ಬೆಂಗಳೂರು: ಪ್ರಬಲ ಸಮುದಾಯವನ್ನು 2ಎ ಪ್ರವರ್ಗದಲ್ಲಿ ಸೇರಿಸಿ ನಮ್ಮ ಅನ್ನವನ್ನು ಕಿತ್ತುಕೊಳ್ಳಲು ಅವಕಾಶ ನೀಡಬಾರದು ಎಂದು ಮುಖ್ಯಮಂತ್ರಿ ಚಂದ್ರು ನೇತೃತ್ವದ ಅತಿ ಹಿಂದುಳಿದ ವರ್ಗಗಳ ಜಾಗರೂಕ ವೇದಿಕೆ ಸಿಎಂ ಅವರಲ್ಲಿ ಮನವಿ ಮಾಡಿದೆ.
ವಿಧಾನಸೌಧದಲ್ಲಿ ನಿನ್ನೆ ಸಿಎಂಗೆ ಮನವಿ ಪತ್ರ ಸಲ್ಲಿಸಿ ಬಳಿಕ ಮಾತನಾಡಿದ ವೇದಿಕೆ ಅಧ್ಯಕ್ಷ ಮುಖ್ಯಮಂತ್ರಿ ಚಂದ್ರು, ಅತಿ ಹಿಂದುಳಿದ ವರ್ಗದ ಮೀಸಲಾತಿಯಾದ ಪ್ರವರ್ಗ 2ಎಗೆ ಪ್ರಬಲ ವರ್ಗಗಳು ನುಗ್ಗಲು ಯತ್ನಿಸುತ್ತಿರುವುದರಿಂದ ನಮಗೆ ಕಳವಳ ಆಗಿದೆ. ಪಂಚಮಸಾಲಿ ಹೋರಾಟಕ್ಕೆ ನಮ್ಮ ವಿರೋಧವಿಲ್ಲ. ಆದರೆ ನಮ್ಮ ಅನ್ನಕ್ಕೆ ಕಲ್ಲು ಹಾಕುವುದು ಬೇಡ. ಅವರು ನುಸುಳಿದರೆ ನಮಗೆ ಸಿಗಬೇಕಾದ ಆಹಾರ ಕಿತ್ತುಕೊಂಡು ಹೋಗುವ ಪರಿಸ್ಥಿತಿ ಬರುತ್ತದೆ. ಹಾಗಾಗಿ ಯಾವುದೇ ಪ್ರಬಲ ಸಮುದಾಯ ನಮ್ಮ ಹಕ್ಕನ್ನು, ಅನ್ನವನ್ನು ಕಿತ್ತುಕೊಳ್ಳಲು ಅವಕಾಶ ನೀಡಬಾರದು ಎಂದು ಸರ್ಕಾರಕ್ಕೆ ಮನವಿ ಮಾಡುತ್ತೇವೆ ಎಂದು ತಿಳಿಸಿದರು.
ರಾಜ್ಯ ಹಿಂದುಳಿದ ಆಯೋಗ ಸಿದ್ಧಪಡಿಸಿರುವ ಜಾತಿವಾರು ಸಮೀಕ್ಷೆ ವರದಿಯಲ್ಲಿ ವೈಜ್ಞಾನಿಕವಾಗಿ ಅಧ್ಯಯನ ಮಾಡಿ, ಯಾವ ಸಮುದಾಯಕ್ಕೆ ಯಾವ ಹಕ್ಕು ಎಂಬ ತೀರ್ಮಾನ ಮಾಡಲಾಗಿದೆ. ಅದನ್ನು ಬಹಿರಂಗ ಮಾಡಬೇಕು. ಸರ್ಕಾರವೂ ಅದನ್ನು ಅನುಮೋದಿಸಬೇಕು. ಅದಕ್ಕನುಗುಣವಾಗಿ ಅತಿ ಬಡವರಿರುವ ಯಾವ ಸಮುದಾಯಕ್ಕೆ ಬೇಕಾದರೂ ಮೀಸಲಾತಿ ಕೊಡಿ. ಈಗಿರುವ ಪರಿಸ್ಥಿತಿಯಲ್ಲಿ 2ಎ ಗೆ ಧಕ್ಕೆ ತರಬೇಡಿ ಎಂದು ಒತ್ತಾಯಿಸಿದರು.
ಇನ್ನು ಮೀಸಲಾತಿ ಬೇಡಿಕೆ ಸಂಬಂಧ ಸಮಗ್ರ ಅಧ್ಯಯನ ನಡೆಸಲು ಉನ್ನತ ಮಟ್ಟದ ಹೊಸ ಸಮಿತಿ ರಚನೆ ಮಾಡಿರುವುದಕ್ಕೆ ಅರ್ಥವಿಲ್ಲ, ಅದರ ಅಗತ್ಯವೂ ಇಲ್ಲ. ರಾಜ್ಯ ಹಿಂದುಳಿದ ವರ್ಗಗಳ ಆಯೋಗ ಆ ಉದ್ದೇಶಕ್ಕಾಗಿಯೇ ಇದೆ. ಹೀಗಾಗಿ ನಿವೃತ್ತ ನ್ಯಾಯಮೂರ್ತಿಗಳ ನೇತೃತ್ವದಲ್ಲಿ ಮೂರು ಸದಸ್ಯರ ಉನ್ನತ ಮಟ್ಟದ ಸಮಿತಿ ನಿರ್ಧಾರವನ್ನು ಕೈಬಿಡಬೇಕು ಎಂದು ಮನವಿ ಮಾಡಿದರು.
ಈ ವೇಳೆ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಮಾಜಿ ಅಧ್ಯಕ್ಷರುಗಳಾದ ಸಿ.ಎಸ್.ದ್ವಾರಕಾನಾಥ್, ರವಿ ವರ್ಮಕುಮಾರ್, ವಿ.ಆರ್.ಸುದರ್ಶನ್, ಕೆ.ಸಿ.ವೇಣುಗೋಪಾಲ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.