಗೆ ಗ್ರಾಸವಾಗಿದೆ. ಸರ್ಕಾರ ಪಠ್ಯಕ್ರಮದಲ್ಲಿ ಕೇಸರೀಕರಣ ಮಾಡಲು ಹೊರಟಿದೆ ಎಂದು ಪ್ರತಿಪಕ್ಷಗಳು ಆಕ್ರೋಶ ವ್ಯಕ್ತಪಡಿಸಿದ್ದವು. ಪ್ರತಿಭಟನೆ, ಹೋರಾಟ ನಡೆದಿದ್ದವು. ಜನಾಕ್ರೋಶ, ಹೋರಾಟಗಾರರ ಪ್ರತಿಭಟನೆ, ಸಾಹಿತಿಗಳ ಪಠ್ಯ ಹಿಂಪಡೆಯುವ ಅಭಿಯಾನ ನಡೆದಿತ್ತು. ಇದೆಲ್ಲ ಬೆಳವಣಿಗೆಗಳ ಮಧ್ಯೆ ಸರ್ಕಾರ ಇದೀಗ ತಿದ್ದುಪಡಿ ಮಾಡಿದೆ. ಇದಕ್ಕೆ ಸಹ ಸಾಕಷ್ಟು ಟೀಕೆ, ಆಕ್ರೋಶ ವ್ಯಕ್ತವಾಗುತ್ತಿವೆ.
ಇದನ್ನೂ ಓದಿ: ಪಠ್ಯ ಪರಿಷ್ಕರಣೆ ವಿವಾದಕ್ಕೆ ತೆರೆ: ಲೋಪ ತಿದ್ದುಪಡಿ ಮಾಡಲು ಸರ್ಕಾರ ಆದೇಶ