ಬೆಂಗಳೂರು: ಇತ್ತೀಚೆಗೆ ಚೀನಾ ಮೂಲದ ಹಲವಾರು ಆ್ಯಪ್ಗಳನ್ನು ಕೇಂದ್ರ ಸರ್ಕಾರ ನಿಷೇಧಿಸಿದೆ. ಇದನ್ನು ಸ್ಟಾರ್ಟ್ಅಪ್ಗಳು ಅವಕಾಶವನ್ನಾಗಿ ಪರಿವರ್ತನೆ ಮಾಡಿಕೊಳ್ಳಬಹುದು ಎಂದು ಸ್ಟಾರ್ಟ್ಅಪ್ಗಳ ಹೂಡಿಕೆದಾರ ಕೆ. ಗಣೇಶ್ ಅವರು 'ಈಟಿವಿ ಭಾರತ'ಮೂಲಕ ತಿಳಿಸಿದ್ದಾರೆ.
ಭಾರತ-ಚೀನಾ ಮಧ್ಯೆ ಗಡಿ ವಿವಾದದ ಹಿನ್ನೆಲೆಯಲ್ಲಿ ಹಲವಾರು ಆ್ಯಪ್ಗಳನ್ನು ಬ್ಯಾನ್ ಮಾಡಿರುವುದು ಸ್ವಾಗತಾರ್ಹ ಕ್ರಮ. ಭದ್ರತಾ ದೃಷ್ಟಿಯಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ. ಇದರಿಂದ ಚೀನಾ ರಾಷ್ಟ್ರ, ಆ್ಯಪ್ ಮೂಲಕ ಭಾರತೀಯರ ಡೇಟಾ ಸಂಗ್ರಹಿಸುವುದಿಲ್ಲ ಎಂದು ಸಾಬೀತಾಗುವವರೆಗೆ ಈ ನಿರ್ಧಾರ ಅವಶ್ಯಕ ಎಂದರು.
ಇದನ್ನು ಭಾರತ ಮೂಲದ ಸ್ಟಾರ್ಟ್ಅಪ್ಗಳು ಅವಕಾಶವೆಂದು ಪರಿಗಣಿಸಬೇಕು. ಇಲ್ಲಿಯವರೆಗೆ ಡೇಟಾ ಸುರಕ್ಷತೆ ಬಗ್ಗೆ ಅಷ್ಟು ಜಾಗ್ರತೆ ನಮ್ಮ ದೇಶದಲ್ಲಿ ಇರಲಿಲ್ಲ. ಚೀನಾ ದೇಶದಲ್ಲಿ ಆ್ಯಪ್ಗಳ ಬಗ್ಗೆ ಹೆಚ್ಚು ಪ್ರೋತ್ಸಾಹ ದೊರಕುತ್ತಿದ್ದು, ಅದೇ ರೀತಿ ಭಾರತದಲ್ಲಿ ಆಗಲಿದೆ ಎಂದು ಹೇಳಿದರು.
ಭಾರತ ಮೂಲದ ಆ್ಯಪ್ಗಳಾದ ಟ್ರೆಲ್, ರೋಪೋಸೋ ಹಾಗೂ ಶೇರ್ ಚಾಟ್ ಇತ್ತೀಚೆಗೆ ಹೆಚ್ಚು ಪ್ರಸಿದ್ಧಿ ಪಡೆಯುತ್ತಿವೆ. ನಮ್ಮ ದೇಶದಲ್ಲಿ ಪ್ರತಿಭೆಗಳಿಗೆ ಕೊರತೆಯಿಲ್ಲ. ಭಾರತ ಮೂಲದ ಆ್ಯಪ್ಗಳು ಕೇವಲ ಭಾರತಕ್ಕೆ ಮಾತ್ರ ಸೀಮಿತವಾಗದೆ ವಿಶ್ವದಲ್ಲೂ ಹೆಸರು ಮಾಡಬಹುದು ಎಂದು ತಿಳಿಸಿದರು.
ಹಣಗಳಿಕೆ ಕಷ್ಟ, ಅದೇ ದೊಡ್ಡ ಸವಾಲು:
ಬೇರೆ ದೇಶದ ಆ್ಯಪ್ಗಳು ಬೇಗ ಹಣ ಗಳಿಸುವುದು ಸುಲಭ. ಅದೇ ಭಾರತದಲ್ಲಿ ಎಷ್ಟೇ ಪ್ರಸಿದ್ಧ ಆ್ಯಪ್ ಇದ್ದರೂ ಹಣಗಳಿಕೆ ಆಗುತ್ತಿಲ್ಲ. ಮುಂದಿನ ದಿನಗಳಲ್ಲಿ 5ಜಿ ತಂತ್ರಜ್ಞಾನ, ಬಹುಭಾಷಾ ಸಾಮರ್ಥ್ಯ ಹೊಂದಿರುವ ಆ್ಯಪ್ ಹಾಗೂ 60 ಕೋಟಿಗೂ ಹೆಚ್ಚು ಇಂಟರ್ನೆಟ್ ಬಳಕೆದಾರರನ್ನು ಹೊಂದಿರುವ ಸಂದರ್ಭದಲ್ಲಿ ಭಾರತದ ಆ್ಯಪ್ಗಳಿಂದ ಜಗತ್ತು ಸಕಾರಾತ್ಮಕವಾಗಿ ಬದಲಾಗಲಿದೆ ಎಂಬ ಆಶಾಭಾವನೆಯನ್ನು ಗಣೇಶ್ ವ್ಯಕ್ತಪಡಿಸಿದರು.