ಬೆಂಗಳೂರು: ರಾಜ್ಯದಲ್ಲಿ ಜಾರಿಗೊಳಿಸಿರುವ ವೀಕೆಂಡ್ ಕರ್ಫ್ಯೂಗೆ ಆಡಳಿತಾರೂಢ ಪಕ್ಷದ ಕೆಲಸ ಸದಸ್ಯರು ವಿರೋಧ ವ್ಯಕ್ತಪಡಿಸಿ ನೀಡಿರುವ ಹೇಳಿಕೆ ಅವರ ವೈಯಕ್ತಿಕ ಹೇಳಿಕೆಯಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಸ್ಪಷ್ಟಪಡಿಸಿದ್ದಾರೆ.
ಮಲ್ಲೇಶ್ವರಂನಲ್ಲಿರುವ ಬಿಜೆಪಿ ಕಚೇರಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಬಿಜೆಪಿಯ ಕೆಲ ಸದಸ್ಯರು ಸರ್ಕಾರದ ನಿರ್ಧಾರಕ್ಕೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇದು ಪಕ್ಷದ ನಿಲುವಲ್ಲ, ಸದಸ್ಯರ ವೈಯಕ್ತಿಕ ಹೇಳಿಕೆ ಮಾತ್ರ ಎಂದು ತಿಳಿಸಿದರು.
ತಜ್ಞರ ಅಭಿಪ್ರಾಯದ ಮೇರೆಗೆ ನಿರ್ಧಾರ:
ವೀಕೆಂಡ್ ಕರ್ಫ್ಯೂ ವಿಚಾರ ಕುರಿತು ಸಿಎಂ ತಜ್ಞರ ಅಭಿಪ್ರಾಯ ಪಡೆದು, ಕೇಂದ್ರದ ಗೃಹ ಸಚಿವಾಲಯದ ಸಲಹೆಯಂತೆ ಮಾರ್ಗಸೂಚಿ ಹೊರಡಿಸಿದ್ದಾರೆ. ಇಂದು ಮತ್ತೆ ತಜ್ಞರ ಅಭಿಪ್ರಾಯ ಪಡೆಯಲಿರುವ ಸಿಎಂ, ರಾಜ್ಯದಲ್ಲಿ ಯಾವ ರೀತಿ ನಿಯಮಾವಳಿ ರೂಪಿಸಬೇಕು, ಇರುವ ಮಾರ್ಗಸೂಚಿ ಮಾರ್ಪಾಡು, ಬದಲಾವಣೆ ಅಗತ್ಯವಿದೆಯಾ ಎನ್ನುವ ಕುರಿತು ಚರ್ಚಿಸಿದ ನಂತರ ಸಿಎಂ ಈ ವಿಚಾರದಲ್ಲಿ ಮುಂದುವರೆಯಲಿದ್ದಾರೆ ಎಂದರು.
ಇದನ್ನೂ ಓದಿ: ವೀಕೆಂಡ್ ಕರ್ಫ್ಯೂಗೆ ಬಿಜೆಪಿಯಲ್ಲೇ ಅಸಮಾಧಾನ : ವಾರಾಂತ್ಯ ಕರ್ಫ್ಯೂ ಅಗತ್ಯವಿಲ್ಲ ಎಂದ ಸಚಿವ ಜೋಶಿ
ನಿಗಮ-ಮಂಡಳಿಗಳಿಗೆ ನೇಮಕಾತಿ ವಿಚಾರ ಕುರಿತು ಪ್ರತಿಕ್ರಿಯೆ ನೀಡಿದ ಕಟೀಲ್, ಒಂದಷ್ಟು ನಿಗಮ-ಮಂಡಳಿಗಳು ಖಾಲಿ ಇವೆ, ಅವುಗಳನ್ನು ಭರ್ತಿ ಮಾಡುವ ಕೆಲಸವನ್ನು ಮುಂದಿನ ವಾರ ಮಾಡುತ್ತೇವೆ ಎಂದು ಹೇಳಿದರು.
ಸಿಎಂ ದೆಹಲಿ ಪ್ರವಾಸ?
ಸದ್ಯ ಸಿಎಂ ಬಸವರಾಜ ಬೊಮ್ಮಾಯಿ ಒಂದು ವಾರದಲ್ಲಿ ದೆಹಲಿಗೆ ತೆರಳಲಿದ್ದಾರೆ ಎನ್ನುವ ಮಾತುಗಳು ಬಿಜೆಪಿ ಪಾಳಯದಿಂದ ಕೇಳಿಬರುತ್ತಿದ್ದರೂ ಸಿಎಂ ಕಚೇರಿ ಕಡೆಯಿಂದ ದೆಹಲಿ ಪ್ರವಾಸದ ಕುರಿತು ಅಧಿಕೃತ ಮಾಹಿತಿ ಇನ್ನೂ ಲಭ್ಯವಾಗಿಲ್ಲ. ಆದರೆ ಈಗ ಕಟೀಲ್ ನಿಗಮ ಮಂಡಳಿ ನೇಮಕಾತಿ ಮಾಡುವ ಕುರಿತು ನೀಡಿರುವ ಹೇಳಿಕೆ ಸಿಎಂ ದೆಹಲಿ ಪ್ರವಾಸ ಪಕ್ಕಾ ಎನ್ನುವ ಸುಳಿವು ನೀಡಿದೆ.
ಕೊರೊನಾ ನಿರ್ವಹಣೆಯಲ್ಲಿ ಸರ್ಕಾರಕ್ಕೆ ಪಕ್ಷ ಸಾಥ್:
ಕೋವಿಡ್ ಸಮಯದಲ್ಲಿ ಹಿಂದೆ ಪಕ್ಷದ ಕಡೆಯಿಂದ ಮಾಡಿದ್ದ ಕೆಲಸಗಳನ್ನು ಮುಂದುವರಿಸುವ ಬಗ್ಗೆ ಇಂದು ಸಭೆ ನಡೆಸಲಾಯಿತು. ಬಿಬಿಎಂಪಿ ವಾರ್ಡ್ ಗಳಲ್ಲಿ ವಾರ್ ರೂಂ ತೆರೆಯುವ ಬಗ್ಗೆ ಚರ್ಚೆ ಮಾಡಿದ್ದೇವೆ. ಕೋವಿಡ್ ನಿರ್ವಹಣೆ, ನಿರ್ವಹಣಾ ಕಾರ್ಯದಲ್ಲಿ ಸರ್ಕಾರಕ್ಕೆ ಪಕ್ಷ ಕೈ ಜೋಡಿಸಲಿದೆ ಎಂದು ಕಟೀಲ್ ತಿಳಿಸಿದರು.
ಜಾಹೀರಾತು- ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ