ಬೆಂಗಳೂರು: ಪೌರತ್ವ (ತಿದ್ದುಪಡಿ) ಕಾಯ್ದೆ ಕುರಿತು ಪ್ರತಿಪಕ್ಷಗಳು ವೋಟ್ಬ್ಯಾಂಕ್ ರಾಜಕಾರಣ ಮಾಡುತ್ತಿವೆ. ಅವರನ್ನು ಜನ ಯಾವತ್ತೂ ಕ್ಷಮಿಸುವುದಿಲ್ಲ ಎಂದು ಉಪಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥ್ ನಾರಾಯಣ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಕಾಯ್ದೆ ಜಾರಿಗೆ ತಂದಿರುವ ಕುರಿತು ಪ್ರತಿಪಕ್ಷಗಳು ಸ್ವಾಗತಿಸಬೇಕಿತ್ತು. ಆದರೆ, ರಾಜಕೀಯ ದುರುದ್ದೇಶದಿಂದ ಗಲಭೆಗಳನ್ನು ಸೃಷ್ಟಿಸುತ್ತಿವೆ. ಪ್ರತಿಪಕ್ಷಗಳು ಅಕ್ರಮ ವಲಸಿಗರ ರಕ್ಷಣೆಗೆ ಯಾವತ್ತೂ ಬರಲಿಲ್ಲ. ಅಷ್ಟೇ ಅಲ್ಲದೆ, ಪಕ್ಕದ ದೇಶಗಳಲ್ಲಿ ಧಾರ್ಮಿಕ ಅಲ್ಪಸಂಖ್ಯಾತರ ಮೇಲಾಗುತ್ತಿರುವ ದೌರ್ಜನ್ಯ ತಡೆಗಟ್ಟಲೂ ಮುಂದಾಗಿರಲಿಲ್ಲ ಎಂದರು.
ಭಾರತಕ್ಕೆ ಅಕ್ರಮ ವಲಸೆ ಬಂದಾಗಲೂ ಅವರನ್ನು ವೋಟ್ ಬ್ಯಾಂಕ್ ಆಗಿ ಪರಿವರ್ತಿಸಿಕೊಂಡರು. ನೆರೆಯ ದೇಶದಲ್ಲಿ ದೌರ್ಜನ್ಯಕ್ಕೆ ಒಳಗಾದ ವಲಸಿಗರಿಗೆ ಬಿಜೆಪಿ ಪೌರತ್ವ ಕೊಡಲು ಮುಂದಾದರೆ ವಿರೋಧಿಸುತ್ತಿದ್ದಾರೆ. ಇದರಲ್ಲಿ ಹುಳುಕು ಏನಿದೆ ಎಂಬುದು ಗೊತ್ತಿಲ್ಲ. ಕಾಯ್ದೆ ಕುರಿತು ಸರಿಯಾದ ಮಾಹಿತಿ ಪಡೆಯದೆ ಪ್ರಚೋದನೆ ಮಾಡುತ್ತಿವೆ ಎಂದರು.
ವಲಸೆ ಬಂದ ಮುಸ್ಲಿಮರಿಗೂ ಪೌರತ್ವ ಕೊಡಲಾಗುತ್ತದೆ. ಆದರೆ, ಕಾನೂನು ಬದ್ಧರಾಗಿ ಬಂದವರಿಗೆ ಪೌರತ್ವ ಕೊಡಲಾಗುತ್ತದೆ. ಯಾವುದೇ ದಾಖಲಾತಿ ಇಲ್ಲದೆ, ಅಕ್ರಮ ಮುಸ್ಲಿಂ ವಲಸಿಗರಿಗೆ ಪೌರತ್ವ ನೀಡಲಾಗುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ಈ ಹಿನ್ನೆಲೆಯಲ್ಲಿ ಪೌರತ್ವ ಕಾಯ್ದೆ ಕುರಿತ ಒಂದು ಕೈಪಿಡಿ ಬಿಡುಗಡೆ ಮಾಡುತ್ತಿದ್ದೇವೆ. ಕಾಯ್ದೆ ಬಗ್ಗೆ ಯಾರಿಗೂ ಗೊಂದಲ ಇರಬಾರದು. ಜನರಿಗೆ ಕಾಯ್ದೆ ಬಗ್ಗೆ ಸರಿಯಾದ ಮಾಹಿತಿಯಿಲ್ಲ. ಈ ಕುರಿತು ತಪ್ಪು ಮಾಹಿತಿ ನೀಡುತ್ತಿರುವವರಿಗೆ ಈ ಕೈಪಿಡಿ ತಲುಪಿಸುತ್ತೇವೆ ಎಂದರು.
ಆಡಳಿತ ನಡೆಸುವವರ ಮೇಲೆ ಶಾಂತಿ ತರುವ ಹೊಣೆ ಇರುತ್ತದೆ. ಶಾಂತಿ ಸುವ್ಯವಸ್ಥೆ ತರುವ ಜವಾಬ್ದಾರಿ ಸರಕಾರದ್ದು. ಹಾಗಾಗಿ ಸಿಎಂ, ಗೃಹ ಸಚಿವರು ಮಂಗಳೂರಿಗೆ ಹೋಗಿದ್ದಾರೆ. ಆದರೆ, ಪ್ರತಿಪಕ್ಷದವರಿಂದ ಸಮಸ್ಯೆ ಹೆಚ್ಚಾಗುತ್ತಿದೆ. ಹೀಗಾಗಿ ಅವರಿಗೆ ಮಂಗಳೂರಿಗೆ ಪ್ರವೇಶ ಕೊಟ್ಟಿಲ್ಲ. ಪರಿಸ್ಥಿತಿ ಸಹಜ ಸ್ಥಿತಿಗೆ ಬಂದ ಮೇಲೆ ಅವರು ಹೋಗಲಿ ಎಂದರು.