ಬೆಂಗಳೂರು: ಮೂರು ಮದುವೆಯಾಗಿರುವ 77 ವರ್ಷದ ವೃದ್ಧ ವ್ಯಕ್ತಿಯೊಬ್ಬರ ವಿರುದ್ಧ ಅವರ ಮೊದಲ ಪತ್ನಿ ದ್ವಿಪತ್ನಿತ್ವ ಪ್ರಶ್ನಿಸಿ ಸಲ್ಲಿಸಿದ್ದ ಖಾಸಗಿ ದೂರನ್ನು ರದ್ದುಪಡಿಸಲು ಹೈಕೋರ್ಟ್ ನಿರಾಕರಿಸಿದ್ದು, ಆರೋಪಿ ಸ್ಥಾನದಲ್ಲಿರುವ ವ್ಯಕ್ತಿ ವಿಚಾರಣಾ ನ್ಯಾಯಾಲಯದಲ್ಲಿ ವಿಚಾರಣೆ ಎದುರಿಸಬೇಕು ಎಂದು ತೀರ್ಪು ನೀಡಿದೆ.
ಬೆಂಗಳೂರಿನ ನಿವಾಸಿ ಸಿ.ಆನಂದ್ ಅಲಿಯಾಸ್ ಅಂಕುಗೌಡ (77) ಮತ್ತವರ ಮೂರನೇ ಪತ್ನಿ ವರಲಕ್ಷ್ಮೀ (49) ಹಾಗೂ ಅವರ ನಾಲ್ವರು ಸಂಬಂಧಿಕರು ಸಲ್ಲಿಸಿದ್ದ ಕ್ರಿಮಿನಲ್ ಅರ್ಜಿ ವಿಚಾರಣೆ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ನ್ಯಾಯಪೀಠದಲ್ಲಿ ನಡೆಯಿತು.
ಅರ್ಜಿದಾರರ ಪರ ವಾದ ಮಂಡಿಸಿದ ವಕೀಲರು, ಮೊದಲ ಪತ್ನಿ ಚಂದ್ರಮ್ಮ (69) 2018ರಲ್ಲಿ ಚನ್ನಪಟ್ಟಣದ ಸಿವಿಲ್ ಮತ್ತು ಜೆಎಂಎಫ್‌ಸಿ ನ್ಯಾಯಾಲಯದಲ್ಲಿ ಸೆಕ್ಷನ್ 494( ದ್ವಿಪತ್ನಿತ್ವ) ಮತ್ತು ಸೆಕ್ಷನ್ 109 (ಪ್ರಚೋದನೆ) ಅಡಿ ಸಲ್ಲಿಸಿರುವ ಖಾಸಗಿ ದೂರು ತಡವಾಗಿ ದಾಖಲಾಗಿರುವ ದೂರಾಗಿದೆ. ಅಲ್ಲದೆ ಎರಡನೇ ಮದುವೆಗೆ ಆಕೆಯೇ ಒಪ್ಪಿಗೆ ನೀಡಿದ್ದರು. ಆದ್ದರಿಂದ ವಿಚಾರಣಾ ನ್ಯಾಯಾಲಯದಲ್ಲಿರುವ ಪ್ರಕರಣವನ್ನು ರದ್ದುಗೊಳಿಸಬೇಕು ಎಂದು ಮನವಿ ಮಾಡಿದರು.
ಪ್ರಕರಣ : 1968ರಲ್ಲಿ ಚಂದ್ರಮ್ಮ ಅವರನ್ನು ಮದುವೆಯಾಗಿದ್ದ ತಮ್ಮ ಕಕ್ಷಿದಾರ ಅಂಕುಗೌಡ 1972ರಲ್ಲಿ ಚಂದ್ರಮ್ಮನ ಸಹೋದರಿ ಸಾವಿತ್ರಮ್ಮ ಅವರನ್ನು ವಿವಾಹವಾಗಿದ್ದರು. 1993ರಲ್ಲಿ ವರಲಕ್ಷ್ಮೀ ಎಂಬುವರನ್ನು ಮೂರನೇ ಮದುವೆಯಾಗಿದ್ದಾರೆ. ಈ ಮದುವೆಗೆ ಚಂದ್ರಮ್ಮ ಒಪ್ಪಿಗೆಯನ್ನೂ ಕೂಡ ನೀಡಿದ್ದರು. ಆದರೆ, ಆಸ್ತಿ ಪಾಲುದಾರಿಕೆಯಲ್ಲಿ ಉಂಟಾದ ವ್ಯಾಜ್ಯದಿಂದಾಗಿ 25 ವರ್ಷಗಳ ಬಳಿಕ ದ್ವಿಪತ್ನಿತ್ವವನ್ನು ಪ್ರಶ್ನಿಸಲಾಗಿದೆ. ಈ ಸಂಬಂಧ 2018ರಲ್ಲಿ ಖಾಸಗಿ ದೂರು ದಾಖಲಿಸಲಾಗಿದೆ.
ಪ್ರಕರಣದಲ್ಲಿ ವರಲಕ್ಷ್ಮೀ ಮತ್ತವರ ನಾಲ್ವರು ಸಂಬಂಧಿಕರು ಹಾಗೂ ಆಪ್ತರನ್ನೂ ಆರೋಪಿಗಳನ್ನಾಗಿಸಲಾಗಿದೆ. ಅಂಕುಗೌಡರು ತಮ್ಮ ಮೂರನೇ ಪತ್ನಿಗೆ 2015 ರಲ್ಲಿ ಗಿಫ್ಟ್ ಡೀಡ್ ಮೂಲಕ ಆಸ್ತಿ ವರ್ಗಾಯಿಸಿದ್ದು, ಇದು ಮೊದಲ ಪತ್ನಿ ಚಂದ್ರಮ್ಮ ಮತ್ತು ಇಬ್ಬರು ಹೆಣ್ಣು ಮಕ್ಕಳ ತಗಾದೆಗೆ ಕಾರಣವಾಗಿದೆ. ತಮ್ಮ ಕಕ್ಷಿದಾರ ಅಂಕುಗೌಡ ಮತ್ತು ಮೂರನೆಯ ಪತ್ನಿ ವಿರುದ್ಧ ದೂರು ದಾಖಲಿಸಿದ್ದಾರೆ. ಸತ್ಯಾಂಶವನ್ನು ಮುಚ್ಚಿಟ್ಟು ಈ ಪ್ರಕರಣ ದಾಖಲಿಸಲಾಗಿದೆ. ಹಾಗಾಗಿ ಈ ಖಾಸಗಿ ದೂರನ್ನು ರದ್ದುಪಡಿಸಬೇಕು ಎಂದು ಅಂಕುಗೌಡ ಪರ ವಕೀಲರು ವಾದ ಮಂಡಿಸಿದರು.
ತೀರ್ಪು : ಅರ್ಜಿದಾರರ ಪರ ಸುದೀರ್ಘವಾಗಿ ಮಂಡಿಸಿದ ವಾದವನ್ನು ಆಲಿಸಿದ ನ್ಯಾಯಪೀಠ ಅರ್ಜಿದಾರರ ಕೋರಿಕೆಯನ್ನು ತಳ್ಳಿಹಾಕಿತು. ಇದೊಂದು ವಿಭಿನ್ನ ಪ್ರಕರಣ, ಮೊದಲ ಹಾಗೂ ಎರಡನೇ ಹೆಂಡತಿಯ ಸಮ್ಮತಿ ಪಡೆದೇ ಅಂಕುಗೌಡ ಮೂರನೇ ಮದುವೆಯಾಗಿದ್ದಾರೆ ಎಂಬ ವಿಚಾರ ಸದ್ಯ ಗೌಣವೆನಿಸಲಿದೆ. ಹಾಗಾಗಿ ಮೂರನೇ ಮದುವೆಯಾಗಿರುವ ಅರ್ಜಿದಾರರ ವಿರುದ್ಧ ದಾಖಲಾಗಿರುವ ದ್ವಿಪತ್ನಿತ್ವ ದೂರನ್ನು ಈ ಹಂತದಲ್ಲಿ ವಜಾಗೊಳಿಸಲು ಸಾಧ್ಯವಿಲ್ಲ ಎಂದು ಅಭಿಪ್ರಾಯಪಟ್ಟಿತು.
ಅರ್ಜಿದಾರರ ವಿರುದ್ಧ ಐಪಿಸಿ ಸೆಕ್ಷನ್ 494ರ ಅಡಿ ದಾಖಲಾಗಿರುವ ಪ್ರಕರಣ ರದ್ದುಪಡಿಸಲು ಸಾಧ್ಯವಿಲ್ಲ ಎಂದು ತಿಳಿಸಿದ ನ್ಯಾಯಪೀಠ ವಿಚಾರಣಾ ನ್ಯಾಯಾಲದಲ್ಲಿ ಅರ್ಜಿದಾರರು ವಿಚಾರಣೆ ಎದುರಿಸಲಿ ಎಂದು ಆದೇಶಿಸಿ ಅರ್ಜಿಯನ್ನು ಇತ್ಯರ್ಥಪಡಿಸಿತು.
ಆದರೆ ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಅಂಕುಗೌಡ ಅವರ ಮೂರನೇ ಪತ್ನಿಯ ನಾಲ್ವರು ಆಪ್ತರ ವಿರುದ್ಧ ವಿಚಾರಣಾ ನ್ಯಾಯಾಲಯದಲ್ಲಿದ್ದ ಕ್ರಿಮಿನಲ್ ಪ್ರಕರಣವನ್ನು ಮಾತ್ರ ಹೈಕೋರ್ಟ್ ರದ್ದುಪಡಿಸಿದ್ದು, ಉಳಿದಂತೆ ಖಾಸಗಿ ದೂರಿನ ವಿಚಾರಣೆ ವಿಚಾರಣಾ ನ್ಯಾಯಾಲಯದಲ್ಲಿ ಮುಂದುವರೆಸಲು ಅನುಮತಿ ನೀಡಿತು.
ಇದನ್ನೂ ಓದಿ: ಪ್ರಶಾಂತ್ ಕೊಲೆ ಆದ ನಂತರ ಪೊಲೀಸ್ ಠಾಣೆಯಲ್ಲಿ ಕೇಕ್ ಕತ್ತರಿಸಿ ಸಂಭ್ರಮಿಸಲಾಗಿದೆ : ಹೆಚ್ ಡಿ ರೇವಣ್ಣ