ಬೆಂಗಳೂರು: ವೈದ್ಯ ವೃತ್ತಿ ಅತ್ಯಂತ ಪವಿತ್ರವಾದದ್ದು. ಇಂಥ ಸಂದರ್ಭದಲ್ಲಿ ಮಾನವೀಯತೆಯಿಂದ ಕೆಲಸ ಮಾಡಬೇಕು. ಅದನ್ನು ಬಿಟ್ಟು ಕಟುಕರಂತೆ ವರ್ತಿಸಬಾರದು. ಜನರು ಚಿಕಿತ್ಸೆಗಾಗಿ ರಸ್ತೆ ರಸ್ತೆಗಳಲ್ಲಿ ಅಲೆಯುತ್ತಿದ್ದಾರೆ. ಈ ಸಮಯದಲ್ಲಿ ಎಲ್ಲರೂ ಹೃದಯ ವೈಶಾಲ್ಯತೆ ಮೆರೆಯಬೇಕು ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ. ಸುಧಾಕರ್ ಹೇಳಿದರು.
ಇಂದಿರಾ ನಗರದಲ್ಲಿರುವ ಸಿ.ವಿ. ರಾಮನ್ ಸಾರ್ವಜನಿಕ ಆಸ್ಪತ್ರೆಗೆ ಅನಿರೀಕ್ಷಿತ ಭೇಟಿ ನೀಡಿ ಪರಿಶೀಲನೆ ನಡೆಸಿದ ಸಂದರ್ಭದಲ್ಲಿ ಲೋಪಗಳು ಕಂಡು ಬಂದ ಹಿನ್ನೆಲೆಯಲ್ಲಿ ಅಧಿಕಾರಿಗಳನ್ನು ಸಚಿವರು ತರಾಟೆಗೆ ತೆಗೆದುಕೊಂಡರು. ಕೋವಿಡ್ ವಿರುದ್ಧದ ಹೋರಾಟದ ಸಂದರ್ಭದಲ್ಲಿ ಮಾನವೀಯತೆಯಿಂದ ಕರ್ತವ್ಯ ನಿರ್ವಹಿಸುವಂತೆ ವೈದ್ಯರು ಮತ್ತು ಸಿಬ್ಬಂದಿಗೆ ವೈದ್ಯಕೀಯ ಸಚಿವರು ಕಿವಿಮಾತು ಹೇಳಿದರು.
ನಗರದಲ್ಲಿ ಇದ್ದುಕೊಂಡು ಮಾರ್ಗಸೂಚಿ ಪಾಲಿಸದೆ ಹಾಸಿಗೆಗಳನ್ನು ಸರಿಯಾದ ರೋಗಿಗಳಿಗೆ ಒದಗಿಸದ ಕಾರಣಕ್ಕೆ, ಕರ್ತವ್ಯ ಲೋಪದ ಹಿನ್ನೆಲೆಯಲ್ಲಿ ಸಂಬಂಧಿಸಿದ ಇಬ್ಬರು ಅಧಿಕಾರಿಗಳನ್ನು ತಕ್ಷಣದಿಂದಲೇ ಅಮಾನತ್ತಿನಲ್ಲಿ ಇರಿಸುವಂತೆ ಸ್ಥಳದಿಂದಲೇ ಅಪರ ಮುಖ್ಯ ಕಾರ್ಯದರ್ಶಿ ಅವರಿಗೆ ಸಚಿವ ಸುಧಾಕರ್ ಸೂಚನೆ ನೀಡಿದರು.
ಅನಸ್ತೇಷಿಯಾ ವಿಭಾಗದಲ್ಲಿ ಆರು ಮಂದಿ ತಜ್ಞರು ಇದ್ದರೂ ಇನ್ನೂ ವೆಂಟಿಲೇಟರ್ ಅಳವಡಿಕೆ ಆಗಿಲ್ಲ. ಅಗತ್ಯ ಇರುವ ಬೇರೆ ಆಸ್ಪತ್ರೆಗೆ ಏಕೆ ತಜ್ಞರನ್ನು ನಿಯೋಜಿಸಲಿಲ್ಲ ಎಂದೂ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.
ಐಸಿಯು ಮತ್ತು ವೆಂಟಿಲೇಟರ್ ಅಳವಡಿಕೆಯಲ್ಲಿ ವಿಳಂಬ ಆಗಿರುವುದನ್ನು ಕಂಡ ಸಚಿವರು, ಕಳೆದ ನಾಲ್ಕು ತಿಂಗಳಿಂದ ನಾವು ಹಗಲು - ರಾತ್ರಿ ಕಷ್ಟಪಟ್ಟು ಕೆಲಸ ಮಾಡುತ್ತಿದ್ದೇವೆ. ಆದರೂ ಮಾಧ್ಯಮಗಳಲ್ಲಿ ನಮ್ಮ ವಿರುದ್ಧ ವರದಿಗಳು ಬರುತ್ತಿವೆ. ಅದಕ್ಕೆ ಇಂಥ ಲೋಪಗಳು ಕಾರಣ ಎಂದರು.
ಇದೇ ಸಂದರ್ಭದಲ್ಲಿ ರೋಗಿಗಳ ಜತೆ ವಿಡಿಯೋ ಕಾಲ್ ಮೂಲಕ ಮಾತನಾಡಿ ಆಸ್ಪತ್ರೆಯಲ್ಲಿ ಒದಗಿಸಿರುವ ಸೌಲಭ್ಯ ಮತ್ತು ಚಿಕಿತ್ಸೆಯ ಬಗ್ಗೆ ವಿಚಾರಿಸಿಕೊಂಡರು. ವೈದ್ಯಕೀಯ ಅಧೀಕ್ಷಕರಾದ ರಾಧಾಕೃಷ್ಣ ಹಾಗೂ ಇತರೆ ಅಧಿಕಾರಿಗಳು ಹಾಜರಿದ್ದರು.