ಬೆಂಗಳೂರು: ಕಷ್ಟ ಕಾರ್ಪಣ್ಯಗಳನ್ನು ಹೇಳಿಕೊಂಡು ಮನೆ ಬಾಗಿಲಿಗೆ ಬರುವ ಬಡ ಜನರಿಗೆ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎಂ.ಪಿ ರೇಣುಕಾಚಾರ್ಯ ಆರ್ಥಿಕ ನೆರವು ನೀಡಿದ್ದಾರೆ.
ತವರು ಕ್ಷೇತ್ರ ಹೊನ್ನಾಳಿಯಲ್ಲಿ ಕೋವಿಡ್ ಕೇರ್ ಸೆಂಟರ್ನಲ್ಲಿದ್ದುಕೊಂಡು ಸೋಂಕಿತರಿಗೆ ಆತ್ಮಸ್ಥೈರ್ಯ ತುಂಬಿ, ಕ್ಷೇತ್ರದ ಮತದಾರರ ಕಷ್ಟಕ್ಕೆ ಸ್ಪಂದಿಸುತ್ತಿದ್ದ ರೇಣುಕಾಚಾರ್ಯ ಬೆಂಗಳೂರಿನಲ್ಲಿಯೂ ಜನರ ಕಷ್ಟಕ್ಕೆ ಸ್ಪಂದಿಸುತ್ತಿದ್ದಾರೆ. ಕ್ಷೇತ್ರದ ಮತದಾರರಲ್ಲದಿದ್ದರೂ ಸಹ ಮನೆ ಬಾಗಿಲಿಗೆ ನೆರವು ಕೋರಿ ಬರುವ ಬಡವರಿಗೆ ನೆರವಿನ ಸಹಕಾರ ನೀಡುತ್ತಿದ್ದಾರೆ.
ರೇಣುಕಾಚಾರ್ಯ ಗೃಹ ಕಚೇರಿಗೆ ಬೆಂಗಳೂರಿನ ಕೊಡಿಗೆಹಳ್ಳಿ ನಿವಾಸಿ ರಾಮಸಿದ್ದಣ್ಣ ನೆರವು ಕೋರಿ ಬಂದಿದ್ದು, ವಿಶೇಷ ಚೇತನನಾಗಿದ್ದೇನೆ, ಕೊರೊನಾ ಕಾರಣದಿಂದ ಉದ್ಯೋಗವಿಲ್ಲದೆ ಮನೆ ಬಾಡಿಗೆ ಕಟ್ಟಲಾಗದೆ ಆರ್ಥಿಕ ಸಂಕಷ್ಟದಲ್ಲಿದ್ದು, ನೆರವು ನೀಡಿ ಎಂದು ಕೋರಿದರು. ವಿಶೇಷ ಚೇತನ ಯುವಕನ ಸ್ಥಿತಿಗೆ ಮರುಗಿದ ರೇಣುಕಾಚಾರ್ಯ ವೈಯಕ್ತಿಕವಾಗಿ ಧನಸಹಾಯ ಮಾಡಿ ಕಳುಹಿಸಿದರು.
ಅದೇ ರೀತಿ ರಾಮನಗರ ಜಿಲ್ಲೆ ಚನ್ನಪಟ್ಟಣದಿಂದ ಸಂಜಯ್ ಎನ್ನುವ ಯುವಕ ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದು, ವೈದ್ಯಕೀಯ ಚಿಕಿತ್ಸೆಗಾಗಿ ವೈಯಕ್ತಿಕ ಪರಿಹಾರಕ್ಕೆ ಬೇಡಿಕೆ ಇರಿಸಿಕೊಂಡು ಬಂದಿದ್ದನು. ಅವನಿಗೂ ಸಹ ನೆರವು ನೀಡಿ ಕಳುಹಿಸಿದರು. ಹೀಗೆ ಕಷ್ಟ ಹೇಳಿಕೊಂಡು ಬರುವ ಜನರಿಗೆ ನಿರಾಸೆ ಮಾಡದೆ ಕೈಲಾದಷ್ಟು ನೆರವು ನೀಡಿ ರೇಣುಕಾಚಾರ್ಯ ಕೊರೊನಾ ಸಂದರ್ಭದಲ್ಲಿ ಮಾನವೀಯತೆ ಮೆರೆಯುತ್ತಿದ್ದಾರೆ.