ಬೆಂಗಳೂರು : ಹೆಣ್ಣೂರಿನಲ್ಲಿ ವರದಕ್ಷಿಣೆ ವಿಚಾರಕ್ಕೆ ಬೀಗರ ನಡುವೆ ನಡೆದ ಜಗಳ ಕೊಲೆಯಲ್ಲಿ ಅಂತ್ಯವಾಗಿದ್ದು, ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಸಿದ್ಧಾರ್ಥಲೇಔಟ್ ನಿವಾಸಿ ಮೊಹಮದ್ ಮೆಹಬೂಬ್ (46) ಕೊಲೆಯಾದ ವ್ಯಕ್ತಿ.
ನಜೀರ್ ಅಹಮ್ಮದ್ (55) ಬಂಧಿತ ಆರೋಪಿ. ಮೆಹಬೂಬ್ ಗೆದ್ದಲಹಳ್ಳಿಯಲ್ಲಿ ದ್ವಿಚಕ್ರವಾಹನದ ಗ್ಯಾರೇಜ್ ಇಟ್ಟುಕೊಂಡಿದ್ದರು. ಇವರ ಮಗಳನ್ನು ನಜೀರ್ ಅಹಮ್ಮದ್ ಮಗನಿಗೆ ಕೊಟ್ಟು ಮದುವೆ ಮಾಡಿದ್ದರು.
ವರದಕ್ಷಿಣೆ ವಿಚಾರವಾಗಿ ಇವರ ನಡುವೆ ಆಗಾಗ ಜಗಳ ನಡೆಯುತ್ತಿತ್ತು. ಶನಿವಾರ ರಾತ್ರಿ 8.30ಕ್ಕೆ ಮೆಹಬೂಬ್ ಗ್ಯಾರೇಜ್‌ಗೆ ನಜೀರ್ ಬಂದಿದ್ದರು. ವರದಕ್ಷಿಣೆ ವಿಚಾರವಾಗಿ ಇಬ್ಬರ ನಡುವೆ ಮತ್ತೆ ಜಗಳ ನಡೆದಿತ್ತು.
ಜಗಳ ತಾರಕಕ್ಕೇರಿ ನಜೀರ್ ದೊಣ್ಣೆಯಿಂದ ಮೆಹಬೂಬ್ ತಲೆಗೆ ಹಲ್ಲೆ ನಡೆಸಿದ್ದ. ಪರಿಣಾಮ ತೀವ್ರ ಸ್ವರೂಪದ ಗಾಯವಾಗಿ ಮೆಹಬೂಬ್ ಕುಸಿದು ಬಿದ್ದಿದ್ದರು. ಕೂಡಲೇ ಅವರನ್ನು ಸ್ಥಳೀಯ ಆಸ್ಪತ್ರೆಗೆ ಕರೆದೊಯ್ಯಲಾಯಿತು.
ಆದರೆ, ವೈದ್ಯರು ಮೆಹಬೂಬ್ ಮೃತಪಟ್ಟಿರುವುದನ್ನು ದೃಢಪಡಿಸಿದ್ದಾರೆ. ಈ ಕುರಿತು ಪ್ರಕರಣ ದಾಖಲಿಸಿಕೊಂಡ ಹೆಣ್ಣೂರು ಪೊಲೀಸರು ನಜೀರ್ ಅಹಮ್ಮದ್‌ನನ್ನು ಬಂಧಿಸಿ ತನಿಖೆ ನಡೆಸುತ್ತಿದ್ದಾರೆ.