ಬೆಂಗಳೂರು: ಸಾರ್, ನಾನು ಸಿಎಂ ಆದ್ರೆ ನಿಮ್ಮ ಸರ್ಕಾರವೇ ಬರೋದಿಲ್ಲ. 20 ವರ್ಷ ನಾನೇ ಸಿಎಂ ಆಗಿರುತ್ತೇನೆ ಅಂತ ಬಸನಗೌಡ ಯತ್ನಾಳ್ ಅವರು ಸಿದ್ದರಾಮಯ್ಯ ಅವರಿಗೆ ಸದನದಲ್ಲಿ ತಿಳಿಸಿದರು.
ವಿಧಾನಸಭೆಯಲ್ಲಿ ಬಜೆಟ್ ಮೇಲಿನ ಚರ್ಚೆಗೂ ಮುನ್ನ ಸದನದಲ್ಲಿ ಸ್ವಾರಸ್ಯಕರ ಚರ್ಚೆ ನಡೆಯಿತು. ಯತ್ನಾಳ್ ಮಾತನಾಡುತ್ತಾ, ನಿಮ್ಮನ್ನ ಕಾಯುತ್ತಾ ಆಡಳಿತ ಪಕ್ಷದವರು ಒಂದು ಗಂಟೆ ಕಾಯುತ್ತಾ ಕುಳಿತಿದ್ದೇವೆ. ಹಾಗಾಗಿ ಅರ್ಧ ಗಂಟೆ ನಿಮ್ಮ ಭಾಷಣ ಮೊಟಕುಗೊಳಿಸಿ ಎಂದರು.
ಇದೇ ವೇಳೆ, ಸಿದ್ದರಾಮಯ್ಯ ಬೆಂಬಲಿಗರಷ್ಟೇ ಬಂದಿದ್ದಾರೆ, ಉಳಿದವರು ಕಾಣುತ್ತಿಲ್ಲ ಅಂತ ಡಿಕೆಶಿ ಬಣದ ಕಾಲೆಳೆದರು. ಆಗ ಸಿದ್ದರಾಮಯ್ಯ, ನೀವು ಮಿನಿಸ್ಟರೂ ಆಗಲಿಲ್ಲ, ಚೀಫ್ ಮಿಸ್ಟರ್ ಕೂಡ ಆಗಲಿಲ್ಲ. ನಿನಗೇಕೆ ಉಸಾಬರಿ?. ಸಿಎಂ ಆಗಿದ್ರೆ ಪರವಾಗಿರಲಿಲ್ಲ, ನೀವು ಎಷ್ಟು ಬೇಕಾದ್ರೂ ಮಾತಾಡಿ ಅಂತ ಕುಹಕ ಮಾಡಿದರು.
ಆಗ ಯತ್ನಾಳ್ ಮಾತನಾಡಿ, ನಾನು ಸಿಎಂ ಆಗಿದ್ದರೆ, ನೀವು 20 ವರ್ಷ ಅಧಿಕಾರಕ್ಕೆ ಬರುವುದಿಲ್ಲ ಎಂದು ಟಾಂಗ್ ನೀಡಿದರು. ಅದಕ್ಕೆ ಸಿದ್ದರಾಮಯ್ಯನವರು, ಹೂಂ ಬಿಡಪ್ಪ, ಅದಕ್ಕೆ ಆಗಲಿಲ್ಲ ಪಾಪ. ಅದಕ್ಕೆ 20 ವರ್ಷ ಕೂತ್ಕೊಂಡ್ ಬಿಡ್ತೀಯಾ ಅಂತ ಮಾಡಿಲ್ಲ ಎಂದು ಸಿದ್ದರಾಮಯ್ಯ ತಿರುಗೇಟು ನೀಡಿದರು.
ಆಗ ಯತ್ನಾಳ್, ನಮ್ಮದು ಎಲ್ಲಾ ಅವಕಾಶ ಹೋಯ್ತು. ಮಂತ್ರಿ ಮಾಡಿದ್ರೆ, ಮುಂದೆ ಮುಖ್ಯಮಂತ್ರಿ ಆಗಬಹುದು ಅಂತ ಅದೂ ಮಾಡ್ತಿಲ್ಲ ಅಂತ ಸ್ವಪಕ್ಷೀಯರ ವಿರುದ್ಧ ಅಸಮಾಧಾನ ಹೊರಹಾಕಿದರು. ನಿಮಗೆ ನನ್ನ ಬಗ್ಗೆ ಅಪಾರ ಗೌರವ ಪ್ರೀತಿ ಇದೆ ಅದಕ್ಕೆ ಧನ್ಯವಾದಗಳು ಎಂದರು.
ಬಳಿಕ ಸಿದ್ದರಾಮಯ್ಯ ಅವರು, ಪಾಪ ಅಶೋಕ್ ಅವರಿಗೆ ಅಲ್ಲಿರೋ ಭಿನ್ನಾಭಿಪ್ರಾಯಗಳನ್ನು ಹೇಳೋಕಾಗಲ್ಲ, ಅದಕ್ಕೆ ಈ ಕಡೆದು ಹೇಳ್ತಿದ್ದಾರೆ ಎಂದರು. ಆಗ ಆರ್.ಅಶೋಕ್ ಎದ್ದು ನಿಂತು, ನಾನು ಮತ್ತು ಸಿಎಂ ಚೆನ್ನಾಗಿದ್ದೀವಿ ನಿಮಗೆ ಗೊತ್ತಿದೆ. ನಿಮ್ಮ ನಡುವಿನ ಗೊಂದಲದ ಬಗ್ಗೆ ದಿನಾ ಮಾಧ್ಯಮದವರು ಬರೀತಿದ್ದಾರಾ?. ಬೇಕು ಅಂತಾ ಬರೀತಿದಾರೋ, ಬೇಡ ಅಂತ ಬರೀತಿದಾರೋ ಗೊತ್ತಿಲ್ಲ ಎಂದ ಅಶೋಕ್ ಕಾಲೆಳೆದರು.
ನೀನೇ ಬೇಕು ಅಂತ ಬರೆಸ್ತಿದ್ದೀಯೇನೋ ಗೊತ್ತಿಲ್ಲ ಎಂದು ಸಿದ್ದರಾಮಯ್ಯ ತಿರುಗೇಟು ನೀಡಿದರು. ಪತ್ರಿಕೆ, ಟಿವಿಲೆಲ್ಲ ನೀನೇ ಬರೆಸ್ತಿದ್ದೀಯೇನೋ ಅನುಮಾನ ಹುಟ್ಟಿದೆ. ನನಗೂ, ಶಿವಕುಮಾರ್ ಹಾಗೂ ಬೇರೆಯವರ ನಡುವೆ ಯಾವುದೇ ಗೊಂದಲ ಇಲ್ಲ. ನನಗೂ ದೇಶಪಾಂಡೆ ನಡುವೆ ಯಾವುದೇ ಭಿನ್ನಾಭಿಪ್ರಾಯ ಇಲ್ಲ ಎಂದು ಸಿದ್ದರಾಮಯ್ಯ ಸ್ಪಷ್ಟಪಡಿಸಿದರು.
ಆಗ ಆರ್.ಅಶೋಕ್, ದೇಶಪಾಂಡೆ ಜೊತೆ ಚೆನ್ನಾಗಿದ್ದೀರಿ ಅಂತ ನಾವೇ ಸರ್ಟಿಫಿಕೇಟ್ ಕೊಡ್ತೀವಿ, ಆದ್ರೆ ಡಿಕೆಶಿ ಜೊತೆ ಇಲ್ಲ ಬಿಡಿ. ತೊಟ್ಟು ಹುಳಿ ಬಿದ್ರೆ ಸಾಕು ಒಡೆದೋಗುತ್ತೆ ಅಂತ ಸಿದ್ದರಾಮಯ್ಯ ಅವರ ಕಾಲೆಳೆದರು.
ಇದನ್ನೂ ಓದಿ: ಕಾಂಗ್ರೆಸ್ ಬಜೆಟ್ vs ಬಿಜೆಪಿ ಬಜೆಟ್: ಸದನದಲ್ಲಿ ಲೆಕ್ಕ ಬಿಡಿಸಿ ಹೇಳಿದ ಸಿದ್ದರಾಮಯ್ಯ