ಬೆಂಗಳೂರು: ಲಾಕ್‌ಡೌನ್ ಅವಧಿಯಲ್ಲಿ ಯಾವೊಬ್ಬ ಕಾರ್ಮಿಕನೂ, ನಿರ್ಗತಿಕನೂ ಆಹಾರವಿಲ್ಲದೇ ಬಳಲುವಂತಾಗಬಾರದು. ಎಲ್ಲಿವರೆಗೂ ಲಾಕ್‌ಡೌನ್ ಇರುತ್ತದೋ ಅಲ್ಲಿವರೆಗೂ ಆಹಾರ ಭದ್ರತೆಯನ್ನು ಕಲ್ಪಿಸಬೇಕು ಎಂದು ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ನಿರ್ದೇಶಿಸಿದೆ.
ಕೋವಿಡ್ ನಿರ್ವಹಣೆ ಹಾಗೂ ಚಿಕಿತ್ಸೆಗೆ ಸಂಬಂಧಿಸಿದಂತೆ ಸಲ್ಲಿಸಿರುವ ಪಿಐಎಲ್ಗಳ ವಿಚಾರಣೆ ನಡೆಸಿದ ಹೈಕೋರ್ಟ್ ವಿಭಾಗೀಯ ಪೀಠ ಈ ನಿರ್ದೇಶನ ನೀಡಿದೆ. ವಿಚಾರಣೆ ವೇಳೆ ಪೀಠಕ್ಕೆ ಮಾಹಿತಿ ನೀಡಿದ ಸರ್ಕಾರದ ಪರ ವಕೀಲರು, ನಾಳೆಯಿಂದ ಇಂದಿರಾ ಕ್ಯಾಂಟೀನ್‌ಗಳಲ್ಲಿ ಮೂರು ಹೊತ್ತು ಉಚಿತ ಊಟ ನೀಡಲಾಗುವುದು. ಕಟ್ಟಡ ಕಾರ್ಮಿಕರಿಗೆ ಊಟದ ವ್ಯವಸ್ಥೆ ಮಾಡಲು ಬಿಲ್ಡರ್‌ಗಳಿಗೆ ಸೂಚಿಸಲಾಗಿದೆ. ಪಡಿತರ ಚೀಟಿ ಇಲ್ಲದವರಿಗಾಗಿ ಇಂದಿರಾ ಕ್ಯಾಂಟೀನ್‌ಗಳಲ್ಲಿ ಆಹಾರ ವ್ಯವಸ್ಥೆ ಮಾಡಲಾಗಿದೆ ಎಂದರು.
ಅಲ್ಲದೇ, ಗ್ರಾಮ ಪಂಚಾಯ್ತಿ ಮಟ್ಟದಲ್ಲಿ 150 ಆಹಾರ ಕಿಟ್ಗಳನ್ನು ಅಗತ್ಯವಿರುವವರಿಗೆ ಪೂರೈಸಲು ನಿರ್ದೇಶಿಸಲಾಗಿದೆ ಎಂದು ಸರ್ಕಾರದ ಪರ ವಕೀಲರು ಕೋರ್ಟ್ ಗಮನಕ್ಕೆ ತಂದರು. ವಾದ ದಾಖಲಿಸಿಕೊಂಡ ಪೀಠ, ಬೆಂಗಳೂರಿನಲ್ಲಿರುವ ಹಾಗೂ ರಾಜ್ಯದ ಇತರ ನಗರ- ಪಟ್ಟಣ ಪ್ರದೇಶಗಳಲ್ಲಿರುವ ಇಂದಿರಾ ಕ್ಯಾಂಟೀನ್ಗಳ ಮಾಹಿತಿ ಪಡೆದುಕೊಂಡಿತು. ಬಳಿಕ, ಲಾಕ್‌ಡೌನ್ ಸಂದರ್ಭದಲ್ಲಿ ಇಂದಿರಾ ಕ್ಯಾಂಟೀನ್‌ಗೆ ಜನ ಹೇಗೆ ಬರಲು ಸಾಧ್ಯ ಎಂದು ಪ್ರಶ್ನಿಸಿತು.
ಸರ್ಕಾರದೊಂದಿಗೆ ಸಹಭಾಗಿತ್ವ ಹೊಂದಿರುವ ಎನ್‌ಜಿಒಗಳ ಪಾತ್ರವೇನು ಎಂದು ಕೇಳಿದ ಪೀಠ. ಅಗತ್ಯವಿರುವ ಎಲ್ಲರಿಗೂ ಆಹಾರ ದೊರೆಯಬೇಕು. ದೈನಂದಿನ ಕೂಲಿ ಲಭ್ಯವಾಗದ ಎಲ್ಲರಿಗೂ ಆಹಾರ ಸಿಗಬೇಕು. ಯಾರೊಬ್ಬರಿಗೂ ಆಹಾರ ಇಲ್ಲದಂತಾಗಬಾರದು. ವ್ಯವಸ್ಥಿತವಾಗಿ ಹಾಗೂ ಕ್ರಮಬದ್ಧವಾಗಿ ಆಹಾರ ಪೂರೈಕೆಯಾಗಬೇಕು ಎಂದು ರಾಜ್ಯ ಸರ್ಕಾರಕ್ಕೆ ತಾಕೀತು ಮಾಡಿತು. ಇದೇ ವೇಳೆ, ಆತ್ಮ ನಿರ್ಭರ ಯೋಜನೆ ಇನ್ನೂ ಅಸ್ತಿತ್ವದಲ್ಲಿದೆಯೇ ಎಂಬ ಬಗ್ಗೆ ಮಾಹಿತಿ ನೀಡುವಂತೆ ಸೂಚಿಸಿತು.
ಆಕ್ಸಿಜನ್ ಪೂರೈಕೆ :
ಕೋವಿಡ್ ಚಿಕಿತ್ಸೆಗೆ ಕೇಂದ್ರ ಸರ್ಕಾರ ನೀಡುತ್ತಿದ್ದ ಆಕ್ಸಿಜನ್ ಪ್ರಮಾಣವನ್ನು ಹೆಚ್ಚಿಸಿದೆ. ಈ ಮೊದಲು 865 ಮೆ.ಟನ್ ಪೂರೈಸುತ್ತಿದ್ದ ಕೇಂದ್ರ ಇದೀಗ 1015 ಮೆಟ್ರಿಕ್ ಟನ್ ಆ್ಯಕ್ಸಿಜನ್ ಪೂರೈಸುತ್ತಿದೆ ಎಂದು ಸರ್ಕಾರದ ಪರ ವಕೀಲರು ತಿಳಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಪೀಠ, ರಾಜ್ಯಕ್ಕೆ ಇದೀಗ ಅಗತ್ಯವಿರುವ ಆಕ್ಸಿಜನ್ ಎಷ್ಟು ಎಂದು ಪ್ರಶ್ನಿಸಿತು.
ವಕೀಲರು ಉತ್ತರಿಸಿ ಪ್ರಸ್ತುತ ದಿನಕ್ಕೆ 1162 ಮೆ.ಟನ್ ಅಗತ್ಯವಿದೆ ಎಂದರು. ಇದಕ್ಕೆ ಪ್ರತಿಕ್ರಿಯಿಸಿದ ಪೀಠ, ಹಿಂದಿನ ವಿಚಾರಣೆ ವೇಳೆ ರಾಜ್ಯದ ಕೋರಿಕೆಯಂತೆ 1200 ಮೆ.ಟನ್ ಆಕ್ಸಿಜನ್ ಪೂರೈಸಲು ಕೇಂದ್ರಕ್ಕೆ ನಿರ್ದೇಶಿಸಿತ್ತು. ಹೀಗಾಗಿ ಒಂದು ವಾರಕ್ಕೆ ಎಷ್ಟು ಆಕ್ಸಿಜನ್ ಅಗತ್ಯವಿದೆ ಎನ್ನುವ ಬಗ್ಗೆ ರಾಜ್ಯ ಸರ್ಕಾರ ತಿಳಿಸಬೇಕು ಎಂದು ಸೂಚಿಸಿ, ವಿಚಾರಣೆಯನ್ನು ಮೇ.13ಕ್ಕೆ ಮುಂದೂಡಿತು.