ಬೆಂಗಳೂರು: ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಉಪಗ್ರಹ ಕೇಂದ್ರವನ್ನು ಸಚಿವ ಕೆ ಎಸ್ ಈಶ್ವರಪ್ಪ ಇಂದು ಉದ್ಘಾಟಿಸಿದರು.
ಕೆ ಜಿ ರಸ್ತೆಯಲ್ಲಿರುವ ರಾಜ್ಯ ಪಂಚಾಯತ್ ರಿಸೋರ್ಸ್ ಸೆಂಟರ್ನಲ್ಲಿರುವ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಉಪಗ್ರಹ ಕೇಂದ್ರವನ್ನು ಉದ್ಘಾಟಿಸಿ ಮಾತನಾಡಿದ ಸಚಿವರು, ಗ್ರಾಮೀಣ ಭಾಗದಲ್ಲಿ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಸ್ಥಾಪಿಸಲು ಖಾಸಗಿ ಸಂಸ್ಥೆಗಳು ಮುಂದೆ ಬಂದಿವೆ. ಶುದ್ಧ ಕುಡಿಯುವ ನೀರಿನ ಘಟಕಕ್ಕೆ ಅಗತ್ಯ ಭೂಮಿ, ನೀರು, ವಿದ್ಯುತ್ ನೀಡಿದರೆ ಸಾಕು, ಯಾವುದೇ ಆರ್ಥಿಕ ನೆರವು ನೀಡಬೇಕಿಲ್ಲ. ಖಾಸಗಿ ಸಂಸ್ಥೆಗಳು ಶುದ್ಧೀಕರಿಸಿದ ನೀರನ್ನು ಸಾರ್ವಜನಿಕರಿಗೆ ನೀಡಲಿವೆ. ಸರ್ಕಾರ ನಿಗದಿಪಡಿಸಿದ ದರದಲ್ಲೇ ನೀರನ್ನು ನೀಡಲಾಗುತ್ತದೆ ಎಂದು ಹೇಳಿದರು.
ರಾಜ್ಯದಲ್ಲಿ 18 ಸಾವಿರ ಶುದ್ಧ ಕುಡಿಯುವ ನೀರಿನ ಘಟಕಗಳಲ್ಲಿ ಬಹಳಷ್ಟು ಹಾಳಾಗಿವೆ. ಗ್ರಾಮ ಪಂಚಾಯತ್‌ಗಳಲ್ಲಿ ಹೊಸದಾಗಿ ಫಲಕ ಪ್ರದರ್ಶಿಸಿ, ಎಷ್ಟು ಶುದ್ಧ ನೀರಿನ ಘಟಕಗಳು ಕಾರ್ಯ ನಿರ್ವಹಿಸುತ್ತಿವೆ ಎಂಬುದನ್ನು ಅರಿತು, ಕಾರ್ಯ ಸ್ಥಗಿತಗೊಳಿಸಿರುವ ಘಟಕಗಳನ್ನು ದುರಸ್ಥಿಗೊಳಿಸಲು ತಿಳಿಸಲಾಗಿದೆ. ರಾಜ್ಯದ 6,021 ಗ್ರಾಮ ಪಂಚಾಯತ್‌ಗಳನ್ನು ಘನತ್ಯಾಜ್ಯ ನಿರ್ವಹಣೆ ಮಾಡಲು ಸೂಚಿಸಲಾಗಿದೆ. ಕೇಂದ್ರ ಸರ್ಕಾರ ಇದಕ್ಕಾಗಿ ಪ್ರತಿ ಗ್ರಾಮ ಪಂಚಾಯತ್‌ಗೆ 20 ಲಕ್ಷ ರೂ. ನೀಡಿದೆ. ಆರಂಭಿಕವಾಗಿ 10 ಲಕ್ಷ ರೂ. ಬಿಡುಗಡೆ ಮಾಡಲಾಗುವುದು. ಸ್ವಚ್ಛ ಭಾರತ ಕಾರ್ಯಕ್ರಮಕ್ಕೆ ಪೂರಕವಾಗಿ ಘನತ್ಯಾಜ್ಯ ನಿರ್ವಹಣೆ ಕೈಗೊಳ್ಳಲಾಗುತ್ತಿದೆ ಎಂದರು.
ಇದೇ ಸಂದರ್ಭದಲ್ಲಿ ಎಸ್ಡಿಪಿಐ ಕಾರ್ಯಕರ್ತರ ಬಂಧನ ವಿಚಾರಕ್ಕೆ ಪ್ರತಿಕ್ರಿಯಿಸಿದ ಈಶ್ವರಪ್ಪ, ದೇಶದಲ್ಲಿ ನ್ಯಾಯಯುತವಾಗಿ ಪ್ರತಿಭಟಿಸುವ ಹಕ್ಕು ಎಲ್ಲರಿಗೂ ಇದೆ. ಸಂವಿಧಾನದಲ್ಲಿ ಪ್ರತಿಭಟಿಸುವುದಕ್ಕೆ ಅವಕಾಶ ನೀಡಲಾಗಿದೆ. ಸಿಎಎ ಸಂಸತ್ನಲ್ಲಿ ಬಹುಮತದೊಂದಿಗೆ ಪಾಸ್ ಆಗಿದೆ. ಇದರ ವಿರುದ್ಧ ಪ್ರತಿಭಟನೆಗೆ ಅವಕಾಶವಿದೆ. ಆದರೆ, ಕಾನೂನನ್ನು ಕೈಗೆತ್ತಿಕೊಳ್ಳುವುದು ತಪ್ಪು. ದೇಶಕ್ಕೆ ವಿರುದ್ಧವಾಗಿ ದೇಶದ್ರೋಹಿ ಚಟುವಟಿಕೆ ನಡೆಸಲಾಗುತ್ತಿದೆ. ಹೀಗಾಗಿ ಈ ಕುರಿತು ಕೇಂದ್ರಕ್ಕೆ ವರದಿ ನೀಡಿ, ಅಗತ್ಯ ಕ್ರಮಕೈಗೊಳ್ಳಲು ರಾಜ್ಯ ಸರ್ಕಾರ ನಿರ್ಧರಿಸಿದೆ ಎಂದರು.
ಈ ವೇಳೆ ಗ್ರಾಮೀಣಾಭಿವೃದ್ಧಿ ಪ್ರಧಾನ ಕಾರ್ಯದರ್ಶಿ ಅತೀಕ್, ಗ್ರಾಮೀಣಾಭಿವೃದ್ಧಿ ಇಲಾಖೆ ನಿರ್ದೇಶಕ ಜುಲ್ಪಿಕರ್ ಮತ್ತಿತರರು ಉಪಸ್ಥಿತರಿದ್ದರು.