ಬೆಂಗಳೂರು : ಸದಾ ಬೆಲೆಯಲ್ಲಿ ಅಸ್ಥಿರತೆ ಹೊಂದುವ ಮೂಲಕ ಒಮ್ಮೆ ರೈತರ, ಇನ್ನೊಮ್ಮೆ ಮಾರಾಟಗಾರರ ಕಣ್ಣಲ್ಲಿ ನೀರು ತರಿಸುವ ಈರುಳ್ಳಿ, ಗ್ರಾಹಕರ ಪಾಲಿಗಂತೂ ಸದಾ ಗೊಂದಲ ಮೂಡಿಸುತ್ತಿದೆ. ಸದ್ಯ ಒಂದು ಹಂತಕ್ಕೆ ಬೆಲೆ ಸ್ಥಿರಗೊಂಡಂತೆ ಕಂಡರೂ, ಇದನ್ನು ಹೆಚ್ಚು ದಿನ ಈ ಬೆಲೆ ಉಳಿಸಿಕೊಳ್ಳಲು ಮಾರುಕಟ್ಟೆಗೆ ಸಾಧ್ಯವಾಗಲ್ಲ.
ಒಂದು ಸಾರಿ ಕೆಜಿಗೆ 200 ರೂ.ವರೆಗೂ ತಲುಪಿದ್ದ ಈರುಳ್ಳಿ ಬೆಲೆ, ಗ್ರಾಹಕರ ಕಣ್ಣಲ್ಲಿ ನೀರು ಬರಿಸಿತ್ತು. ಸದ್ಯ 30 ರಿಂದ 40 ರೂ. ಬೆಲೆ ಇದ್ದರೂ ಅದು ಎಷ್ಟು ದಿನ ಉಳಿಯಲಿದೆ ಅನ್ನೋದು ಅಧಿಕೃತವಾಗಿ ಯಾರೂ ಹೇಳಲಾಗಲ್ಲ.
ಇದರ ಬೆಲೆ ಅಸ್ಥಿರತೆಗೆ ಅನುಗುಣವಾಗಿ ಇದನ್ನು ಒಂದು ರಾಜಕೀಯ ವಿಷಯವಾಗಿ ಪರಿಗಣಿಸಲಾಗಿದೆ. ಯಾವುದೇ ಸಂದರ್ಭ ಇದರ ಬೆಲೆ ಹೆಚ್ಚಾದ್ರೂ, ಅದನ್ನು ನಿಯಂತ್ರಿಸುವ ಹೊತ್ತಿಗೆ ಸರ್ಕಾರಗಳಿಗೆ ಬೆವರು ಇಳಿದಿರುತ್ತದೆ. ತರಕಾರಿ ಬೆಲೆ ಏರಿಕೆ 1980ರಲ್ಲಿ ಜನತಾಪಕ್ಷ ಸರ್ಕಾರವನ್ನು ಪತನಗೊಳಿಸಿತ್ತು ಅನ್ನೋದನ್ನು ಇಲ್ಲಿ ಗಮನಿಸಬಹು.
ಉಳಿದ ತರಕಾರಿಗಳ ಮಾದರಿಯಲ್ಲಿ ಇದರ ದರ ಇರಲ್ಲ. ಹಬ್ಬ-ಹರಿದಿನಗಳು ಬಂದ ಸಂದರ್ಭ ಏಕಾಏಕಿ ಬೇಡಿಕೆ ಜೊತೆ ಬೆಲೆಯೂ ಹೆಚ್ಚಾಗುತ್ತದೆ. ಸದ್ಯ ಸಾಲು ಸಾಲು ಹಬ್ಬಗಳು ಮುಂದಿನ ದಿನಗಳಲ್ಲಿ ಬರಲಿವೆ. ಬೆಲೆ ಏರಿಕೆ ಬಹುತೇಕ ಖಚಿತ ಎನ್ನಬಹುದು. ಇನ್ನೊಂದೆಡೆ ಕರ್ನಾಟಕಕ್ಕೆ ಅಕ್ಕಪಕ್ಕದ ರಾಜ್ಯಗಳಿಂದ ಕೂಡ ಈರುಳ್ಳಿ ಆಮದು ಆಗುತ್ತದೆ.
ರಾಜ್ಯದ ಕೆಲ ಜಿಲ್ಲೆಗಳಿಂದಲೂ ಬೆಂಗಳೂರು ಮಾರುಕಟ್ಟೆಗೆ ಈರುಳ್ಳಿ ಪೂರೈಕೆ ಆಗುತ್ತದೆ. ಆದರೆ, ಅಕ್ಕಪಕ್ಕದ ರಾಜ್ಯಗಳಲ್ಲಿ ಕಳೆದ ಕೆಲ ದಿನಗಳಿಂದ ನಿರಂತರವಾಗಿ ಸುರಿಯುತ್ತಿರುವ ಮಳೆಗೆ ಈರುಳ್ಳಿ ಬೆಳೆ ಹಾಳಾಗಿದೆ. ಇದರ ಜೊತೆ ಕೀಟಬಾಧೆ ಕೂಡ ಕಾಡಿದ್ದು, ಮುಂದಿನ ದಿನಗಳಲ್ಲಿ ಈರುಳ್ಳಿ ಬೆಲೆ 50 ರಿಂದ 60 ರೂ.ಗೆ ಏರಿಕೆಯಾದ್ರೂ ಅಚ್ಚರಿಯಿಲ್ಲ ಎಂಬ ಮಾತು ಕೇಳಿ ಬರುತ್ತಿದೆ.
ದೇಶದಲ್ಲಿ ಈರುಳ್ಳಿ ಬೆಳೆಯುವ ಪ್ರಮಾಣದಲ್ಲಿ ಶೇ.40%ರಷ್ಟು ಪಾಲನ್ನು ಹೊಂದಿರುವ ಮಹಾರಾಷ್ಟ್ರ, ಈ ಸಾರಿ ಸಂಪೂರ್ಣ ಕೊರೊನಾ ಆತಂಕದಿಂದ ಕಂಗೆಟ್ಟಿದೆ. ಇಲ್ಲಿನ ರೈತರು ಬೆಳೆದ ಬೆಳೆಯನ್ನು ಸಕಾಲಕ್ಕೆ ಮಾರುಕಟ್ಟೆಗೆ ತರಲು ಸಾಧ್ಯವಾಗುತ್ತಿಲ್ಲ. ಮಾರುಕಟ್ಟೆ ಹಾಗೂ ಸಾರಿಗೆ ವ್ಯವಸ್ಥೆ ಕೂಡ ಸಂಪೂರ್ಣ ಹದಗೆಟ್ಟಿದೆ. ಈ ಎಲ್ಲಾ ಕಾರಣಗಳಿಂದ ಈರುಳ್ಳಿ ಪೂರೈಕೆ ವ್ಯತ್ಯಯವಾಗಿದೆ. ಸದ್ಯ ಸುಮಾರು 20-25 ರೂ. ಇರಬೇಕಿದ್ದ ಈರುಳ್ಳಿ ಬೆಲೆ 30ರಿಂದ 40 ರೂ. ತಲುಪಿದೆ.
ರಾಜ್ಯದ ಚಿತ್ರದುರ್ಗ, ಬಳ್ಳಾರಿ, ಬಾಗಲಕೋಟೆ, ಧಾರವಾಡ ಹಾಗೂ ಬೆಳಗಾವಿ ಸೇರಿ ವಿವಿಧ ಪ್ರದೇಶದಲ್ಲಿ ಈರುಳ್ಳಿ ಬೆಳೆಯಲಾಗುತ್ತದೆ. ಇದು ಸೇರಿದಂತೆ ಮಹಾರಾಷ್ಟ್ರದಿಂದ ಪ್ರತಿದಿನ ರಾಜ್ಯದ ರಾಜಧಾನಿ ಬೆಂಗಳೂರಿಗೆ 120 ರಿಂದ 150 ಮಿನಿ ಲಾರಿಗಳಲ್ಲಿ ಸರಬರಾಜಾಗುತ್ತಿದ್ದ ಈರುಳ್ಳಿ ಈಗಾಗಲೇ 100 ಲಾರಿಗಳಿಗೆ ಇಳಿಕೆಯಾಗಿದೆ. ಸದ್ಯ ಬೆಂಗಳೂರು ಎಪಿಎಂಸಿ ಈರುಳ್ಳಿ ಕೊರತೆ ಎದುರಿಸುತ್ತಿದೆ.
ಈರುಳ್ಳಿ ಬೆಳೆಯುವ ಮಹಾರಾಷ್ಟ್ರ, ಗುಜರಾತ್ ಮಧ್ಯಪ್ರದೇಶ ಮತ್ತಿತರ ರಾಜ್ಯಗಳಿಂದ ಈರುಳ್ಳಿ ತರಿಸಿಕೊಳ್ಳಲಾಗುತ್ತಿದೆ. ಅಲ್ಲದೆ ದೇಶ ಎದುರಿಸುತ್ತಿರುವ ಸಮಸ್ಯೆ ನಿವಾರಣೆಗೆ ಈಜಿಪ್ಟ್ ಹಾಗೂ ಟರ್ಕಿ ಮುಂತಾದ ರಾಷ್ಟ್ರಗಳಿಂದ ಕೂಡ ಈರುಳ್ಳಿ ಆಮದು ಮಾಡಿಕೊಳ್ಳಲಾಗಿದೆ. ಈ ಹಿನ್ನೆಲೆ ಒಂದು ಸಂದರ್ಭ 200 ರೂ.ವರೆಗೂ ತಲುಪಿದ್ದ ಈರುಳ್ಳಿ ಬೆಲೆ ಈಗ ಸಾಕಷ್ಟು ಕಡಿಮೆಯಾಗಿದೆ.
ಗುಣಮಟ್ಟದ ಪೂರೈಕೆ ಇಲ್ಲ : ಸದ್ಯ ಬೆಂಗಳೂರು ಎಪಿಎಂಸಿ ಮಾರುಕಟ್ಟೆಗೆ ಈ ಹಿಂದಿನಷ್ಟು ಗುಣಮಟ್ಟದ ಈರುಳ್ಳಿ ಪೂರೈಕೆ ಆಗುತ್ತಿಲ್ಲ. ಮಹಾರಾಷ್ಟ್ರದಿಂದ ನಮಗೆ ಪೂರೈಕೆಯಾಗುತ್ತಿತ್ತು. ಅಲ್ಲಿ ಮಳೆ ಆದ ಹಿನ್ನೆಲೆ ಜತೆಗೆ ಕೊರೊನಾ ಸಂಕಷ್ಟದಿಂದಾಗಿ, ಸೂಕ್ತ ಮಾರುಕಟ್ಟೆ ಹಾಗೂ ಸಾಕಾಣಿಕೆ ವ್ಯವಸ್ಥೆ ಇಲ್ಲದೆ ಪೂರೈಕೆ ನಿಂತಿದೆ.
ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಬೆಲೆ ನಿಯಂತ್ರಣಕ್ಕೆ ಸಾಕಷ್ಟು ಕ್ರಮ ಕೈಗೊಂಡಿವೆ. ಹಬ್ಬದ ದಿನಗಳಲ್ಲಿ ಹೆಚ್ಚಿನ ಬೇಡಿಕೆ ಬರುವ ಹಿನ್ನೆಲೆ ಹೆಚ್ಚು ಸಂಗ್ರಹಕ್ಕೆ ಒತ್ತು ಕೊಟ್ಟಿದ್ದೇವೆ ಎಂದು ಬೆಂಗಳೂರು ಎಪಿಎಂಸಿ ನಿರ್ದೇಶಕ ರವಿಶಂಕರ್ ಅಭಿಪ್ರಾಯ ಪಟ್ಟಿದ್ದಾರೆ.
ಒಂದು ಬೆಲೆ ನಿಗದಿಪಡಿಸಲಿ : ದಿನಕ್ಕೊಂದು ಬೆಲೆ ಇದ್ದರೆ ನಮ್ಮಂತ ಚಿಲ್ಲರೆ ವ್ಯಾಪಾರಿಗಳಿಗೆ ಸಾಕಷ್ಟು ಸಮಸ್ಯೆ ಆಗಲಿದೆ. ನಾವು ಕನಿಷ್ಠ ಒಂದೆರಡು ವಾರಕ್ಕೆ ಆಗುವಷ್ಟು ಈರುಳ್ಳಿಯನ್ನು ಸಗಟು ವ್ಯಾಪಾರಿಗಳ ಬಳ್ಳಿ ಖರೀದಿಸಿ ತರುತ್ತೇವೆ. ಆದರೆ, ತಂದ ಎರಡೇ ದಿನಕ್ಕೆ ಬೆಲೆಯಲ್ಲಿ ಏರಿಳಿತ ಆಗುತ್ತದೆ.
ಇದರಿಂದಾಗಿ ಸಮಸ್ಯೆಯಾಗುತ್ತಿದೆ. ಒಂದು ನಿಗದಿತ ಬೆಲೆಯನ್ನು ಕಾಯ್ದುಕೊಳ್ಳುವ ಕಾರ್ಯವನ್ನು ಸರ್ಕಾರ ಮಾಡಬೇಕು. ಆಗ ರೈತರು ಮಾರಾಟಗಾರರು, ಗ್ರಾಹಕರು ನೆಮ್ಮದಿಯಾಗಿ ಇರಲು ಸಾಧ್ಯ ಎನ್ನುತ್ತಾರೆ ಹೊಸಕೆರೆಹಳ್ಳಿ ದಿನಸಿ ಹಾಗೂ ತರಕಾರಿ ವ್ಯಾಪಾರಿ ನಾಗರಾಜ್.