ಬೆಂಗಳೂರು: ಒಂದು ವಾರವಲ್ಲ, ಇಡೀ ಸದನದಿಂದ ನನ್ನನ್ನು ಅಮಾನತು ಮಾಡಿದರೂ ದಿನವೂ ನಾನು ಸದನಕ್ಕೆ ಬರುತ್ತೇನೆ. ನ್ಯಾಯ ಕೇಳ್ತೇನೆ ಎಂದು ಭದ್ರಾವತಿ ಶಾಸಕ ಬಿ.ಕೆ. ಸಂಗಮೇಶ್ ತಿಳಿಸಿದ್ದಾರೆ.
ವಿಧಾನಸಭೆಯಲ್ಲಿ ಶರ್ಟ್ ಬಿಚ್ಚಿ ಪ್ರತಿಭಟಿಸಿರುವ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ರಾಜ್ಯದಲ್ಲಿ ಗೂಂಡಾಗಿರಿ ನಡೆಯುತ್ತಿದೆ, ಇಲ್ಲಿ ಪ್ರಜಾಪ್ರಭುತ್ವ ಇದ್ಯಾ?, ನನ್ನನ್ನು ಮಾನಸಿಕವಾಗಿ ಕುಗ್ಗಿಸಲು ನೋಡುತ್ತಿದ್ದಾರೆ. ಆದರೆ, ಕ್ಷೇತ್ರದ ಜನರ ಮನಸ್ಸಲ್ಲಿ ನಾನಿದ್ದೇನೆ, ಜನ ಸೇವೆ ಮಾಡುತ್ತಿದ್ದೇನೆ. ನಮ್ಮ ಮನೆ ಮುಂದೆ 500 ಪೊಲೀಸರನ್ನು ನಿಯೋಜಿಸಿದ್ದಾರೆ. ಅಷ್ಟೊಂದು ಹಣ ಖರ್ಚು ಮಾಡಬೇಕಾ?. ಅವರ ಕನಸು ಯಾವತ್ತೂ ನನಸಾಗಲ್ಲ, ಬಿಜೆಪಿಯವರಿಗೆ ಅಲ್ಲಿ ಅಭ್ಯರ್ಥಿ ಇಲ್ಲ. ಕೋಮುವಾದಿಗಳನ್ನು ಭದ್ರಾವತಿಯವರು ಸಹಿಸಲ್ಲ ಎಂದರು.
ನ್ಯಾಯ ಕೇಳಲು ಹೋದರೆ ಅಮಾನತು ಮಾಡುತ್ತಾರೆ. ಇಲ್ಲ ಸಲ್ಲದ ಕೇಸ್ ಹಾಕಿ ನಮ್ಮನ್ನು ಬಂಧಿಸುತ್ತಾರೆ. ಸ್ಪೀಕರ್ ಬಿಜೆಪಿ ಏಜೆಂಟ್ ಆಗಿದ್ದಾರಾ ಎಂದು ಪ್ರಶ್ನಿಸಿದರು. ಶ್ರೀರಾಮನ ಹೆಸರಿನಲ್ಲಿ ರಾಜಕಾರಣ ಮಾಡುತ್ತಿದ್ದಾರೆ. ಕೋಮುದ್ವೇಷ ಹಬ್ಬುವ ಕೆಲಸ ಮಾಡುತ್ತಿದ್ದಾರೆ. ನನ್ನ ಮೇಲೆ ಕೊಲೆಯತ್ನ ಕೇಸ್ ದಾಖಲಿಸಿದ್ದಾರೆ. ನನ್ನ ಪುತ್ರ, ತಮ್ಮನ ಮೇಲೂ ಕೇಸ್ ದಾಖಲಿಸಿದ್ದಾರೆ. ಇದನ್ನು ವಿರೋಧಿಸಿ ಸದನದಲ್ಲಿ ಶರ್ಟ್ ಬಿಚ್ಚಿ ಅಸಮಾಧಾನ ವ್ಯಕ್ತಪಡಿಸಿದ್ದೇನೆ ಎಂದು ಹೇಳಿದರು.
ಇದನ್ನೂ ಓದಿ : ಸಿಟ್ಟಿಗೆದ್ದ ಸಂಗಮೇಶ- ಸದನಲ್ಲಿ ಭಾರೀ ಗಲಾಟೆ: ರೊಚ್ಚಿಗೆದ್ದ ಸ್ಪೀಕರ್, ಕಲಾಪ ಮುಂದೂಡಿಕೆ
ನಾನು ಮಾತನಾಡಲು ಸ್ಪೀಕರ್ ಅವಕಾಶ ಕೊಡಬೇಕಿತ್ತು. ಅವರು ಪಕ್ಷಪಾತಿಯಾಗಿ ನಿರ್ಧಾರ ತೆಗೆದುಕೊಂಡಿದ್ದಾರೆ. ನಾನು ಯಾವುದಕ್ಕೂ ಹೆದರುವುದಿಲ್ಲ.
ಭದ್ರಾವತಿಯಲ್ಲಿ ಬಿಜೆಪಿ ನೆಲಕಚ್ಚಿದೆ. 15 ವಿಧಾನಸಭಾ ಚುನಾವಣೆ ನಡೆದಿವೆ. ಇಲ್ಲಿಯವರೆಗೆ ಬಿಜೆಪಿಗೆ ತಳವೂರಲು ಸಾಧ್ಯವಾಗಿಲ್ಲ. ಅದಕ್ಕೆ ಇಂತಹ ಕೆಲಸಗಳನ್ನು ಮಾಡುತ್ತಿದ್ದಾರೆ. ಒಡೆದು ಆಳುವ ರಾಜಕಾರಣ ಮಾಡುತ್ತಿದ್ದಾರೆ. ನಾನು ಕೂಡ ಹಿಂದೂ, ದೇಶದಲ್ಲಿ ಇರುವ ಎಲ್ಲರೂ ಭಾರತೀಯರೇ. ಶ್ರೀರಾಮನ ನಿಜವಾದ ಭಕ್ತರು ಕಾಂಗ್ರೆಸ್ನವರು. ಇವರಂತೆ ಡೋಂಗಿ ಭಕ್ತಿಯನ್ನು ತೋರಿಸಲ್ಲ ಎಂದು ಕಿಡಿ ಕಾರಿದರು.