ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಕೇಂದ್ರ ಕಚೇರಿ ಮುಂದೆ ನ್ಯಾಯಕ್ಕಾಗಿ ಆಗ್ರಹಿಸಿ ಬೋರ್ಡ್ ಹಿಡಿದು ವೃದ್ಧರೊಬ್ಬರು ಧರಣಿ ನಡೆಸುತ್ತಿದ್ದಾರೆ.
ಚಿಕ್ಕಪೇಟೆ ಕಂದಾಯ ಕಚೇರಿಯಲ್ಲಿ ಕಂದಾಯ ಮೌಲ್ಯಮಾಪಕನಾಗಿ ಕೆಲಸ ನಿರ್ವಹಿಸುತ್ತಿದ್ದ ಎನ್ ಜಿ ರೂಗಿ 2007 ರಲ್ಲೇ ನಿವೃತ್ತಿಯಾಗಿದ್ದಾರೆ. ಆದರೆ ಸೇವೆಯಲ್ಲಿದ್ದಾಗ ಹಣ ದುರುಪಯೋಗದ ಆರೋಪ ಎದುರಿಸುತ್ತಿದ್ದರು. ಬಳಿಕ ಪ್ರಕರಣವನ್ನು ಕೋರ್ಟ್ ಇತ್ಯರ್ಥಗೊಳಿಸಿದ್ದರೂ, ಪಾಲಿಕೆ ಕಚೇರಿಯಿಂದ ಪಿಂಚಣಿ ದೊರೆಯುತ್ತಿಲ್ಲ, ಬಿಬಿಎಂಪಿ 2018 ರಿಂದ ಪಿಂಚಣಿ ನೀಡುತ್ತಿಲ್ಲ. ದಾಖಲೆ ಕೇಳಿ ಸತಾಯಿಸುತ್ತಿದ್ದಾರೆ ಎಂದು ಆರೋಪಿಸಿ ಧರಣಿ ನಡೆಸುತ್ತಿದ್ದಾರೆ.
ಈ ವೇಳೆ ಮಾತನಾಡಿದ ಎನ್ .ಜಿ ರೂಗಿ, 2007 ರಲ್ಲಿ ನಿವೃತ್ತಿ ಆಗಿದೇನೆ. ದಿನಾಲೂ ಕಚೇರಿಗೆ ಬಂದ್ರೆ ಯಾವುದೇ ಪ್ರಯೋಜನವಾಗುತ್ತಿಲ್ಲ. ದಾಖಲೆಗಳಿಲ್ಲ ಅಂತ ಅಲೆದಾಡಿಸುತ್ತಿದ್ದಾರೆ. ಕಚೇರಿಗಳಲ್ಲಿ ದಾಖಲೆ ಇಟ್ಟಿಕೊಳ್ಳಬೇಕಾಗಿದ್ದು, ಅವರ ಜವಾಬ್ದಾರಿ. ಆದರೂ ಇಟ್ಟಿಲ್ಲ. ಅಲ್ಲದೇ ಈಗ ಪಿಂಚಣಿ ನೀಡಬೇಕಾದರೆ ಇಪ್ಪತ್ತು ಸಾವಿರ ದುಡ್ಡು ಕೇಳುತ್ತಿದ್ದಾರೆ. ನಾನು ಧರಣಿ ಕುಳಿತುಕೊಳ್ಳುತ್ತೇನೆ. ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ. ಆತ್ಮಹತ್ಯೆಗೆ ವಿಷ ಕುಡಿಯಬೇಕಾಗಿಲ್ಲ, ಶುಗರ್ ಸಮಸ್ಯೆ ಇರೋದ್ರಿಂದ ಸಕ್ಕರೆ ತಿಂದೇ ಸಾಯುತ್ತೇನೆ ಎಂದು ಬೇಸರ ವ್ಯಕ್ತಪಡಿಸಿದರು.