ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಅವರಂತೆ ಸಿಎಂ ಯಡಿಯೂರಪ್ಪ ಅಭಿವೃದ್ಧಿ ಕೆಲಸ ಮಾಡುತ್ತಿದ್ದಾರೆ. ಮಂಡ್ಯದ ಅಭಿವೃದ್ಧಿಗೆ ಯಡಿಯೂರಪ್ಪ ಅವರೇ ಬರಬೇಕಾಯ್ತು ಎಂದು ಸಚಿವ ನಾರಾಯಣ ಗೌಡ ಚುನಾವಣಾ ಪ್ರಚಾರದಲ್ಲಿ ಹೇಳಿದ್ದಾರೆ.
ಹಾಸನ - ಮಂಡ್ಯ ಎರಡು ಕಣ್ಣುಗಳಿದ್ದಂತೆ ಎಂದು ಕೇವಲ ಬಾಯಿ ಮಾತಿಗೆ ಹೇಳ್ಕೊಂಡು ಬಂದರು. ಆದ್ರೆ ಅನುದಾನ ಮಾತ್ರ ಏನು ಕೊಟ್ಟಿಲ್ಲ. ಯಡಿಯೂರಪ್ಪ ಸಿಎಂ ಆದ್ಮೇಲೆ ಸಾವಿರಾರು ಕೋಟಿ ರೂ. ಅನುದಾನ ಕೊಟ್ಟಿದ್ದಾರೆ. ಅದೇ ರೀತಿ, ಆರ್ ಆರ್ ನಗರದ ಅಭಿವೃದ್ಧಿಗೆ ಮುನಿರತ್ನ ಅವರನ್ನ ಹೆಚ್ಚಿನ ಮತದಿಂದ ಗೆಲ್ಲಿಸಿ. ಕೆಲವೇ ದಿನಗಳಲ್ಲಿ ಮುನಿರತ್ನ ಸಚಿವರಾಗಿ ಈ ಭಾಗಕ್ಕೆ ಬರುತ್ತಾರೆ ಎಂದು ಸಚಿವ ನಾರಾಯಣ ಗೌಡ ಹೇಳಿದರು.
ಲಗ್ಗೆರೆ ಭಾಗದಲ್ಲಿ ನಡೆಯುತ್ತಿರುವ ಚುನಾವಣಾ ಪ್ರಚಾರದಲ್ಲಿ ಮಾತನಾಡಿದ ಸಚಿವರು, ಅಧಿಕಾರದಲ್ಲಿ ಇಲ್ಲದಿದ್ದರೂ ಮುನಿರತ್ನ ಸೇವೆ ಮಾಡುತ್ತಲೇ ಇದ್ದಾರೆ. ಲಾಕ್ಡೌನ್ ಸಂದರ್ಭದಲ್ಲಿ ಪ್ರತಿಯೊಬ್ಬರ ಸಂಕಷ್ಟಕ್ಕೂ ನೆರವಾಗಿದ್ದಾರೆ. ಸದಾ ಜನರ ಸಮಸ್ಯೆಗೆ ಸ್ಪಂದಿಸುವ ಮುನಿರತ್ನ ಅವರನ್ನ ಗೆಲ್ಲಿಸಿ ಎಂದು ಜನರಲ್ಲಿ ಮನವಿ ಮಾಡಿದರು.
25 ವರ್ಷ ರಾಜ್ಯದಲ್ಲಿ ಬಿಜೆಪಿ ಸರ್ಕಾರವೇ ಆಡಳಿತದಲ್ಲಿ ಇರುತ್ತದೆ. ಹೀಗಾಗಿ ಅಭಿವೃದ್ಧಿಗೋಸ್ಕರ ಜನರು ಬಿಜೆಪಿ ಅಭ್ಯರ್ಥಿ ಮುನಿರತ್ನ ಅವರಿಗೆ ಮತ ನೀಡಿ ಎಂದು ಸಚಿವರು ಮನವಿ ಮಾಡಿದರು. ಸಚಿವರಾದ ಆರ್ ಅಶೋಕ್, ಗೋಪಾಲಯ್ಯ, ಅಭ್ಯರ್ಥಿ ಮುನಿರತ್ನ, ಬಿಜೆಪಿ ನಾಯಕಿ ಶೃತಿ ಮತ್ತಿತರ ಪ್ರಮುಖರು ಪ್ರಚಾರದ ವೇಳೆ ಉಪಸ್ಥಿತರಿದ್ದರು.