ಬೆಂಗಳೂರು: ಬೊಮ್ಮನಹಳ್ಳಿ ಶಾಸಕ ಸತೀಶ್ ರೆಡ್ಡಿ ಮನೆ ಆವರಣದಲ್ಲಿ ನಿಲ್ಲಿಸಿದ್ದ ಎರಡು ದುಬಾರಿ ಕಾರುಗಳಿಗೆ ಬೆಂಕಿ ಹಚ್ಚಿದ ಪ್ರಕರಣದಲ್ಲಿ ಬಂಧಿತರಾಗಿರುವ ಮೂವರು ಆರೋಪಿಗಳನ್ನು ಹೆಚ್ಚಿನ ವಿಚಾರಣೆಗಾಗಿ 14 ದಿನಗಳ ಕಾಲ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಗಾರ್ವೆಬಾವಿಪಾಳ್ಯದ ಸಾಗರ್ ತಾಪ (19), ಬಂಡೆಪಾಳ್ಯದ ನವೀನ್ ಕಾಳಪ್ಪ (22), ಶ್ರೀಧರ್ ಗೌಡ (20) ಎಂಬುವರನ್ನು ಸೋಮವಾರ ಪೊಲೀಸರು ವಶಕ್ಕೆ ಪಡೆದಿದ್ದರು. ವಿಚಾರಣೆ ವೇಳೆ ಒಬ್ಬೊಬ್ಬರು ಒಂದೊಂದು ರೀತಿಯ ಗೊಂದಲಕಾರಿ ಹೇಳಿಕೆ ನೀಡಿದ್ದರು.
ಮೂವರ ಹೇಳಿಕೆ ಮತ್ತು ಪ್ರಕರಣಕ್ಕೂ ಸಾಕಷ್ಟು ವ್ಯತ್ಯಾಸಗಳಿದ್ದವು. ರೌಡಿಶೀಟರ್ ಕೇಬಲ್ ಸೋಮಶೇಖರ್ ಎಂಬಾತ ಕೃತ್ಯದ ಪ್ರಮುಖ ಸೂತ್ರಧಾರಿ ಎಂಬ ಸುದ್ದಿಯೂ ಹರಿದಾಡುತ್ತಿತ್ತು. ಆರೋಪಿಗಳು ಈ ಬಗ್ಗೆ ಸಣ್ಣ ಸುಳಿವು ಕೊಟ್ಟಿದ್ದರು.
ಈ ಎಲ್ಲಾ ವಿಚಾರಗಳ ತನಿಖೆ ನಡೆಸಬೇಕಾಗಿದ್ದು, ಆರೋಪಿಗಳನ್ನು ಕೋರ್ಟ್ಗೆ ಹಾಜರುಪಡಿಸಲಾಗಿತ್ತು. ಹೆಚ್ಚಿನ ವಿಚಾರಣೆ ನಡೆಸಿ ಮಾಹಿತಿ ಕಲೆ ಹಾಕುವ ಸಲುವಾಗಿ ಪೊಲೀಸರು 14 ದಿನಗಳ ಕಾಲ ತಮ್ಮ ವಶಕ್ಕೆ ಪಡೆದಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಇದನ್ನೂ ಓದಿ: ಆಫ್ಘನ್ ಬಿಕ್ಕಟ್ಟಿನ ಬಗ್ಗೆ ಮೌನ ಮುರಿಯಲಿರುವ ಬೈಡನ್!