ಬೆಂಗಳೂರು: ವಲಸೆ ಕಾರ್ಮಿಕರು ತಮ್ಮ ತವರಿಗೆ ತೆರಳಲು ರಾಜ್ಯ ಸರ್ಕಾರ ಅನುಮತಿ ನೀಡಿದ ಬೆನ್ನಲ್ಲೇ, ಒಂದು ಕಡೆ ಟಿಕೆಟ್ ದರ ದುಬಾರಿಯಾದರೆ, ಇನ್ನೊಂದೆಡೆ ಅಧಿಕಾರಿಗಳ ನಿರ್ಲಕ್ಷ್ಯದಿಂದ ಕೆಂಪೇಗೌಡ ಬಸ್ ನಿಲ್ದಾಣದಲ್ಲಿ ಸಾಮಾಜಿಕ ಅಂತರವಿಲ್ಲದೆ ಜನ ಜಾತ್ರೆ ಕಂಡು ಬಂತು.
ಕೇಂದ್ರ ಗೃಹ ಇಲಾಖೆ ವಲಸೆ ಕಾರ್ಮಿಕರನ್ನು ತಮ್ಮ ಸ್ವಂತ ಊರಿಗೆ ಹೋಗಲು ಅನುಮತಿ ಕೊಟ್ಟ ಹಿನ್ನೆಲೆ, ಎಲ್ಲಾ ರಾಜ್ಯಗಳು ಈ ನಿಟ್ಟಿನಲ್ಲಿ ಕೆಲಸ ಮಾಡುತ್ತಿವೆ. ಆದರೆ ಕೊರೊನಾ ಸೋಂಕಿನಿಂದ ದೂರವಿರಲು ಇರುವ ಅಸ್ತ್ರ ಸಾಮಾಜಿಕ ಅಂತರ. ಸದ್ಯ ಇದನ್ನೇ ಗಾಳಿಗೆ ತೂರಿರುವ ಅಧಿಕಾರಿಗಳು ಒಂದು ಬಸ್ನಲ್ಲಿ 30 ಪ್ರಯಾಣಿಕರಿಲ್ಲದೆ ಹೋಗುವುದಿಲ್ಲ ಎಂದು ಹೇಳುತ್ತಿದ್ದಾರೆ.
ಸಂಚಾರ ವ್ಯವಸ್ಥೆ ಇಲ್ಲದ ಕಾರಣ ನಾವು ನಡೆದುಕೊಂಡು ಇಲ್ಲಿಗೆ ಬಂದಿದ್ದೇವೆ. ಸರ್ಕಾರ ಸಾಮಾಜಿಕ ಅಂತರ ಕಾಪಾಡಿ ಎಂದು ಹೇಳುತ್ತೆ, ಇಲ್ಲಿ 90ಕ್ಕೂ ಹೆಚ್ಚು ಜನರನ್ನ ಒಂದೇ ಕಡೆ ಇರಿಸಿದೆ. ಮಕ್ಕಳು ಹಾಗೂ ವೃದ್ಧರು ಇಲ್ಲಿ ಇದ್ದಾರೆ ಎಂದು ಪ್ರಯಾಣಿಕರೊಬ್ಬರು ಆತಂಕ ವ್ಯಕ್ತಪಡಿಸಿದರು.