ಬೆಂಗಳೂರು: ಬ್ಯಾಟರಾಯನಪುರ ವಿಧಾನಸಭಾ ಕ್ಷೇತ್ರದ ಅಗತ್ಯವಿರುವ ಬಡಾವಣೆಗಳಿಗೆ ಕಾವೇರಿ ನೀರು ಸರಬರಾಜು ಮಾಡಲು ಸಿದ್ಧವಿದ್ದು, ನಿಗದಿತ ಶುಲ್ಕ ಪಾವತಿಸಿ ಸಂಪರ್ಕ ಪಡೆದುಕೊಳ್ಳಬೇಕೆಂದು ಶಾಸಕ ಕೃಷ್ಣಬೈರೇಗೌಡ ಸಾರ್ವಜನಿಕರಿಗೆ ಮನವಿ ಮಾಡಿದರು.
ಬ್ಯಾಟರಾಯನಪುರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಸೆಂಟ್ರಲ್ ಎಕ್ಸೈಸ್ ಬಡಾವಣೆಯಲ್ಲಿ ಕಾವೇರಿ ನೀರು ಸರಬರಾಜು ಸೇವೆಯನ್ನು ಉದ್ಘಾಟಿಸಿ ನಂತರ ಮಾತನಾಡಿದ ಅವರು, ಸುಮಾರು 300 ಕಿ.ಮೀ.ನಿಂದ ನೀರು ತರಬೇಕಿದೆ. ಅಧಿಕಾರಿಗಳು ಅವರ ಸ್ವಾರ್ಥಕ್ಕೆ ಬಿಲ್ ಹಾಕಲ್ಲ, ಮೀಟರ್ ಅಳವಡಿಸಲ್ಲ. ನೀರು ನಿಮ್ಮ ಮನೆಯ ಕೊಳಾಯಿಯಲ್ಲಿ ಸಲೀಸಾಗಿ ಬರೋದ್ರ ಹಿಂದೆ ಸಾಕಷ್ಟು ಪರಿಶ್ರಮ, ಸಾವಿರಾರು ಕಾಣದ ಕೈಗಳು ಕೆಲಸ ಮಾಡ್ತಿವೆ. ಹಾಗಾಗಿ ನಿಯಮಗಳ ಅನುಸಾರ ನೀರಿನ ಸಂಪರ್ಕ ಪಡೆದು ಸಹಕಾರ ನೀಡಬೇಕೆಂದು ಸಾರ್ವಜನಿಕರಲ್ಲಿ ಮನವಿ ಮಾಡಿದರು.
ಕಾವೇರಿ ಮುಖ್ಯ ಪೈಪ್‍ಲೈನ್ ನಕ್ಷೆ ಸರಿ ಇಲ್ಲದ ಕಾರಣ ಸಂಪರ್ಕ ನೀಡಲು ವಿಳಂಬವಾಗಿತ್ತು. ಇದೀಗ ಪ್ರತ್ಯೇಕವಾಗಿ 3 ಕೋಟಿ ರೂ. ವೆಚ್ಚದಲ್ಲಿ ನೇರವಾಗಿ ಪೈಪ್‍ಲೈನ್ ಅಳವಡಿಸಿದ ನಂತರ ನೀರು ಸರಬರಾಜು ಮಾಡಲು ಸಾಧ್ಯವಾಗುತ್ತಿದೆ. ಸೆಂಟ್ರಲ್ ಎಕ್ಸೈಸ್ ಬಡಾವಣೆ, ಡಾ. ಶಿವರಾಮಕಾರಂತ ನಗರ, ಸೂರ್ಯೋದಯ, ಬಾಲಾಜಿ ಕೃಪದ ಅಗತ್ಯವಿರುವ ಮನೆಗಳಿಗೆ ಕಾವೇರಿ ನೀರಿನ ಸಂಪರ್ಕ ಪಡೆಯಬಹುದಾಗಿದೆ ಎಂದರು.
ಎತ್ತಿನಹೊಳೆ ಯೋಜನೆ ವಿಳಂಬದ ಬಗ್ಗೆ ಮಾತನಾಡಿದ ಅವರು, ಸರ್ಕಾರದ ನಿರ್ಲಕ್ಷ್ಯ ಧೋರಣೆಯಿಂದ ಎತ್ತಿನಹೊಳೆ ಯೋಜನೆ ಅನುಷ್ಠಾನಕ್ಕೆ ವಿಳಂಬವಾಗುತ್ತಿದೆ. ಸರ್ಕಾರ ಎತ್ತಿನಹೊಳೆ ಯೋಜನೆ ಕಾಮಗಾರಿ ಭೂ ಸ್ವಾಧೀನ ಪ್ರಕ್ರಿಯೆಗೆ ಈ ಕೂಡಲೇ ದರ ನಿಗದಿ ಮಾಡಬೇಕೆಂದು ಒತ್ತಾಯಿಸಿದರು.
ದೊಡ್ಡಬಳ್ಳಾಪುರ ಹಾಗೂ ಕೊರಟಗೆರೆ ಭಾಗದಲ್ಲಿ ನೀರು ಸಂಗ್ರಹಕ್ಕೆ 5 ಟಿಎಂಸಿ ಅಣೆಕಟ್ಟು ಕಟ್ಟುವುದು ಅಗತ್ಯವಾಗಿದೆ. ಇದಕ್ಕಾಗಿ ಈ ಹಿಂದೆ ಜಾಗ ಗುರುತಿಸಿ ನೋಟಿಫಿಕೇಶನ್ ಮಾಡಿದೆ. ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದು ವರ್ಷದ ಮೇಲಾದರೂ ಇತ್ಯರ್ಥ ಮಾಡಲು ಮುಂದಾಗಿಲ್ಲ. ಹೀಗಾಗಿ ಬಿಜೆಪಿ ಸರ್ಕಾರಕ್ಕೆ ಬಯಲುಸೀಮೆ ಪ್ರದೇಶಗಳನ್ನು ಅಭಿವೃದ್ಧಿ ಮಾಡಲು ಮನಸ್ಸಿಲ್ಲ ಎಂಬುದು ಈ ಮೂಲಕ ಗೊತ್ತಾಗುತ್ತದೆ ಎಂದು ದೂರಿದರು.