ಬೆಂಗಳೂರು: ರಾಜ್ಯದಲ್ಲಿ ಎದ್ದಿರುವ ನಾಯಕತ್ವ ಬದಲಾವಣೆ ಕೂಗನ್ನು ತಣ್ಣಗಾಗಿಸಲು ಆಗಮಿಸಿರುವ ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ಗೆ ಇಂದು ಸಚಿವರ ಕಾರ್ಯನಿರ್ವಹಣಾ ವರದಿ ಸಲ್ಲಿಕೆ ಆಗಲಿದೆ.
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಶಶಿಕಲಾ ಜೊಲ್ಲೆ ಇಂದು ಮುಂಜಾನೆ ಕುಮಾರಕೃಪಾ ಅತಿಥಿ ಗೃಹಕ್ಕೆ ಆಗಮಿಸಿ ಅರುಣ್ ಸಿಂಗ್ಗೆ ತಮ್ಮ ಇಲಾಖೆಯ ಪ್ರಗತಿ ಹಾಗೂ ಸಾಧನೆಗಳ ವರದಿ ಸಲ್ಲಿಸಿದ್ದಾರೆ. ನಿನ್ನೆ ಯುವಜನ ಸೇವೆ ಮತ್ತು ಕ್ರೀಡಾ ಇಲಾಖೆ, ಸಾಂಖ್ಯಿಕ ಇಲಾಖೆಗಳ ಸಚಿವ ಕೆ.ಸಿ.ನಾರಾಯಣಗೌಡ ಬಿಜೆಪಿ ಕಚೇರಿಯಲ್ಲಿ ತಮ್ಮ ಕಾರ್ಯನಿರ್ವಹಣಾ ವರದಿ ಸಲ್ಲಿಸಿದ್ದರು. ಉಳಿದ ಸಚಿವಾಲಯಗಳ ಪ್ರಗತಿಯ ವರದಿಯನ್ನು ಇಂದು ಸಲ್ಲಿಸಲಾಗುತ್ತದೆ.
ನಾಯಕತ್ವ ಬದಲಾವಣೆ ವದಂತಿ ಬೆನ್ನಲ್ಲೇ ರಾಜ್ಯ ಬಿಜೆಪಿ ಪಾಳಯದಲ್ಲಿ ಎದ್ದಿರುವ ಅಸಮಾಧಾನದ ಹೊಗೆ ಶಮನಗೊಳಿಸಲು ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ರಾಜ್ಯಕ್ಕೆ ಆಗಮಿಸಿದ್ದಾರೆ. ರಾಜ್ಯ ಬಿಜೆಪಿಯಲ್ಲಿನ ಅಸಮಾಧಾನ ಶಮನಗೊಳಿಸುವ ಹೊಣಗಾರಿಕೆಯನ್ನು ಹೈಕಮಾಂಡ್ ಅರುಣ್ ಸಿಂಗ್ಗೆ ವಹಿಸಿದ್ದು, ಮೂರು ದಿನಗಳ ಕಾಲ ಬೆಂಗಳೂರಿನಲ್ಲಿಯೇ ಇದ್ದು ಪರಿಸ್ಥಿತಿ ಅವಲೋಕನ ಮಾಡಲಿದ್ದಾರೆ.
ಇದನ್ನೂ ಓದಿ: ಇಂದು ಶಾಸಕರೊಂದಿಗೆ ಅರುಣ್ ಸಿಂಗ್ ಒನ್ ಟು ಒನ್ ಮೀಟಿಂಗ್