ಬೆಂಗಳೂರು: ರಾಜ್ಯದಲ್ಲಿ ಇನ್ನೂ ಎರಡು ದಿನ ಭಾರಿ ಮಳೆಯಾಗುವ ಮುನ್ಸೂಚನೆ ಹಿನ್ನೆಲೆಯಲ್ಲಿ ಬೆಂಗಳೂರು ನಗರ, ಗ್ರಾಮಾಂತರ ಸೇರಿ 7 ಜಿಲ್ಲೆಗಳಲ್ಲಿ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ.
ನಿರಂತರ ಮಳೆಯಾಗುತ್ತಿರುವ ಕಾರಣ ವಿದ್ಯಾರ್ಥಿಗಳು ಶಾಲೆಗೆ ಬಂದು ಹೋಗಲು ತೊಂದರೆಯಾಗುತ್ತಿರುವುದರಿಂದ ಆಯಾ ಜಿಲ್ಲೆಗಳ ಪರಿಸ್ಥಿತಿ ಅವಲೋಕಿಸಿ ಶಾಲೆಗಳಿಗೆ ರಜೆ ಘೋಷಿಸಲು ತಿಳಿಸಲಾಗಿದೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಆಯುಕ್ತರಾದ ಡಾ.ವಿಶಾಲ್ ಆರ್. ಎಲ್ಲಾ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದಿದ್ದಾರೆ.
ಕೋಲಾರ, ಚಿಕ್ಕಬಳ್ಳಾಪುರ, ರಾಮನಗರ, ತುಮಕೂರು ಹಾಗೂ ಚಾಮರಾಜನಗರ ಜಿಲ್ಲೆಗಳಲ್ಲೂ ವರುಣ ಆರ್ಭಟಿಸುತ್ತಿರುವುದರಿಂದ ಶಾಲಾ-ಕಾಲೇಜುಗಳಿಗೆ ರಜೆ ನೀಡಿ ಜಿಲ್ಲಾಧಿಕಾರಿಗಳು ಆದೇಶ ಹೊರಡಿಸಿದ್ದಾರೆ.
ಜಿಲ್ಲೆಯ ಎಲ್ಲಾ ಕ್ಷೇತ್ರ ಶಿಕ್ಷಣಾಧಿಕಾರಿಗಳು ಹಾಗೂ ಬಿಆರ್‌ಸಿ ಅವರೊಂದಿಗೆ ನಡೆದ ಸಭೆಯಲ್ಲಿ ಶಾಲಾ-ಕಾಲೇಜುಗಳಿಗೆ ರಜೆ ನೀಡುವಂತೆ ಒತ್ತಾಯಗಳು ಕೇಳಿಬಂದಿವೆ. ಪ್ರಕೃತಿ ವಿಕೋಪದ ಮುನ್ನೆಚ್ಚರಿಕೆ ಕ್ರಮವಾಗಿ ಜಿಲ್ಲೆಯ ಎಲ್ಲಾ ಸರ್ಕಾರಿ, ಅನುದಾನಿತ, ಅನುದಾನ ರಹಿತ ಕಿರಿಯ, ಹಿರಿಯ, ಪ್ರೌಢ ಶಾಲೆಗಳಿಗೆ ಇದೇ 19 ಹಾಗೂ 20 ರಂದು ರಜೆ ಘೋಷಣೆ ಮಾಡಿ ಆದೇಶಿಸಲಾಗಿದೆ ಎಂದು ಕೋಲಾರ ಜಿಲ್ಲಾಧಿಕಾರಿ ಡಾ.ಸೆಲ್ವಮಣಿ ಪ್ರಕಟಣೆ ಹೊರಡಿಸಿದ್ದಾರೆ.
ಅರಬ್ಬಿ ಸಮುದ್ರದಲ್ಲಿ ವಾಯುಭಾರ ಕುಸಿತ ಹಿನ್ನೆಲೆಯಲ್ಲಿ ಬೆಂಗಳೂರು ಸೇರಿದಂತೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ಇಂದು ಹಾಗೂ ನಾಳೆ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.