ಬೆಂಗಳೂರು : ಬನ್ನೇರುಘಟ್ಟ ರಸ್ತೆಯ ಪ್ರಮುಖ ಜಂಕ್ಷನ್ ಜೆಡಿ ಮರ ಜಂಕ್ಷನ್. ಇನ್ನೇನು ಕೆಲವೇ ದಿನಗಳಲ್ಲಿ ಈ ರಸ್ತೆಯು ನಾಯಂಡಹಳ್ಳಿಯಿಂದ ಸಿಲ್ಕ್ ಬೋರ್ಡ್ವರೆಗೆ ಸಿಗ್ನಲ್ ಫ್ರೀ ರಸ್ತೆಯಾಗಲಿದೆ. ಮಾತ್ರವಲ್ಲದೆ ಮೆಟ್ರೋ ಸಂಚಾರ ಕೂಡ ಆರಂಭವಾಗುತ್ತದೆ.
ಇನ್ನು ಈ ಜಂಕ್ಷನ್ ಇನ್ಮುಂದೆ ಹೊಸ ಹೆಸರಿನಲ್ಲಿ ಕರೆಯಲ್ಪಡಲಿದೆ. ಈ ರಸ್ತೆಗೆ 'ಬ್ರಹ್ಮಶ್ರೀ ನಾರಾಯಣ ಗುರು ಜಂಕ್ಷನ್' ಎಂದು ನಾಮಕರಣ ಮಾಡಲಾಯಿತು. ಬಿಲ್ಲವ ಸಮಾಜ 2017ರಲ್ಲಿ ರಾಜ್ಯ ಸರ್ಕಾರ ಮತ್ತು ಬಿಬಿಎಂಪಿಗೆ ಸಲ್ಲಿಸಿದ ಮನವಿ ಎರಡು ವರ್ಷಗಳ ನಂತರ ನೆರವೇರಿದೆ.ಹೊಸ ಹೆಸರಿನ ನಾಮಫಲಕವನ್ನು ಮೇಯರ್ ಗಂಗಾಂಬಿಕೆ ಉದ್ಘಾಟನೆ ಮಾಡಿದ್ದಾರೆ.
ಬಳಿಕ ಮಾತನಾಡಿದ ಅವರು, ಎರಡು ವರ್ಷಗಳ ಹಿಂದೆ ಪದ್ಮಾವತಿ ಅವರು ಮೇಯರ್ ಆಗಿದ್ದ ಸಂದರ್ಭದಲ್ಲಿ ಈ ನಿರ್ಣಯ ತೆಗೆದುಕೊಳ್ಳಲಾಗಿತ್ತು. ಆದರೆ ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಇಷ್ಟು ತಡವಾಗಿ ಉದ್ಘಾಟನೆಯಾಗಿದೆ. ಇನ್ನು ಮುಂದಾದರು ಇಂತಹ ಕೆಲಸಗಳನ್ನು ಬೇಗ ಮಾಡಿ ಮುಗಿಸಬೇಕು ಎಂದು ಸೂಚಿಸಿದರು.
ಇನ್ನು ಈ ಜಂಕ್ಷನ್ನ ಮತ್ತೊಂದು ವಿಶೇಷ ಅಂದ್ರೆ, ಇದು ಮೂರು ಎಂಎಲ್ಎ ಮತ್ತು ಮೂರು ಬಿಬಿಎಂಪಿ ಸದಸ್ಯರಿಗೆ ಸೇರುತ್ತದೆ.