ಬೆಂಗಳೂರು: ರಾಜ್ಯದ ಬಿಜೆಪಿ ಸರ್ಕಾರ ಭೂ ಸುಧಾರಣಾ ಕಾಯ್ದೆಗೆ ಸುಗ್ರೀವಾಜ್ಞೆ ಮೂಲಕ ತಿದ್ದುಪಡಿ ಮಾಡಿದೆ. ಕೋವಿಡ್ ಸಂದರ್ಭ ಬಳಸಿಕೊಂಡು ಸರ್ವಾಧಿಕಾರಿ ಧೋರಣೆ ಅನುಸರಿಸಿದೆ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅಭಿಪ್ರಾಯಪಟ್ಟಿದ್ದಾರೆ.
ತಮ್ಮ ನಿವಾಸದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಸಂಪುಟದಲ್ಲಿ ತೀರ್ಮಾನ ಆದಾಗಲೇ ನಾವು ಈ ತಿದ್ದುಪಡಿಗೆ ತೀವ್ರವಾಗಿ ವಿರೋಧ ಮಾಡಿದ್ದೆವು. ಕೋವಿಡ್ ಸಂಕಷ್ಟದಲ್ಲಿ ಸರ್ಕಾರ ಸುಗ್ರೀವಾಜ್ಞೆ ಮಾಡಲ್ಲ ಅಂದುಕೊಂಡಿದ್ದೆವು. ಆದರೆ, ಇದೇ ಸಂದರ್ಭvನ್ನು ಬಳಸಿಕೊಂಡು ಸರ್ಕಾರ ಸರ್ವಾಧಿಕಾರ ಧೋರಣೆ ಅನುಸರಿಸಿದೆ. ಇದು ರೈತರ, ಕೂಲಿ ಕಾರ್ಮಿಕರ, ಹಿಂದುಳಿದವರ ವಿರೋಧಿಯಾದ ತಿದ್ದುಪಡಿ ಎಂದು ಕಿಡಿಕಾರಿದರು.
ಕ್ರಾಂತಿಕಾರಿ ನಿಲುವು: ದೇವರಾಜ ಅರಸು ಸಿಎಂ ಆಗಿದ್ದ ವೇಳೆ ಕ್ರಾಂತಿಕಾರಿ ನಿಲುವು ತೆಗೆದುಕೊಂಡಿದ್ದರು. ಸಾಮಾಜಿಕ ನ್ಯಾಯವುಳ್ಳ ತಿದ್ದುಪಡಿಯನ್ನು ಅರಸು ಅವರು ತಂದಿದ್ದರು. ಗೇಣಿ ಮಾಡುತ್ತಿದ್ದ ಜಮೀನುಗಳಿಗೆ ಅವರನ್ನೇ ಮಾಲೀಕರಾಗಿ ಮಾಡಿದ್ದರು. ಇಡೀ ದೇಶಕ್ಕೆ ಮಾದರಿಯಾದ ತಿದ್ದುಪಡಿ ತಂದಿದ್ದರು. ಆದರೆ, ಬಿಜೆಪಿ ಸರ್ಕಾರ ಅದನ್ನು ತಿದ್ದುಪಡಿ ಮಾಡುವ ಮೂಲಕ ರೈತರಿಗೆ ಮೋಸ ಮಾಡಲು ಹೊರಟಿದೆ ಎಂದು ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು.
ಈ ತಿದ್ದುಪಡಿ ಹಿಂದೆ ದೊಡ್ಡ ಷಡ್ಯಂತ್ರ ಇದೆ. ಹಣ ತುಂಬುವುದನ್ನು ತಪ್ಪಿಸಿಕೊಳ್ಳಲು ಶ್ರೀಮಂತರು ಈ ತಿದ್ದುಪಡಿ ಮಾಡಿಸಿದ್ದಾರೆ. ನಮ್ಮ ಕಾಲಾವಧಿಯಲ್ಲಿ ಹೂಡಿಕೆ ಉತ್ತಮವಾಗಿತ್ತು, ಒಂದು, ಎರಡನೇ ಸಾಲಲ್ಲಿ ರಾಜ್ಯ ಇತ್ತು. ಈಗ ಹೂಡಿಕೆ ಬರಲ್ಲಾ ಅಂದರೆ ಹೇಗೆ? ಇವೆಲ್ಲಾ ಕುಂಟು ನೆಪ. ಅನ್ಯ ರಾಜ್ಯಗಳಲ್ಲಿ ಇಂತ ಅವಕಾಶ ಇದೆ ಎಂದು ಹೇಳಿ ತಿದ್ದುಪಡಿ ತರಲಾಗಿದೆ ಎಂದರು.
ಕಾರ್ಪೊರೇಟ್ ಸಂಸ್ಥೆಗಳಿಗೆ ಆಂಧ್ರ ಪ್ರದೇಶದಲ್ಲಿ 54 ಎಕರೆ, ಕೇರಳ 20, ತಮಿಳುನಾಡಿನಲ್ಲಿ 30 ಎಕರೆ ನೀಡಲು ಅವಕಾಶ ಇದೆ. ಆದರೆ ನಮ್ಮ ರಾಜ್ಯದಲ್ಲಿ 20 ಎಕರೆ ಇದ್ದದ್ದನ್ನು 80 ಎಕರೆಗೆ ಹೆಚ್ಚಿಸಿದ್ದೀರಿ. ಕಾರ್ಪೊರೇಟ್ ಸಂಸ್ಥೆ, ಬಂಡವಾಳಶಾಹಿಗಳಿಗೆ ಅನುಕೂಲ ಮಾಡಿಕೊಡಲು ಇಂತಹ ನಿರ್ಧಾರವನ್ನು ಸರ್ಕಾರ ಕೈಗೊಂಡಿದೆ. ಸದ್ಯದ ಸರ್ಕಾರದ ತಿದ್ದುಪಡಿಯಿಂದ ಯಾವ ಜಮೀನು ಬೇಕಾದರೂ, ಯಾರು ಬೇಕಾದರೂ 400 ಎಕರೆವರೆಗೂ ಭೂಮಿ ಖರೀದಿಸಬಹುದು. 4 ಕೋಟಿ ರೈತರು ಪರಿಶಿಷ್ಟ ಜಾತಿ, ಪಂಗಡದವರೂ ಸೇರಿ ಎಲ್ಲಾ ರೈತ ವರ್ಗ ಬರಲಿದೆ. ರೈತರನ್ನು ಬೀದಿಪಾಲು ಮಾಡಲು ಸರ್ಕಾರ ಹೊರಟಿದೆ. ಹಣ ಉಳ್ಳವರು ಭೂಮಿ ಖರೀದಿಸಿ, ರಿಯಲ್ ಎಸ್ಟೇಟ್ಗೆ ಬಳಸುತ್ತಾರೆ. ರೈತರ ಬದುಕು ಬೀದಿಗೆ ಬರಲಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಮೋದಿ ತಂತ್ರ: 1961ರ ಕಾಯ್ದೆಯಲ್ಲಿ ರೈತರಿಗೆ ಸಿಕ್ಕ ಅವಕಾಶ ನಾಶವಾಗಲಿದೆ. ಊಳುವವನೇ ಭೂಮಿ ಒಡೆಯ ಅಲ್ಲ, ಉಳ್ಳವನೇ ಭೂಮಿ ಒಡೆಯ ಆಗಲಿದ್ದಾನೆ. 25 ಲಕ್ಷ ಕುಟುಂಬಗಳು ಬೀದಿಗೆ ಬರಲಿವೆ. ಭೂಮಿ ಖರೀದಿಸಿದವರು ಕೃಷಿ ಮಾಡಬೇಕೆಂಬ ನಿಯಮ ಇಲ್ಲ. ಬೆಂಗಳೂರು ಹೊರವಲಯದಲ್ಲಿ ಶ್ರೀಮಂತರು ಭೂಮಿ ಕೊಂಡುಕೊಂಡು ಫಾರಂ ಹೌಸ್ ಮಾಡಿಕೊಂಡಿದ್ದಾರೆ. ಸರ್ಕಾರದ ಈ ಜನ, ರೈತ ವಿರೋಧಿ ನಿಲುವಿನ ಹಿಂದೆ ಪ್ರಧಾನಿ ನರೇಂದ್ರ ಮೋದಿ ಇದ್ದಾರೆ. ಇವರಿಗೆ ಯಾರ ಬಗೆಗೂ ಕಾಳಜಿ ಇಲ್ಲ. ಖಾಸಗೀಕರಣ ಮಾಡುವ ಮೂಲಕ ಮೀಸಲಾತಿ ತೆಗೆಯಲು ಅವರು ಹೊರಟಿದ್ದಾರೆ ಎಂದರು ಆರೋಪಿಸಿದರು.
ನೇರವಾಗಿ ಮೀಸಲಾತಿ ತೆಗೆದರೆ ವಿರೋಧ ಬರಲಿದೆ. ಹಿಂಬಾಗಿಲಿನಿಂದ ಯತ್ನ ನಡೆಸಲಾಗುತ್ತಿದೆ. ಹಿಂದೆ ಇದ್ದ ಜಮೀನ್ದಾರಿ, ಜಾಗಿರ್ದಾರ್ ಪದ್ಧತಿ ಮತ್ತೆ ಜಾರಿಗೆ ಬರುತ್ತಿದೆ. ಇದರ ದುಷ್ಪರಿಣಾಮವೆಂದರೆ ರೈತರು ನಿರ್ಗತಿಕರಾಗುತ್ತಾರೆ. ಆಹಾರದ ಸ್ವಾವಲಂಬನೆ ತಪ್ಪಿಹೋಗುತ್ತದೆ. ರೈತರು ಬೀದಿಗೆ ಬರುತ್ತಾರೆ. ಇದರ ಜತೆ ಎಪಿಎಂಸಿ ಕಾಯ್ದೆ ಕೂಡ ತಿದ್ದುಪಡಿ ತಂದಿದೆ. ಎಲ್ಲವನ್ನೂ ಖಾಸಗಿಯವರಿಗೆ ಅನುಕೂಲ ನೀಡಲು ಮುಂದಾಗಿದೆ ಎಂದು ಆರೋಪಿಸಿದರು.
ಸರ್ಕಾರಕ್ಕೆ ನಿಜವಾಗಿ ರೈತ ಪರ ಕಾಳಜಿ ಇದ್ದರೆ ಕೆಲಸ ಮಾಡಿ ತೋರಿಸಬೇಕಿತ್ತು. ವಿಧಾನಸಭೆ ಅಧಿವೇಶನ ಕರೆಯಬಹುದಿತ್ತು. ಕೊರೊನಾ ವೇಗವಾಗಿ ಹರಡುತ್ತಿದೆ. ರಾಜ್ಯ 4ನೇ ಸ್ಥಾನ ತಲುಪಿದೆ. ದೇಶ ಮೂರನೇ ಸ್ಥಾನದಲ್ಲಿದ್ದೆ. ರಾಜ್ಯದಲ್ಲಿ ನಿತ್ಯ 70 ಮಂದಿ ಸಾಯುತ್ತಿದ್ದಾರೆ. ಇದನ್ನು ನಿಯಂತ್ರಿಸುವ ಬದಲು ಕಾಯ್ದೆ ತಿದ್ದುಪಡಿ ಮಾಡುತ್ತಿದೆ. ಇದಾಗದಿದ್ದರೆ ದೇಶ ಮುಳುಗಿ ಹೋಗುತ್ತದೆಯೇ, ಅಭಿವೃದ್ಧಿ ನಿಲ್ಲುತ್ತಿತ್ತೇ? ಎಂದಿ ಪ್ರತಿಪಕ್ಷ ನಾಯಕ ಪ್ರಶ್ನಿಸಿದರು.
ಅಷ್ಟು ಕಾಳಜಿ ಇದ್ದರೆ ಅಧಿವೇಶನ ಕರೆಯಬಹುದಿತ್ತು. ನಾವು ಪ್ರತಿಭಟನೆ ಮಾಡಲು ಸಾಧ್ಯವಿಲ್ಲದ ಸಮಯದಲ್ಲಿ ಕಾಯ್ದೆಗೆ ಸುಗ್ರೀವಾಜ್ಞೆ ಜಾರಿಗೆ ತಂದಿದೆ. ಇದು ಕರಾಳ ಶಾಸನ. ಇದರಿಂದ ಸರ್ಕಾರ ಕೂಡಲೇ ಎಪಿಎಂಸಿ ಕಾಯ್ದೆ ಹಾಗೂ ಭೂ ಸುಧಾರಣಾ ಕಾಯ್ದೆಗೆ ತಂದಿರುವ ಸುಗ್ರೀವಾಜ್ಞೆ ವಾಪಸ್ ಪಡೆದು ಜನರ, ವಿಧಾನ ಮಂಡಲದಲ್ಲಿ ಚರ್ಚೆಗೆ ಅವಕಾಶ ಮಾಡಿಕೊಡಬೇಕು. ಇಲ್ಲವಾದರೆ ಇಂತ ಕಾನೂನನ್ನು ನಾವು ತೀವ್ರವಾಗಿ ವಿರೋಧಿಸುತ್ತೇವೆ. ಗಣಿ ಹಗರಣಕ್ಕಿಂತ ದೊಡ್ಡ ಹಗರಣ ಇದಾಗಿದೆ. ಇದರ ಗಾತ್ರ ₹ 10 ಸಾವಿರ ಕೋಟಿಗೂ ಹೆಚ್ಚು ಎಂದು ಸಿದ್ದರಾಮಯ್ಯ ಆರೋಪಿಸಿದರು.
ಸಾಮಾಜಿಕ ನ್ಯಾಯ ವಿರೋಧಿ ಸರ್ಕಾರ: ಇದು ಸಾಮಾಜಿಕ ನ್ಯಾಯ ವಿರೋಧಿ ಸರ್ಕಾರವಾಗಿದ್ದು, ಇದನ್ನು ಖಂಡಿಸುತ್ತೇವೆ. ಕಾಂಗ್ರೆಸ್ ಪಕ್ಷ ದೊಡ್ಡ ಹೋರಾಟ ನಡೆಸಲಿದೆ. ಕೇಂದ್ರ, ರಾಜ್ಯ ಸರ್ಕಾರದ ನೀತಿಗಳನ್ನು ತೀವ್ರವಾಗಿ ಖಂಡಿಸುತ್ತೇವೆ. ಇಡೀ ಸರ್ಕಾರವೇ ಭೂಮಿ ಮಾರಲು ಹೊರಟಿದೆ. ಸರ್ಕಾರವೇ ಕಾರ್ಪೊರೇಟ್ ಸಂಸ್ಥೆಯ ಲಾಬಿಗೆ ಬಲಿಯಾಗಿದೆ. ದೊಡ್ಡ ಜಮೀನ್ದಾರರ ಮಟ್ಟ ಹಾಕಲು ಗುತ್ತಿಗೆ ಪದ್ಧತಿ ಜಾರಿಗೆ ತರಲು ಹೊರಟಿದೆ. ಸ್ವಾಭಿಮಾನಿ ರೈತರನ್ನು ಕೂಲಿಗಳನ್ನಾಗಿಸುವ ಸರ್ಕಾರದ ಯತ್ನಕ್ಕೆ ನಮ್ಮ ವಿರೋಧವಿದೆ. ಗ್ರಾಮ ಮಟ್ಟದಲ್ಲಿ ಹೋರಾಟ ಆರಂಭಿಸುತ್ತೇವೆ ಎಂದರು.
ಈ ಸರ್ಕಾರ ಹಾಗೂ ಮೋದಿ ಅವರ ಸರ್ಕಾರ ಕೊರೊನಾ ವೈರಸ್ ತಡೆಗಟ್ಟುವಲ್ಲಿ ಸಂಪೂರ್ಣ ವಿಫಲವಾಗಿದೆ. ಕೇವಲ ಸಚಿವರು ಭ್ರಷ್ಟಾಚಾರದಲ್ಲಿ ತೊಡಗಿದ್ದಾರೆ. ಇದೇ ವಿಚಾರವಾಗಿ ರಾಜ್ಯ ಸರ್ಕಾರಕ್ಕೆ ಬರೆದ ಪತ್ರಗಳಿಗೆ ಬೆಲೆ ಸಿಕ್ಕಿಲ್ಲ. ಮುಖ್ಯಮಂತ್ರಿಗಳಿಂದ ಉತ್ತರ ಬಂದಿಲ್ಲ ಎಂದರು.