ಬೆಂಗಳೂರು: ದೇಶದ ಆಂತರಿಕ ಭದ್ರತೆಗೆ ಆತಂಕ ತಂದೊಡ್ಡಿದ್ದ ಪಿಎಫ್‍ಐ ಹಾಗೂ ಅದರ ಸಹವರ್ತಿ ಸಂಸ್ಥೆಗಳನ್ನು ಕೇಂದ್ರ ಸರ್ಕಾರ ನಿಷೇಧಿಸಿರುವುದನ್ನು ಇಂಧನ ಸಚಿವ ವಿ.ಸುನಿಲ್ ಕುಮಾರ್ ಸ್ವಾಗತಿಸಿದ್ದಾರೆ.
ಪಿಎಫ್‍ಐ, ಐಸಿಸ್ ನಂಥ ಜಾಗತಿಕ ಉಗ್ರ ಸಂಘಟನೆಗಳ ಜತೆ ಸಂಬಂಧ ಹೊಂದಿತ್ತು. ದೇಶದ ಆಂತರಿಕ ಭದ್ರತೆಗೆ ಧಕ್ಕೆ ತರುವ ಸಂಚು ರೂಪಿಸಿದ್ದು ಮಾತ್ರವಲ್ಲ, ಮುಸ್ಲಿಂ ಯುವಕರ ತಲೆಕೆಡಿಸಿ ಅವರನ್ನು ಐಸಿಸ್ ಸಂಘಟನೆಗೆ ಕಳುಹಿಸುತ್ತಿತ್ತು. ಇತ್ತೀಚೆಗೆ ನಡೆದ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣದಲ್ಲೂ ಇದೇ ಸಂಘಟನೆ ಪಾತ್ರ ಇರುವುದನ್ನು ಕೇಂದ್ರ ಗೃಹ ಇಲಾಖೆ ಉಲ್ಲೇಖಿಸಿದ್ದು, ಭವಿಷ್ಯದಲ್ಲಿ ಪಿಎಫ್ ಐ ನಡೆಸಬಹುದಾಗಿದ್ದ ಭಾರಿ ವಿಧ್ವಂಸಕ ಕೃತ್ಯಗಳಿಗೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಕಡಿವಾಣ ಹಾಕಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ರಾಜ್ಯದಲ್ಲಿ ಪಿಎಫ್ ಐ ಈ ಮಟ್ಟಿಗೆ ಬೆಳೆಯುವುದಕ್ಕೆ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರವೇ ಕಾರಣವಾಗಿದೆ ಎಂದು ನೇರವಾಗಿ ಆರೋಪಿಸುತ್ತೇನೆ. ಸಿದ್ದರಾಮಯ್ಯ ಅಧಿಕಾರದಲ್ಲಿ ಇದ್ದಾಗ ಪಿಎಫ್ ಐ ಸಂಘಟನೆಯ ವಿರುದ್ಧ ದಾಖಲಾಗಿದ್ದ, 100ಕ್ಕೂ ಹೆಚ್ಚು ಪ್ರಕರಣ ವಾಪಸ್ ಪಡೆಯಲಾಗಿತ್ತು. 1400ಕ್ಕೂ ಹೆಚ್ಚು ಪಿಎಫ್ ಐ ಕಾರ್ಯಕರ್ತರಿಗೆ ಸಿದ್ದರಾಮಯ್ಯ ಕ್ಷಮಾದಾನ ನೀಡಿದ್ದರು. ಇದರ ಫಲವಾಗಿ ರಾಜ್ಯದಲ್ಲಿ ಹಿಂದು ಕಾರ್ಯಕರ್ತರ ಸರಣಿ ಕೊಲೆ ಕೇಸ್ಗಳಿಗೆ ಕಾಂಗ್ರೆಸ್ ಕಾರಣವಾಗಿತ್ತು ಎಂದು ಸುನಿಲ್ ಕುಮಾರ್ ದೂರಿದ್ದಾರೆ.
ಹುಬ್ಬಳ್ಳಿ ಹಾಗೂ ಮಂಗಳೂರಿನಲ್ಲಿ ಇದೇ ಸಂಘಟನೆ ಕಾರ್ಯಕರ್ತರು ಪೊಲೀಸ್ ಠಾಣೆಗೆ ನುಗ್ಗಿ ದಾಂಧಲೆ ನಡೆಸಿದಾಗ ಕಾಂಗ್ರೆಸ್ ನಾಯಕರು ತುಟಿ ಬಿಚ್ಚಲಿಲ್ಲ. ಬೆಂಗಳೂರಿನ ಡಿ.ಜೆ.ಹಳ್ಳಿ, ಕೆ.ಜಿ.ಹಳ್ಳಿ ಪೊಲೀಸ್ ಠಾಣೆಗೆ ಮುತ್ತಿಗೆ ಹಾಕಿ ತನ್ನದೇ ಶಾಸಕರ ಮನೆಗೆ ಬೆಂಕಿ ಹಚ್ಚಿದಾಗಲೂ ಕಾಂಗ್ರೆಸ್ ಧ್ವನಿ ಎತ್ತಿರಲಿಲ್ಲ. ಇದು ಪಿಎಫ್ ಐ ಪರ ಕಾಂಗ್ರೆಸ್ ತಾಳಿದ್ದ ಮೃಧು ಧೋರಣೆಗೆ ಸಾಕ್ಷಿಯಾಗಿತ್ತಲ್ಲವೇ ? ಎಂದು ಪ್ರಶ್ನಿಸಿದ್ದಾರೆ.
ಕೇಂದ್ರದಲ್ಲೂ ಬಿಜೆಪಿ ಸರ್ಕಾರ ಇದೆ, ರಾಜ್ಯದಲ್ಲೂ ಬಿಜೆಪಿ ಸರ್ಕಾರ ಇದೆ. ಸಾಮರ್ಥ್ಯ ಇದ್ದರೆ ಪಿಎಫ್ ಐ ಬ್ಯಾನ್ ಮಾಡಿ ಎಂದು ಸಿದ್ದರಾಮಯ್ಯ ಆಗಾಗ ಮಾಡುತ್ತಿದ್ದ ಉದ್ರೇಕಕಾರಿ ಭಾಷಣಕ್ಕೆ ಈಗ ಉತ್ತರ ನೀಡಲಾಗಿದೆ. ಪ್ರವೀಣ್ ನೆಟ್ಟಾರ್ ಹತ್ಯೆ ನಡೆದಾಗ ಈ ಸಂಘಟನೆಗಳ ನಿಷೇಧಕ್ಕೆ ನಾನು ಒತ್ತಾಯಿಸಿದ್ದೆ. ಪ್ರವೀಣ್ ಹತ್ಯೆಯಲ್ಲೂ ಪಿಎಫ್ ಐ ಪಾತ್ರವಿದೆ ಎಂದು ಕೇಂದ್ರ ಸರಕಾರ ಹೇಳಿದೆ. ಈ ಹಿಂದೆ ಸಿಮಿ ಸಂಘಟನೆಯನ್ನು ಅಟಲ್ ಬಿಹಾರಿ ವಾಜಪೇಯಿ ನೇತೃತ್ವದ ಬಿಜೆಪಿ ಸರಕಾರ ಬ್ಯಾನ್ ಮಾಡಿತ್ತು. ಅದರ ರೂಪಾಂತರಿ ತಳಿ ಪಿಎಫ್ ಐ ನ್ನು ಪ್ರಧಾನಿ ಮೋದಿ ನೇತೃತ್ವದ ಬಿಜೆಪಿ ಸರ್ಕಾರವೇ ನಿಷೇಧಿಸಿದೆ. ದೇಶದ ಆಂತರಿಕ ಹಾಗೂ ಬಾಹ್ಯ ರಕ್ಷಣೆಗೆ ಬಿಜೆಪಿ ಸದಾ ಬದ್ಧವಾಗಿದೆ ಎಂದಿದ್ದಾರೆ.
ಇದನ್ನೂ ಓದಿ.. Big News: ಪಿಎಫ್ಐಗೆ ಕೇಂದ್ರದ ಅಂಕುಶ.. ಸಂಘಟನೆ ನಿಷೇಧಿಸಿ ಮಹತ್ವದ ಆದೇಶ