ಬೆಂಗಳೂರು: ಕೊರೊನಾ ಕಾಲದಲ್ಲಿ ತುರ್ತು ಸೇವೆಗಳನ್ನು ನೀಡುತ್ತಾ ಸಾಮಾಜಿಕ ಕಳಕಳಿ ತೋರಿಸುತ್ತ ಬಂದಿರುವ ಕೆಎಸ್ಆರ್ಟಿಸಿ ಉಪಕ್ರಮಗಳಾದ ಸ್ತ್ರೀ ಶೌಚಾಲಯ ಮತ್ತು ಮೊಬೈಲ್ ಫೀವರ್ ಕ್ಲಿನಿಕ್ಗಳಿಗೆ ಸಮಾಜದ ಅಭಿವೃದ್ಧಿಗಾಗಿ ಸಾಮಾಜಿಕ ಕಳಕಳಿ ವರ್ಗದಲ್ಲಿ ರಾಷ್ಟ್ರೀಯ ಸಾರ್ವಜನಿಕ ಉದ್ದಿಮೆಗಳ ಅತ್ಯುತ್ತಮ ಪ್ರಶಸ್ತಿ ಲಭಿಸಿದೆ.
ಇಂದು ನಡೆದ ವರ್ಚುವಲ್ ಸಮ್ಮೇಳನದಲ್ಲಿ ಮಾತನಾಡಿದ ಕೆಎಸ್ಆರ್ಟಿಸಿ ವ್ಯವಸ್ಥಾಪಕ ನಿರ್ದೇಶಕ ಶಿವಯೋಗಿ ಸಿ.ಕಳಸದ, ಕೋವಿಡ್ ಪರಿಸ್ಥಿತಿಯಲ್ಲೂ ನಮ್ಮ ಸಿಬ್ಬಂದಿ ಕೊರೊನಾ ವಾರಿಯರ್ಸ್ ಆಗಿ ಕರ್ತವ್ಯ ನಿರ್ವಹಿಸಿದ್ದಾರೆ. ಈ ಪ್ರಶಸ್ತಿಯನ್ನು ನಮ್ಮ ಸಿಬ್ಬಂದಿ, ಅದರಲ್ಲಿಯೂ ಕೋವಿಡ್ಗೆ ತುತ್ತಾಗಿ ತಮ್ಮ ಅಮೂಲ್ಯ ಪ್ರಾಣವನ್ನು ಕಳೆದುಕೊಂಡ ಸಿಬ್ಬಂದಿ ಹಾಗೂ ಅವರ ಪರಿವಾರದವರಿಗೆ ಸಮರ್ಪಿಸುತ್ತೇನೆ ಎಂದರು.
ನಮ್ಮ ಸಾರಿಗೆ ನಿಗಮವು ಅತ್ಯಂತ ಕಠಿಣ ಪರಿಸ್ಥಿತಿಯನ್ನು ಎದುರಿಸುತ್ತಿದ್ದಾಗಲೂ ನಾವು ನಮ್ಮ ಕಾರ್ಯದಿಂದ ವಿಮುಖರಾಗದೇ ಎಂದಿನಂತೆ ಶ್ರದ್ಧೆ ಮತ್ತು ಶ್ರಮವಹಿಸಿ ಕಾರ್ಯನಿರ್ವಹಿಸುತ್ತಿರುವ ಫಲ ಈ ಪ್ರಶಸ್ತಿಯಾಗಿದೆ. ಪ್ರಶಸ್ತಿ - ಪುರಸ್ಕಾರಗಳು ನಮ್ಮ ಜವಾಬ್ದಾರಿಯನ್ನು ಹೆಚ್ಚಿಸುವುದರೊಂದಿಗೆ ಸಾಮಾಜಿಕ ಬದ್ಧತೆಯಿಂದ ಇನ್ನೂ ಹೆಚ್ಚಿನ ಮಟ್ಟದಲ್ಲಿ ಕಾರ್ಯನಿರ್ವಹಿಸಲು ಪ್ರೋತ್ಸಾಹಿಸುತ್ತದೆ.
ಸ್ತೀ ಶೌಚಾಲಯ ಮತ್ತು ಮೊಬೈಲ್ ಫೀವರ್ ಕ್ಲಿನಿಕ್ ಈ ಎರಡೂ ಉಪಕ್ರಮಗಳನ್ನು ನಿಗಮದ ಅನುಪಯುಕ್ತ ಬಸ್ ಅನ್ನು ಉಪಯೋಗಿಸಿಕೊಂಡು ನಿರ್ಮಿಸಿದ್ದು, ರಾಷ್ಟ್ರೀಯ ಮಟ್ಟದಲ್ಲಿ ಈ ಉಪಕ್ರಮಗಳ ಬಗ್ಗೆ ಒಳ್ಳೆಯ ಅಭಿಪ್ರಾಯ ಹಾಗೂ ಮಾನ್ಯತೆ ದೊರಕಿರುವುದು ಸಂತಸದ ಸಂಗತಿ ಎಂದರು.