ಬೆಂಗಳೂರು: ಆರ್ಟಿಜಿಎಸ್ ಮೂಲಕ ಮುಖ್ಯಮಂತ್ರಿ ಕುಟುಂಬಸ್ಥರು ಹಣ ಪಡೆದ ಬಗ್ಗೆ ನಾನು ಸದನದಲ್ಲೂ ಗಮನ ಸೆಳೆದಿದ್ದೆ. ಇದೀಗ ಇದೇ ವಿಚಾರಕ್ಕೆ ಇಡಿ ನೊಟೀಸ್ ಜಾರಿ ಮಾಡಿದೆ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ತಿಳಿಸಿದ್ದಾರೆ.
ಓದಿ: ಸಿಎಂ ವಿರೋಧಿ ಪಡೆ ಶಾಸಕಾಂಗ ಪಕ್ಷದ ಸಭೆಗೆ ಪಟ್ಟು.. ಬಿಜೆಪಿ ಹೈಕಮಾಂಡ್‌ಗೆ ಬಿಎಸ್‌ವೈ ಬಿಸಿ ತುಪ್ಪ..
ಬೆಂಗಳೂರಿನ ಶಿವಾನಂದ ವೃತ್ತ ಸಮೀಪ ಇರುವ ಸರ್ಕಾರಿ ನಿವಾಸದಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ಬಿಜೆಪಿ ಉಪಾಧ್ಯಕ್ಷ, ಸಿಎಂ ಪುತ್ರ ವಿಜಯೇಂದ್ರಗೆ ಈಗ ಇಡಿ ನೊಟೀಸ್ ನೀಡಿದೆ. ನಾನು ಮತ್ತು ನನ್ನ ಪಕ್ಷ ಈ ಬಗ್ಗೆ ದನಿ ಎತ್ತಿದ್ದೆವು. ಇದೀಗ ಅದಕ್ಕೆ ಇನ್ನಷ್ಟು ಪುಷ್ಠಿ ಸಿಕ್ಕಿದೆ ಎಂದರು.
ಬಿಜೆಪಿ ನಾಯಕತ್ವ ಬದಲಾವಣೆ ವಿಚಾರ ಮಾತನಾಡಿ, ರಾಜೀನಾಮೆ ಅನ್ನೋದು ನಾಟಕ. ಯಡಿಯೂರಪ್ಪ ಆಡಳಿತ ನಡೆಸುವಲ್ಲಿ ನೂರಕ್ಕೆ ನೂರು ವಿಫಲರಾಗಿದ್ದಾರೆ. ಅವರ ಬಗ್ಗೆ ಕೇಂದ್ರ ಸರ್ಕಾರಕ್ಕೂ ಗೊತ್ತಾಗಿದೆ, ರಾಜ್ಯದ ನಾಯಕರಿಗೂ ಗೊತ್ತಿದೆ. ಜನರಿಗೂ ಅವರ ನಾಟಕ ಗೊತ್ತಾಗಿದೆ. ಕಾರ್ಮಿಕರು ಸಂಕಷ್ಟಕ್ಕೆ ಸಿಲುಕಿದ್ದು, ಅವರಿಗೆ ಪರಿಹಾರ ಕೊಡಿ ಅಂತ ನಾವು ಕೇಳ್ತಾನೇ ಇದ್ದೇವೆ. 10 ಕೆ.ಜಿ ಅಕ್ಕಿ, 10 ಸಾವಿರ ನಗದು ಹಣ ಕೊಡಿ ಎಂದು ಹೇಳಿದ್ದೇವೆ. ಅವರಿಗೂ ಅನುಕೂಲ, ನಿಮಗೂ ಅನುಕೂಲ ಅಂದಿದ್ವಿ. ಆದರೆ ಸರ್ಕಾರ ಮಾಡಿದ್ದೇನು? ಯಡಿಯೂರಪ್ಪ ವರ್ಸ್ಟ್ ಚೀಫ್ ಮಿನಿಸ್ಟರ್. ಅವರನ್ನು ಸಿಎಂ ಸ್ಥಾನದಿಂದ ತೆಗೆಯಬೇಕು ಅಂತ ಈಗಿನಿಂದ ಚರ್ಚೆಯಾಗುತ್ತಿಲ್ಲ, ಮೊದಲಿನಿಂದಲೂ ಚರ್ಚೆಯಾಗುತ್ತಲೇ ಇದೆ. ಆದರೆ ಪರ್ಯಾಯ ಯಾರು ಅನ್ನೋ ಚಿಂತೆ ಬಿಜೆಪಿಗಿದೆ. ಹಾಗಾಗಿ ಇಲ್ಲಿಯವರೆಗೆ ಅವರು ಸುಮ್ಮನಿದ್ದಾರಷ್ಟೇ ಎಂದರು.
ರೇಣುಕಾಚಾರ್ಯ ಮುಂದೆ ಬಿಟ್ಟು ನಾನು ಪ್ರಾಮಾಣಿಕನಾಗಿದ್ದೇನೆ ಅಂತ ಬಿ.ಎಸ್. ಯಡಿಯೂರಪ್ಪ ತೋರಿಸಲು ಹೊರಟಿದ್ದಾರೆ. ಹೈಕಮಾಂಡ್ ಮನವೊಲಿಸೋಕೆ ಅವರು ನೋಡುತ್ತಿದ್ದು, ಅಂತಹ ಬೆಳವಣಿಗೆಗಳೇನು ಆಗಿಲ್ಲ. ರಾಜ್ಯದಲ್ಲಿ ಲಾಕ್ಡೌನ್ ಮಾಡಿದ್ರು, ಆದರೆ ಕಠಿಣವಾಗಿ ಅವರು ಮಾಡಲಿಲ್ಲ. ಅದಕ್ಕೇ ಇಷ್ಟೊಂದು ಅವಘಡ ಆಯಿತು ಎಂದು ಹೇಳಿದರು.
ಪ್ರತಾಪ್ ಗೌಡ ಮಸ್ಕಿಯಲ್ಲಿ ಏನೂ ಮಾಡಿಲ್ಲ, ಕಾಂಗ್ರೆಸ್ಗೆ ಮೋಸ ಮಾಡಿ ಹೋದ ಬಗ್ಗೆ ಗೊತ್ತಿತ್ತು. ಹಾಗಾಗಿ ಜನ ಅವರನ್ನ ಅಲ್ಲಿ ಸೋಲಿಸಿದರು. ಒಗ್ಗಟ್ಟಾಗಿ ಕೆಲಸ ಮಾಡಿದ್ದರಿಂದ ತುರುವಿಹಾಳ ಗೆದ್ದರು. ನಾವು ಕ್ಯಾಂಪೇನ್ ಮಾಡಿ 15 ಸಾವಿರ ಮತಗಳಿಂದ ಗೆಲ್ಲಬಹುದು ಅಂದುಕೊಂಡಿದ್ದೆವು. ಆದರೆ 31 ಸಾವಿರ ಮತಗಳಿಂದ ಗೆದ್ದಿದ್ದಾರೆ. ಪಕ್ಷಾಂತರಿಗಳಿಗೆ ತಕ್ಕ ಪಾಠ ಜನ ಕಲಿಸಿದ್ದಾರೆ. ಯಾವುದೇ ಸಂದರ್ಭದಲ್ಲಿ ಚುನಾವಣೆಯಾದರೂ ಕಾಂಗ್ರೆಸ್ ಗೆಲ್ಲಲಿದೆ. ಅಧಿಕಾರದ ಚುಕ್ಕಾಣಿ ಹಿಡಿಯುವುದು ಖಚಿತ. ಬಿಜೆಪಿ ಎಲ್ಲಾ ರಂಗಗಳಲ್ಲೂ ವಿಫಲವಾಗಿದೆ ಎಂದು ವಾಗ್ದಾಳಿ ನಡೆಸಿದರು.
ಉಚಿತ ಲಸಿಕೆ ಬೇಡಿಕೆ:
18 ವರ್ಷ ಮೇಲ್ಪಟ್ಟವರಿಗೆ ಉಚಿತ ಲಸಿಕೆ ವಿಚಾರದ ಬಗ್ಗೆ ಮಾತನಾಡಿ, ನಿನ್ನೆ ಲಸಿಕೆ ಬಗ್ಗೆ ಅನೌನ್ಸ್ ಮಾಡಿದ್ದಾರೆ. ನಾವು ಉಚಿತ ಲಸಿಕೆಗೆಯನ್ನು 18 ವರ್ಷ ಮೇಲ್ಪಟ್ಟವರಿಗೆ ನೀಡುವಂತೆ ಒತ್ತಾಯಿಸಿದ್ದೆವು. ಈಗ ಕೇಂದ್ರ 75, ರಾಜ್ಯ 25 ಪರ್ಸೆಂಟ್ ಖರೀದಿಗೆ ನಿರ್ಧರಿಸಿದ್ದಾರೆ. ಈಗ ಎಲ್ಲಾ ವರ್ಗದವರಿಗೂ ಲಸಿಕೆ ಕೊಡಬೇಕು ಎಂದರು.
ಐಎಎಸ್ ಅಧಿಕಾರಿಗಳಿಬ್ಬರ ಜಟಾಪಟಿ ವಿಚಾರ ಮಾತನಾಡಿ, ರೋಹಿಣಿ ಸಿಂಧೂರಿ, ಶಿಲ್ಪಾ ನಾಗ್ ಜಟಾಪಟಿಯಲ್ಲಿ ಇಬ್ಬರನ್ನೂ ಎತ್ತಿಕಟ್ಟುವ ಕೆಲಸ ಮಾಡಿದ್ದಾರೆ. ಅಧಿಕಾರಿಗಳಿಗೆ ಪವರ್ ಕೊಟ್ಟವರು ಯಾರು? ಮಾಧ್ಯಮಗಳ ಮುಂದೆ ಮಾತನಾಡೋಕೆ ಅಧಿಕಾರ ಕೊಟ್ಟವರ್ಯಾರು? ಅವರಿಬ್ಬರ ಮೇಲೆ ಕ್ರಮ ತೆಗೆದುಕೊಳ್ಳಬೇಕಿತ್ತು. ಸಂಪೂರ್ಣ ಆಡಳಿತ ಕುಸಿದಿದೆ. ರೋಹಿಣಿ ಸಿಂಧೂರಿ ಸ್ಟೇಟ್ ಮೆಂಟ್ ಕೇಳಿದ್ರಾ? ಭೂಮಿ ಹಗರಣದ ಬಗ್ಗೆ ಮಾತನಾಡಿದ್ದು, ಇದರ ಬಗ್ಗೆ ತನಿಖೆಯಾಗಬೇಕು. ಬಿಜೆಪಿಯವರು ರೋಹಿಣಿ ತೆಗೆದು ಶಿಲ್ಪಾ ಡಿಸಿ ಮಾಡಬೇಕು ಅಂದುಕೊಂಡಿದ್ದರು. ಬಿಗಿಯಾದ ಸರ್ಕಾರ ಇಲ್ಲದೆ ಇರುವುದರಿಂದ ಹೀಗಾಗಿದೆ. ಅಧಿಕಾರಿಗಳನ್ನ ತೆಗಳೋದು, ಹೊಗಳೋದು ಸರಿಯೇ? ರಾಜಕಾರಣಿಗಳಿಗೆ ಸರಿಯಾಗುತ್ತಾ? ಎಂದು ಸಿದ್ದರಾಮಯ್ಯ ಪ್ರಶ್ನಿಸಿದರು.
ಪಿಯುಸಿ ಪರೀಕ್ಷೆಯೂ ಆಗಲಿ:
ನಾವೇನು ಸರ್ಕಾರ ಬೀಳಿಸಲ್ಲ, ಅವರಾಗಿ ಬಿದ್ದು ಹೋದ್ರೆ ನಾವು ರೆಡಿ. ಚುನಾವಣೆ ಎದುರಿಸೋಕೆ ಸಿದ್ಧರಿದ್ದೇವೆ. ನಾವು ಯಡಿಯೂರಪ್ಪಗೆ ಸಪೋರ್ಟ್ ಮಾಡುತ್ತಿಲ್ಲ, ವಿರೋಧನೂ ಮಾಡುತ್ತಿಲ್ಲ ಎಂದರು. ಖಾಸಗಿ ಶಾಲೆಗಳಿಂದ ಬಲವಂತದ ಫೀ ವಸೂಲಿ ವಿಚಾರ ಮಾತನಾಡಿ, ಡಿಸಿಎಂ ಅಶ್ವತ್ಥ್ ನಾರಾಯಣ್ ಅಧಿಕಾರಿ, ಸ್ಕೂಲ್ ಗಳನ್ನ ಫ್ರೀ ಬಿಟ್ಟಿದ್ದಾರೆ. ಇನ್ನು ಸುರೇಶ್ ಕುಮಾರ್ದು ಹಾಗೇ ಆಗಿದೆ. ಎಸ್ಎಸ್ಎಲ್ಸಿ ಪರೀಕ್ಷೆ ಮಾಡಿ, ಪಿಯು ಬಿಡ್ತಾರಂತೆ. ನನ್ನ ಪ್ರಕಾರ ಪಿಯುಸಿ ಪರೀಕ್ಷೆನೂ ಮಾಡಿಸಬೇಕು ಎಂದು ಸಿದ್ದರಾಮಯ್ಯ ಒತ್ತಾಯಿಸಿದರು.