ಬೆಂಗಳೂರು: ಪ್ರತಿಯೊಂದಕ್ಕೂ ಆ್ಯಪ್ ಆರಂಭಿಸಿರುವ ಬಿಬಿಎಂಪಿ ಜನತೆಗೆ ಉಪಯುಕ್ತವಾದ ಆರೋಗ್ಯಕ್ಕೆ ಸಂಬಂಧಿಸಿದ ಮೊಬೈಲ್ ಆ್ಯಪ್ವೊಂದನ್ನು ಸದ್ಯದಲ್ಲೇ ಬಿಡುಗಡೆಗೊಳಿಸಲು ಸಜ್ಜಾಗಿದೆ.
ಕೊರೊನಾ, ಡೆಂಗ್ಯೂ, ಹೆಚ್1ಎನ್1 ಸೋಂಕಿತ ರೋಗಗಳು ಸಿಲಿಕಾನ್ ಸಿಟಿ ಜನರನ್ನು ನಡುಗಿಸಿರುವ ಬೆನ್ನಲ್ಲೇ, ಜನತೆಯನ್ನು ಈ ಭಯದಿಂದ ದೂರವಿರಿಸಿ, ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ತಿಳಿಸಲು ಬಿಬಿಎಂಪಿ ಆ್ಯಪ್ ಬಿಡುಗಡೆಗೊಳಿಸಲಿದೆ. ನಗರದ ಸಾಂಕ್ರಾಮಿಕ ರೋಗಗಳ ಮಾಹಿತಿಯನ್ನು ಪಾಲಿಕೆ ಆಸ್ಪತ್ರೆಗಳು ಹಾಗೂ ಖಾಸಗಿ ಆಸ್ಪತ್ರೆಗಳಿಂದ ವರದಿ ತೆಗೆದುಕೊಂಡು ಒಂದೆಡೆ ಕಲೆ ಹಾಕಲಾಗ್ತಿದೆ. ಪ್ರದೇಶವಾರು, ವಾರ್ಡ್ ವಾರು ವಿಂಗಡಿಸಿ ಆಯಾ ವಾರ್ಡ್ ಗಳ ಆರೋಗ್ಯಾಧಿಕಾರಿಗಳಿಗೆ ಕಳಿಸಲಾಗ್ತಿದೆ.
ಇದಕ್ಕೆ ಕೈಗೊಂಡ ಕ್ರಮಗಳ ಬಗ್ಗೆ ಆರೋಗ್ಯಾಧಿಕಾರಿಗಳೂ ವರದಿ ನೀಡ್ತಾರೆ. ಇದೆಲ್ಲದರ ಮಾಹಿತಿ ಬಿಬಿಎಂಪಿಯ "ಪಬ್ಲಿಕ್ ಹೆಲ್ತ್ ಎಪಿಡಮಲಾಜಿಕಲ್ ಇನ್ಫಾರ್ಮೇಶನ್ ಸೆಲ್" (PHEIC) ಆ್ಯಪ್ ನಲ್ಲಿ ದಾಖಲಾಗಲಿದೆ. ಈಗಾಗಲೇ ಭಾರತ ಸರ್ಕಾರದಿಂದ ಮೆಚ್ಚುಗೆ ಗಳಿಸಿರುವ ಆ್ಯಪ್ ಈವರೆಗೆ ಅಧಿಕಾರಿಗಳಿಗೆ ಮಾತ್ರ ಲಭ್ಯವಿತ್ತು. ಆದ್ರೆ ಇನ್ಮುಂದೆ ಸಾರ್ವಜನಿಕರಿಗೂ ಲಭ್ಯವಾಗಲಿದೆ. ಇದು ಏಪ್ರಿಲ್ ತಿಂಗಳ ಆರಂಭದಲ್ಲಿ ಬಿಡುಗಡೆ ಆಗಲಿದೆ. ಇದರಿಂದ ನಾಗರಿಕರು ತಮ್ಮ ಮೊಬೈಲ್ ನಲ್ಲಿ ಈ ಆ್ಯಪ್ ಡೌನ್ಲೋಡ್ ಮಾಡಿಕೊಂಡು, ತಮ್ಮ ಸುತ್ತಲಿನ ಪ್ರದೇಶದಲ್ಲಿರುವ ರೋಗಗಳ ಮಾಹಿತಿ ತಿಳಿಯಬಹುದು. ಅಲ್ಲದೆ ಯಾವ ರೀತಿ ಈ ಕಾಯಿಲೆಯಿಂದ ರಕ್ಷಿಸಿಕೊಳ್ಳಬಹುದು ಎಂದು ತಿಳಿಯಬಹುದು. ಇದರಿಂದ ಜನ ತಪ್ಪು ಮಾಹಿತಿಯಿಂದ ಎಚ್ಚೆತ್ತುಕೊಳ್ಳಬಹುದು ಎಂದು ಬಿಬಿಎಂಪಿ ಮುಖ್ಯ ಆರೋಗ್ಯಾಧಿಕಾರಿ ವಿಜಯೇಂದ್ರ ತಿಳಿಸಿದರು.
ಒಟ್ಟಿನಲ್ಲಿ ಅನಗತ್ಯ ಸುಳ್ಳು ಮಾಹಿತಿಗಳಿಂದ ಜನ ತಮ್ಮನ್ನು ರಕ್ಷಿಸಿಕೊಳ್ಳಲು ಈ ಆ್ಯಪ್ ಬಳಸಬಹುದು. ಅಲ್ಲದೆ ಸೋಂಕಿತ ಪ್ರದೇಶದಿಂದ ದೂರ ಇದ್ದು, ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳಲು ಈ ಪಿಹೆಚ್ ಇಐಸಿ ಆ್ಯಪ್ ಬಹುಪಯೋಗಿ ಆಗಲಿದೆ.