ಬೆಂಗಳೂರು: ಇಂದು ಸಂಜೆ ವೇಳೆ ಆರಂಭವಾದ ಭೀಕರ ಮಳೆಗೆ ಹೊಸಕೆರೆಹಳ್ಳಿಯ ದತ್ತಾತ್ರೇಯ ಲೇಔಟ್ ಹಾಗೂ ಗುರುದತ್ತ ಲೇಔಟ್ ಜಲಾವೃತವಾಗಿವೆ. ಅನೇಕ ಮನೆಗಳಿಗೆ ನೀರು ನುಗ್ಗಿದ್ದು ರಸ್ತೆಗಳು ಸಂಪೂರ್ಣವಾಗಿ ನೀರಿನಿಂದ ಆವೃತವಾಗಿವೆ.
ಪಕ್ಕದಲ್ಲೇ ಬೃಹತ್ ರಾಜಕಾಲುವೆ ಇರುವುದರಿಂದ ಜನಜೀವನ ಅಪಾಯಕಾರಿ ಸ್ಥಿತಿಯಲ್ಲಿದೆ. ಹೀಗಾಗಿ ತಗ್ಗುಪ್ರದೇಶದ ಮನೆಗಳಲ್ಲಿರುವವರನ್ನು ಸುರಕ್ಷಿತ ಸ್ಥಳಕ್ಕೆ ತಲುಪಿಸಲು ಎನ್ಡಿಆರ್ಎಫ್ ತಂಡದ 20 ಜನ ಸಿಬ್ಬಂದಿ ಬೋಟ್ ಸಹಿತ ಸ್ಥಳದಲ್ಲಿ ರಕ್ಷಣಾ ಕಾರ್ಯ ಕೈಗೊಳ್ಳಲಿದ್ದಾರೆಂದು ಆಯುಕ್ತರಾದ ಮಂಜುನಾಥ್ ಪ್ರಸಾದ್ ತಿಳಿಸಿದರು.
ಇಂದು ಸಂಜೆ 4-30 ರಿಂದ 7 ಗಂಟೆಯವರೆಗೆ ಕೆಂಗೇರಿಯಲ್ಲಿ 103 ಮಿ.ಮೀ, ಆರ್ಆರ್ ನಗರದಲ್ಲಿ 102 ಮಿ.ಮೀ, ವಿದ್ಯಾಪೀಠ 95, ಉತ್ತರಹಳ್ಳಿ 87, ಕೋಣನಕುಂಟೆ 83, ಬಸವನಗುಡಿ 81, ಕುಮಾರಸ್ವಾಮಿ ಲೇಔಟ್ 79.5 ಮಿ.ಮೀ ಹಾಗೂ ನಗರದ ಇತರೆಡೆ 70 ಮಿ.ಮೀಟರ್ ಗಿಂತ ಹೆಚ್ಚು ಮಳೆಯಾಗಿದೆ.