ಬೆಂಗಳೂರು: ರಾಜ್ಯದಲ್ಲಿ ಉಂಟಾಗಿರುವ ಭೀಕರ ಪ್ರವಾಹಕ್ಕೆ ಈವರೆಗೆ ಒಟ್ಟು 40 ಮಂದಿ ಸಾವಿಗೀಡಾಗಿದ್ದು, 14 ಮಂದಿ ನಾಪತ್ತೆಯಾಗಿದ್ದಾರೆ.
ಬೆಳಗಾವಿಯಲ್ಲಿ ಈವರೆಗೆ 12 ಮಂದಿ ಸಾವಿಗೀಡಾಗಿದ್ದರೆ, ಕೊಡಗಿನಲ್ಲಿ ಒಟ್ಟು 7 ಮಂದಿ ಸಾವಿಗೀಡಾಗಿರುವ ವರದಿಯಾಗಿದೆ. ಇನ್ನು ಉತ್ತರ ಕನ್ನಡ 4, ಶಿವಮೊಗ್ಗ 3, ಧಾರವಾಡ 3, ದ.ಕನ್ನಡ, ಉಡುಪಿ, ಚಿಕ್ಕಮಗಳೂರು, ಮೈಸೂರಿನಲ್ಲಿ ತಲಾ 2 ಮಂದಿ ಮಳೆ ಅಬ್ಬರಕ್ಕೆ ಬಲಿಯಾಗಿದ್ದಾರೆ.
ಆದರೆ ಮಳೆಯ ಪ್ರಮಾಣ ಕಡಿಮೆಯಾಗಿರುವುದರಿಂದ ನೆರೆಪೀಡಿತರು ನಿಟ್ಟುಸಿರು ಬಿಡುವಂತಾಗಿದೆ. ಜತೆಗೆ ಹವಾಮಾನ ಇಲಾಖೆ ನಾಳೆಯಿಂದ ನಾಲ್ಕೈದು ದಿನಗಳ ಕಾಲ ಮಳೆ ಪ್ರಮಾಣ ಕಡಿಮೆಯಾಗುವ ಮುನ್ಸೂಚನೆ ನೀಡಿರುವುದು ಆತಂಕವನ್ನು ಕಡಿಮೆಗೊಳಿಸಿದೆ.
ಮಹಾರಾಷ್ಟ್ರದ ಕೃಷ್ಣಾ ಮೇಲ್ದಂಡೆ ಅಚ್ಚುಕಟ್ಟು ಪ್ರದೇಶದಲ್ಲಿ ಮಳೆಯ ಪ್ರಮಾಣ ಕಡಿಮೆಯಾಗಿದ್ದರೆ, ಕರ್ನಾಟಕದ ಉತ್ತರ ಒಳನಾಡಿನಲ್ಲಿ ಸಾಧಾರಣ ಮಳೆಯಾಗುವ ಮುನ್ಸೂಚನೆ ನೀಡಿರುವುದು ಆತಂಕ ಕಡಿಮೆ ಮಾಡಿದೆ. ಹವಾಮಾನ ಇಲಾಖೆ ಬೆಳಗಾವಿ, ಮಲೆನಾಡು ಹಾಗೂ ಕರಾವಳಿ ಕರ್ನಾಟಕದಲ್ಲಿ ಸಾಧಾರಣ ಮಳೆ ಬೀಳುವ ಸಾಧ್ಯತೆ ಇದೆ ಎಂದು ಮುನ್ಸೂಚನೆ ನೀಡಿದೆ. ಕೆಲ ಪ್ರದೇಶಗಳಲ್ಲಿ ಮಾತ್ರ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಎಚ್ಚರಿಕೆ ನೀಡಿದೆ.
ಈಗಾಗಲೇ ಮಲೆನಾಡು, ಕರಾವಳಿ ಕರ್ನಾಟಕದಲ್ಲಿ ಮಳೆಯ ಪ್ರಮಾಣ ಕಡಿಮೆಯಾಗಿದ್ದು, ಹಲವು ಜಿಲ್ಲೆಗಳಲ್ಲಿ ಪ್ರವಾಹ ಮಟ್ಟ ತಗ್ಗಿದೆ.
ಅಣೆಕಟ್ಟಿನ ನೀರಿನ ಒಳಹರಿವು, ಹೊರಹರಿವು:
ಆಲಮಟ್ಟಿ ಅಣೆಕಟ್ಟಿನಿಂದ ಸಂಜೆ ವೇಳೆಗೆ ಸುಮಾರು 6.16 ಲಕ್ಷ ಕ್ಯೂಸೆಕ್ ಒಳಹರಿವು ಇದ್ದರೆ, ಹೊರಹರಿವು ಪ್ರಮಾಣ 5.4 ಲಕ್ಷ ಕ್ಯೂಸೆಕ್ ಇದೆ.
ಇನ್ನು ನಾರಾಯಣಪುರ ಅಣೆಕಟ್ಟಿಗೆ ಸಂಜೆ ವೇಳೆಗೆ ಸುಮಾರು 6 ಲಕ್ಷ ಕ್ಯೂಸೆಕ್ ಒಳಹರಿವು ಇದ್ದರೆ, 6.11 ಲಕ್ಷ ಕ್ಯೂಸೆಕ್ ಹೊರಹರಿವು ಇದೆ.
ಪರಿಹಾರ ಕಾರ್ಯ ಹಾಗೂ ಹಾನಿಗಳ ವಿವರ:
ಒಟ್ಟು ಸಾವು 40
ನಾಪತ್ತೆ 14
ಜಾನುವಾರುಗಳ ಸಾವು 525
ಪ್ರವಾಹಪೀಡಿತರ ರಕ್ಷಣೆ 5,81,702
ಜಾನುವಾರುಗಳ ರಕ್ಷಣೆ 50,595
ಒಟ್ಟು ಪರಿಹಾರ ಕೇಂದ್ರ 1168
ಪರಿಹಾರ ಕೇಂದ್ರದಲ್ಲಿನ ಸಂತ್ರಸ್ತರು 3,27,354
ಬೆಳೆ ನಷ್ಟ ಪ್ರಮಾಣ 4.20 ಲಕ್ಷ ಹೆಕ್ಟೇರ್
ಮನೆ ಹಾನಿ 28,325