ಬೆಂಗಳೂರು: ನಾವು ಯುವಕರು ಇನ್ನೂ ಹಲವು ವರ್ಷ ಪಕ್ಷವನ್ನು ಕಟ್ಟಬೇಕು ನಾವೆಲ್ಲಾ ಪಕ್ಷದ ಆಸ್ತಿ, ಇಂದಲ್ಲಾ ನಾಳೆ ಪಕ್ಷ ನಮ್ಮನ್ನು ಪರಿಗಣಿಸಲಿದೆ. ಹಾಗಾಗಿ ಮುಖ್ಯಮಂತ್ರಿಗಳ ಮೇಲೆ ಹೆಚ್ಚಿನ ಒತ್ತಡ ಹಾಕುವುದಿಲ್ಲ. ಸಿಎಂ ಅವಕಾಶ ಕೊಡುವವರೆಗೂ ಕಾಯುತ್ತೇವೆ ಎಂದು ಸಚಿವ ಸ್ಥಾನದ ಆಕಾಂಕ್ಷಿ ರಾಜೂಗೌಡ ಹೇಳಿದ್ದಾರೆ.
ಗೃಹ ಕಚೇರಿ ಕೃಷ್ಣಾದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನನಗೆ ಮಂತ್ರಿ ಸ್ಥಾನ ಕೊಡುವಂತೆ ನನ್ನ ಬೆಂಬಲಿಗರು ಪ್ರತಿಭಟನೆ ಮಾಡಿಲ್ಲ, ಆದರೆ ಸಚಿವ ಸ್ಥಾನ ನೀಡುವಂತೆ ಮನವಿ ಮಾಡಿದ್ದಾರೆ ಅಷ್ಟೇ. ಪ್ರತಿಭಟನೆ ಮಾಡದಂತೆ ನಾನು ನನ್ನ ಕಾರ್ಯಕರ್ತರಿಗೆ ಮನವಿ ಮಾಡುತ್ತೇನೆ. ಈಗಾಗಲೇ ನನ್ನ ಮೇಲೆ ನಮ್ಮ ನಾಯಕರಾದ ಯಡಿಯೂರಪ್ಪ ಬಹಳ ಪ್ರೀತಿ ತೋರಿದ್ದಾರೆ. ಮುಂದೆ ಮತ್ತಷ್ಟು ಪ್ರೀತಿ ತೋರಿಸೋ ಮೂಲಕ ತನ್ನನ್ನು ಸಂಪುಟಕ್ಕೆ ಸೇರಿಸಿಕೊಳ್ತಾರೆ ಎಂಬ ನಂಬಿಕೆ ಇದೆ. ನಾನು ಅಲ್ಲಿಯವರೆಗೆ ಕಾಯುತ್ತೇನೆ ಎಂದರು.
ಸಂಪುಟ ರಚನೆ ಬಳಿಕ ಸಿಎಂ ನನ್ನನ್ನು ಕರೆದು ಮಾತನಾಡಿದ್ದಾರೆ. ನಿಮ್ಮ ಹೆಸರು ಕಡೆಯವರಿಗೂ ಇತ್ತು, ನೀವು ಇನ್ನೂ ಸ್ವಲ್ಪ ಸಮಯ ಕಾಯಬೇಕು ಎಂದಿದ್ದಾರೆ. ಹಾಗಾಗಿ
ನಾನು ಕಾಯುತ್ತೇನೆ, ಅವಕಾಶ ಕೊಡಲಿ ಬಿಡಲಿ, ನಾವು ಪಕ್ಷದ ಆಸ್ತಿ, ಪಕ್ಷ ಸಂಘಟನೆ ಮಾಡುತ್ತೇನೆ ಎಂದರು.
ಇನ್ನು ಸಂಪುಟ ವಿಸ್ತರಣೆ ಯಾವಾಗ ಮಾಡ್ತಾರೆ ಅಂತ ಗೊತ್ತಿಲ್ಲ, ಸಚಿವ ಸ್ಥಾನ ಸಿಗಲಿ ಬಿಡಲಿ ಪಕ್ಷದಲ್ಲೇ ಇರುತ್ತವೆ, ಪಕ್ಷದಲ್ಲಿ ಕೆಲಸ ಮಾಡುತ್ತವೆ. ಪಕ್ಷ ಏನು ಜವಾಬ್ದಾರಿ ವಹಿಸುವುದೋ ಅದನ್ನು ನಿರ್ವಹಿಸಲಿದ್ದೇವೆ ಎಂದರು.