ಬೆಂಗಳೂರು: ಬಿಬಿಎಂಪಿ ಕರಡು ಘನತ್ಯಾಜ್ಯ ನಿರ್ವಹಣಾ ಬೈಲಾವನ್ನು ಅಂತಿಮಗೊಳಿಸಿ ಸಾರ್ವಜನಿಕರ ಪ್ರತಿಕ್ರಿಯೆಗೆ ಬಿಟ್ಟಿದ್ದು, ನಾಳೆ ಅಂತಿಮ ದಿನವಾಗಿದೆ.
ಈ ಮಧ್ಯೆ ಘನತ್ಯಾಜ್ಯ ನಿರ್ವಹಣಾ ರೌಂಡ್ ಟೇಬಲ್ ಎಂಬ ಸಂಘಟನೆಯು ಪಾಲಿಕೆಯ ಈ ಬೈಲಾಕ್ಕೆ ಹಲವು ಆಕ್ಷೇಪ ವ್ಯಕ್ತಪಡಿಸಿದೆ. ಈ ಬೈಲಾ, ಹೈಕೋರ್ಟ್ ನಿರ್ದೇಶನಗಳನ್ನು ದುರ್ಬಲಗೊಳಿಸಿದ್ದು,ಮತ್ತೆ ಬೈಲಾ ಪುನರ್ರಚನೆಯಾಗಬೇಕೆಂದು ಒತ್ತಾಯಿಸಿದ್ದಾರೆ.
![Objection from Round Table Organization for Draft Solid Waste Bylaw of BBMP](https://etvbharatimages.akamaized.net/etvbharat/prod-images/4914779_thum.jpg)
ಪ್ರಮುಖ ಆಕ್ಷೇಪಗಳು
-ಬಿಬಿಎಂಪಿಯು ಉತ್ಪತ್ತಿಯಾಗುವ 5700 ಟನ್ನಷ್ಟು ಕಸದ ನಿರ್ವಹಣೆ ಬಗ್ಗೆ ಬೈಲಾದಲ್ಲಿ ಸ್ಪಷ್ಟಪಡಿಸಿಲ್ಲ ಹಾಗೂ ಡಂಪಿಂಗ್ ಜಾಗಕ್ಕೆ ಹಾಕುವುದನ್ನು ತಡೆಗಟ್ಟುವ ಯೋಜನೆ ಪ್ರಸ್ತಾಪಿಸಿಲ್ಲ.
-ಬೈಲಾದಲ್ಲಿ ಮತ್ತೆ ಶೇಕಡಾ 35ರಷ್ಟು ಲ್ಯಾಂಡ್ಫಿಲ್ಗೆ ಕಸ ಹಾಕುವ ಪ್ರಸ್ತಾವವಿದ್ದು,ಇದು ಕಾನೂನುಬಾಹಿರ ಹಾಗೂ ಕಾಯ್ದೆಯ ವಿರುದ್ಧವಾಗಿದೆ.
-ಹಬ್ಬ,ಸಮಾರಂಭಗಳ ತ್ಯಾಜ್ಯ ನಿರ್ವಹಣೆ ಬಗ್ಗೆ ಉಲ್ಲೇಖವಿಲ್ಲ.
-ಬಿಬಿಎಂಪಿ ತ್ಯಾಜ್ಯ ನಿರ್ವಹಣೆಗೆ ಮಾಡುವ ವೆಚ್ಚ ಹಾಗೂ ಬೃಹತ್ ತ್ಯಾಜ್ಯ ಉತ್ಪಾದಕರಿಗೆ ವಿಧಿಸುವ ವೆಚ್ಚದಲ್ಲಿ ಏರುಪೇರಿದ್ದು,ಬೃಹತ್ ತ್ಯಾಜ್ಯ ಉತ್ಪಾದಕರಿಗೆ ಶೇಕಡಾ 80ರಷ್ಟು ಸಬ್ಸಿಡಿ ನೀಡಿದಂತಾಗುತ್ತದೆ.
-ಈ ಬೈಲಾ ಕಸ ಸಂಗ್ರಹ ಹಾಗೂ ನಿರ್ವಹಣೆಗೆ ಔಟ್ ಸೋರ್ಸ್ ಗುತ್ತಿಗೆದಾರರಿಗೇ ಅನುಮತಿ ನೀಡುವುದರಿಂದ ಗುತ್ತಿಗೆದಾರರ ಏಕಸ್ವಾಮ್ಯವನ್ನು ಮರಳಿ ತರುತ್ತದೆ.
-ವಾರ್ಡ್ ಮಟ್ಟದಲ್ಲಿ ತ್ಯಾಜ್ಯ ಸಂಸ್ಕರಿಸುವ ಕುರಿತು ಗಮನವಿಲ್ಲ.
ಹೀಗಾಗಿ ಈಗಾಗಲೇ ಪಾಲಿಕೆ ರಚಿಸಿರುವ ಕರಡು ಘನತ್ಯಾಜ್ಯ ನಿರ್ವಹಣಾ ಬೈಲಾವನ್ನು ಸಾರಾಸಗಟಾಗಿ ತಿರಸ್ಕರಿಸಬೇಕು ಎಂದು ಸಂಘಟನೆ ಅಭಿಪ್ರಾಯ ವ್ಯಕ್ತಪಡಿಸಿದೆ.