ಬೆಂಗಳೂರು: ಬಿಜೆಪಿಯವರು ಎಷ್ಟಂತ ಹಿಂಬಾಗಿಲಿನಿಂದ ಬರುತ್ತಾರೆ? ಅವರು ಸ್ವಂತ ಬಲದಿಂದ ಅಧಿಕಾರಕ್ಕೇರಲು ಸಾಧ್ಯವೇ ಇಲ್ಲ ಎಂದು ಕಾಂಗ್ರೆಸ್ ಮುಖ್ಯ ಸಚೇತಕ ಅಜಯ್ ಸಿಂಗ್ ಟೀಕಿಸಿದ್ದಾರೆ.
ವಿಧಾನಸೌಧದಲ್ಲಿ ಮಾತನಾಡಿದ ಅವರು, ಮತ್ತೆ ಆಪರೇಷನ್ ಕಮಲ ಮಾಡುವ ವಿಚಾರವಾಗಿ ಪ್ರತಿಕ್ರಿಯಿಸುತ್ತಾ, ಎಷ್ಟು ಆಪರೇಷನ್ ಮಾಡ್ತಾರೆ. ಎಷ್ಟು ಬ್ಯಾಕ್ ಡೋರ್ ಎಂಟ್ರಿ ಮಾಡ್ತಾರೆ. ಅವರು ಸ್ವಂತ ಬಲದಿಂದ ಅಧಿಕಾರಕ್ಕೆ ಬರಲು ಸಾಧ್ಯವಿಲ್ಲ. ಅತಂತ್ರ ಇರುವ ಕಡೆ ನಮ್ಮ ಹಿರಿಯ ನಾಯಕರು ಕೂತು ಚರ್ಚೆ ಮಾಡುತ್ತಾರೆ ಎಂದಿದ್ದಾರೆ.
ಕಲಬುರಗಿ ಕಾಂಗ್ರೆಸ್ ಭದ್ರಕೋಟೆ. ಕಾಂಗ್ರೆಸ್ ಪರವಾಗಿ ಜನರಿದ್ದಾರೆ. ಅಲೆಯೂ ನಮ್ಮ ಪರವಾಗಿದೆ. ಹುಬ್ಬಳ್ಳಿ-ಧಾರವಾಡದಲ್ಲಿ ಕಾಂಗ್ರೆಸ್ ಒಳ್ಳೆಯ ಪ್ರಭಾವ ತೋರಿಸಿದೆ. ಎಲ್ಲ ಸಚಿವರು ಅಲ್ಲಿಯೇ ಠಿಕಾಣಿ ಹಾಕಿದ್ರೂ, ನಾವು ಹೆಚ್ಚಿನ ಸ್ಥಾನ ಗೆದ್ದಿದ್ದೇವೆ. ಸಿಂಗಲ್ ಲಾರ್ಜೆಸ್ಟ್ ಪಾರ್ಟಿಯಾಗಿ ನಾವು ಹುಬ್ಬಳ್ಳಿಯಲ್ಲಿ ಸಾಧನೆ ಮಾಡಿದ್ದೇವೆ. ಬಿಜೆಪಿಯವರು ಎಲ್ಲ ಅಧಿಕಾರ ದುರ್ಬಳಕೆ ಮಾಡಿಕೊಂಡಿದ್ದಾರೆ ಎಂದು ಆರೋಪಿಸಿದ್ದಾರೆ.
ಕಲಬುರಗಿಯಲ್ಲಿ 55ರಲ್ಲಿ 28 ಸ್ಥಾನ ನಾವೇ ಗೆದ್ದಿದ್ದೇವೆ. ನಮಗೆ ಮೇಯರ್ ಆಗುವ ಮೊದಲ ಅವಕಾಶ ನೀಡಬೇಕು. ನಮ್ಮ ಎಲ್ಲ ನಾಯಕರು ಸಮಾಲೋಚನೆ ಮಾಡಿ ತೀರ್ಮಾನ ತೆಗೆದುಕೊಳ್ತಾರೆ. ಕಲಬುರಗಿಯಲ್ಲಿ ಅತಂತ್ರ ಏನಿಲ್ಲ. ಒಂದು ಇಂಡಿಪೆಂಡೆಂಟ್ ಅಭ್ಯರ್ಥಿ ಗೆಲುವು ಪಡೆದಿದ್ದಾರೆ. ಅದು ಕಾಂಗ್ರೆಸ್ ರೆಬೆಲ್ ಕ್ಯಾಂಡಿಡೇಟ್. ಮತ್ತೆ ಕಾಂಗ್ರೆಸ್‌ಗೆ ಬೆಂಬಲ ನೀಡಲಿದ್ದಾರೆ. ಕಲ್ಬುರ್ಗಿಯಲ್ಲಿ ನಾವೇ ಮೇಯರ್ ಆಗ್ತೀವಿ. ಬಿಜೆಪಿಗೆ ತೀವ್ರ ಮುಖಭಂಗವಾಗಿದೆ ಎಂದಿದ್ದಾರೆ.
ಪಾಲಿಕೆ ಚುನಾವಣೆಯಲ್ಲಿ ಸಹಜವಾಗಿ ಜನ ಆಡಳಿತ ಪಕ್ಷದ ಪರ ವಾಲಿದ್ದಾರೆ: ಎಚ್.ಕೆ.ಕುಮಾರಸ್ವಾಮಿ
ಆಡಳಿತ ಪಕ್ಷದ ಕಡೆ ಜನ ಸಹಜವಾಗಿ ವಾಲಿದ್ದಾರೆ. ಇದು ಮತದಾರರು ಕೊಟ್ಟ ತೀರ್ಪಲ್ಲ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಕೆ.ಕುಮಾರಸ್ವಾಮಿ ತಿಳಿಸಿದರು.
ವಿಧಾನಸೌಧದಲ್ಲಿ ಮಾತನಾಡಿದ ಅವರು, ಪಾಲಿಕೆ ಫಲಿತಾಂಶ ಗಮನಿಸಿದ್ದೇವೆ. ನಾವು ಪಕ್ಷ ಸಂಘಟನೆ ಮಾಡ್ತಿದ್ದೇವೆ. ಈ ಚುನಾವಣೆಗೆ ಅಷ್ಟಾಗಿ ಗಮನಕೊಟ್ಟಿರಲಿಲ್ಲ. ಸಹಜವಾಗಿ ಜನರು ಆಡಳಿತ ಪಕ್ಷದ ಪರ ವಾಲಿದ್ದಾರೆ ಎಂದು ತಿಳಿಸಿದರು.
ಜೆಡಿಎಸ್ ಜೊತೆ ಬಿಜೆಪಿ ಮೈತ್ರಿ ಎಂಬ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ನಾವು ಯಾವ ಪಕ್ಷದ ಜೊತೆ ಮಾತುಕತೆ ನಡೆಸಿಲ್ಲ. ಪಕ್ಷದ ಮುಖಂಡರು ಕುಳಿತುಚರ್ಚೆ ಮಾಡ್ತೇವೆ. ಮೈತ್ರಿ ಬಗ್ಗೆ ಇನ್ನೂ ಮಾತುಕತೆ ನಡೆಸಿಲ್ಲ. ಜಾತ್ಯಾತೀತ ಆಧಾರದ ಮೇಲೆ ನಿರ್ಧರಿಸುತ್ತೇವೆ ಎಂದರು.
ಎಚ್.ಡಿ.ಕುಮಾರಸ್ವಾಮಿ ಸಿಎಂ ಬೊಮ್ಮಾಯಿ ಭೇಟಿ ವಿಚಾರವಾಗಿ ಪ್ರತಿಕ್ರಿಯಿಸುತ್ತಾ, ರಾಜ್ಯದ ಸಮಸ್ಯೆಗಳ ಬಗ್ಗೆ ಗಮನ ಸೆಳೆಯಲು ಭೇಟಿ ನೀಡುತ್ತೇವೆ. ಇವತ್ತು ನಾವು ಸಿಎಂ ಭೇಟಿ ಮಾಡುತ್ತಿದ್ದೇವೆ. ರಾಜ್ಯದಲ್ಲಿ ನಡೆಯುತ್ತಿರುವ ಅತ್ಯಾಚಾರ, ನೆರೆ ಹಾವಳಿ, ಸಂತ್ರಸ್ಥರಿಗೆ ಪರಿಹಾರ, ಶಾಸಕರ ಅನುದಾನ ಸಮಸ್ಯೆ ಬಗ್ಗೆ ಚರ್ಚಿಸುತ್ತೇವೆ ಎಂದು ವಿವರಿಸಿದರು.