ಬೆಂಗಳೂರು: ಪ್ರವಾಸೋದ್ಯಮ ಇಲಾಖೆ ವತಿಯಿಂದ ಬೆಂಗಳೂರಿನ ತಾಜ್ ವೆಸ್ಟೆಂಡ್ ಹೋಟೆಲ್ನಲ್ಲಿ ಆಯೋಜಿಸಿರುವ ದಕ್ಷಿಣ ಭಾರತದ ಪ್ರವಾಸೋದ್ಯಮ ಸಚಿವರ ಸಮ್ಮೇಳನದಲ್ಲಿ ಕನ್ನಡ ಮಾಯವಾಗಿತ್ತು. ಕಾರ್ಯಕ್ರಮದ ವೇದಿಕೆಯಲ್ಲಿ ಹಿಂದಿ, ಇಂಗ್ಲಿಷ್ನಲ್ಲಿ ಮಾತ್ರ ಬ್ಯಾನರ್ ಇದ್ದು, ಕನ್ನಡ ಕಾಣಲೇ ಇಲ್ಲ. ಈ ಕುರಿತು ಅಸಮಾಧಾನ ವ್ಯಕ್ತವಾದ ಬಳಿಕ ಎಚ್ಚೆತ್ತು, ಕನ್ನಡದಲ್ಲಿ ಬ್ಯಾನರ್ ಹಾಕಲಾಯಿತು.
ಕನ್ನಡ ರಾಜ್ಯೋತ್ಸವ ಅಂಗವಾಗಿ ಕನ್ನಡ ಹಾಗೂ ಸಂಸ್ಕೃತಿ ಇಲಾಖೆ ವತಿಯಿಂದ 'ಲಕ್ಷ ಕಂಠಗಳಲ್ಲಿ' ಕನ್ನಡ ಗೀತಗಾಯನ ಕಾರ್ಯಕ್ರಮ ಆಯೋಜಿಸಲಾಗಿತ್ತು. ರಾಜ್ಯಾದ್ಯಂತ ಒಂದು ಸಾವಿರಕ್ಕೂ ಹೆಚ್ಚು ಸ್ಥಳಗಳಲ್ಲಿ ಐದು ಲಕ್ಷಕ್ಕೂ ಹೆಚ್ಚು ಕನ್ನಡಿಗರು ಕನ್ನಡ ಗೀತೆಗಳ ಲಕ್ಷ ಕಂಠ ಗೀತಗಾಯನದಲ್ಲಿ ಭಾಗಿಯಾದರು. ಆದ್ರೆ ಸರ್ಕಾರದ ಮಹತ್ವದ ಕಾರ್ಯಕ್ರಮದಲ್ಲಿ ಕನ್ನಡಕ್ಕೆ ಒತ್ತು ಕೊಟ್ಟಿಲ್ಲ.
ಇದನ್ನೂ ಓದಿ: 'ಲಕ್ಷಕಂಠಗಳಲ್ಲಿ' ಕನ್ನಡ ಗೀತಗಾಯನ.. 'ಕನ್ನಡಕ್ಕಾಗಿ ನಾವು' ಅಭಿಯಾನದಡಿ 5 ಲಕ್ಷ ಜನರಿಂದ ಗಾಯನ
ಪ್ರವಾಸೋದ್ಯಮ ಇಲಾಖೆ ವತಿಯಿಂದ ಆಯೋಜನೆಗೊಂಡ ದಕ್ಷಿಣ ಭಾರತದ ಪ್ರವಾಸೋದ್ಯಮ ಸಚಿವರ ಸಮ್ಮೇಳನದಲ್ಲಿ ಕನ್ನಡ ಕಾಣಲಿಲ್ಲ. ವೇದಿಕೆಯಲ್ಲಿ ಕೇವಲ ಹಿಂದಿ, ಇಂಗ್ಲೀಷ್ ಭಾಷೆಯಲ್ಲಿ ಮಾತ್ರ ಬ್ಯಾನರ್ ಇತ್ತು.
ತಾಜ್ ವೆಸ್ಟೆಂಡ್ ಹೋಟೆಲ್ನಲ್ಲಿ ನಡೆಯುತ್ತಿರುವ ಎರಡು ದಿನಗಳ ಕಾಲದ ದಕ್ಷಿಣ ರಾಜ್ಯಗಳ ಪ್ರವಾಸೋದ್ಯಮ ಸಚಿವರ ಸಮ್ಮೇಳನದ ವೇದಿಕೆಯ ಬ್ಯಾನರ್ನಲ್ಲಿ ಕನ್ನಡ ಬಳಸದ ಬಗ್ಗೆ ರಾಜ್ಯ ಪ್ರವಾಸೋದ್ಯಮ ಸಚಿವ ಆನಂದ್ ಸಿಂಗ್ ಆಕ್ಷೇಪ ವ್ಯಕ್ತಪಡಿಸಿದರು,
ಕಾರ್ಯಕ್ರಮ ನಡೆಯುತ್ತಿದ್ದ ವೇದಿಕೆಗೆ ಪ್ರವಾಸೋದ್ಯಮ ಇಲಾಖೆ ಮಹಾನಿದೇರ್ಶಕ ಗಂಜಿ ಕಮಲ ವರ್ಧನ್ ರಾವ್ ಅವರನ್ನು ಕರೆಸಿಕೊಂಡ ಸಚಿವರು, ಕೇಂದ್ರ ಪ್ರವಾಸೋದ್ಯಮ ಇಲಾಖೆ ಆಯೋಜಿಸಿರುವ ಕಾರ್ಯಕ್ರಮ ಆದರೂ ಸಹ ವೇದಿಕೆಯಲ್ಲಿ ಕನ್ನಡ ಇಲ್ಲದಿರುವ ಬಗ್ಗೆ ಅಧಿಕಾರಿ ಬಳಿ ಕೇಳಿ, ಆಕ್ಷೇಪ ವ್ಯಕ್ತಪಡಿಸಿದರು. ಕೂಡಲೇ ವೇದಿಕೆಯ ಬ್ಯಾನರ್ನಲ್ಲಿ ಕನ್ನಡ ಭಾಷೆ ಬಳಸುವಂತೆ ತಾಕೀತು ಮಾಡಿದರು.
ಈ ಬಗ್ಗೆ ಸುದ್ದಿ ಬಿತ್ತರವಾಗುತ್ತಿದ್ದಂತೆ, ಸಚಿವರು ಆಕ್ರೋಶ ವ್ಯಕ್ತಪಡಿಸುತ್ತಿದ್ದಂತೆ ಎಚ್ಚತ್ತ ಇಲಾಖೆ ನಂತರ ಕನ್ನಡದಲ್ಲಿ ಬ್ಯಾನರ್ ಹಾಕಿತು.