ಬೆಂಗಳೂರು: ಅಟಲ್ ಭೂ ಜಲ ಯೋಜನೆಯಡಿ ಅಂತರ್ಜಲ ಅಭಿವೃದ್ಧಿ ಯೋಜನೆ ರೂಪಿಸಲಾಗಿದೆ. ಅದಕ್ಕಾಗಿ ರಾಜ್ಯದ 14 ಜಿಲ್ಲೆಗಳ 41 ತಾಲೂಕುಗಳಿಗೆ ₹ 1,203 ಕೋಟಿ ಒದಗಿಸಲಾಗಿದೆ ಎಂದು ಸಣ್ಣ ನೀರಾವರಿ ಸಚಿವ ಜೆ.ಸಿ.ಮಾಧುಸ್ವಾಮಿ ಹೇಳಿದ್ದಾರೆ.
ವಿಧಾನಸೌಧದಲ್ಲಿ ಇಂದು ನೀರಾವರಿ ಅಧಿಕಾರಿಗಳ ಜೊತೆ ಸಭೆ ನಡೆಸಿದ ಬಳಿಕ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಸಣ್ಣ ನೀರಾವರಿ ಇಲಾಖೆ ಮೊದಲ ಹಂತದಲ್ಲಿ 41 ತಾಲೂಕುಗಳಲ್ಲಿ ನೀರಿನ ಅಂತರ್ಜಲ ಮಟ್ಟ ಏರಿಕೆ ಮಾಡಲು ಯೋಜನೆ ರೂಪಿಸುತ್ತಿದ್ದೇವೆ. ನಾಲ್ಕು ವರ್ಷದಲ್ಲಿ ಈ ವೆಚ್ಚ ಬಳಕೆ ಮಾಡಬೇಕು. ಕೇಂದ್ರ ಸರ್ಕಾರದ ಈ ಅನುದಾನದ ಜತೆಗೆ ರಾಜ್ಯ ಸರ್ಕಾರದ ನೆರವು ಮತ್ತು ನರೇಗಾ ಯೋಜನೆಯನ್ನು ಬಳಸಿಕೊಳ್ಳಬಹುದು ಎಂದು ತಿಳಿಸಿದರು.
ಅಂತರ್ಜಲ ಚೇತನ, ಅಟಲ್ ಭೂ ಜಲ ಸೇರಿ ಮೂರ್ನಾಲ್ಕು ಯೋಜನೆಗಳಿದ್ದು, ಅವುಗಳನ್ನು ಕ್ರೋಢೀಕರಿಸಲು ಚಿಂತನೆ ನಡೆಸಲಾಗಿದೆ. ನೀರಿನ ಉಳಿತಾಯ, ಅಂತರ್ಜಲ ಅಭಿವೃದ್ಧಿ ಹೇಗೆ ಮಾಡುವುದು, ಯಾವ ಹಳ್ಳ ಎಲ್ಲಿಂದ ಎಲ್ಲಿಗೆ ಹರಿಯುತ್ತಿದೆ ಎಂಬ ಮಾಹಿತಿ ಪಡೆಯಲಾಗುವುದು. ಈಗಾಗಲೇ ರಾಜ್ಯದಲ್ಲಿ ಅಂತರ್ಜಲ 1,500 ಅಡಿ ಆಳಕ್ಕೆ ಕುಸಿದಿದೆ. ನೀರನ್ನು ಮಿತವ್ಯಯವಾಗಿ ಹೇಗೆ ಬಳಸಬೇಕು ಎಂಬುದರ ಬಗ್ಗೆ ಅಧಿಕಾರಿಗಳ ಸಭೆಯಲ್ಲಿ ಚರ್ಚೆ ಮಾಡಿದ್ದೇವೆ ಎಂದು ವಿವರಿಸಿದರು.
ಅಟಲ್ ಭೂಜಲ್ ಯೋಜನೆಗೆ ಕೋಲಾರ, ಚಿಕ್ಕಬಳ್ಳಾಪುರ, ತುಮಕೂರು, ಬೆಂಗಳೂರು ಗ್ರಾಮಾಂತರ, ರಾಮನಗರ, ಚಿಕ್ಕಮಗಳೂರು, ಚಿತ್ರದುರ್ಗ, ದಾವಣಗೆರೆ, ಬಳ್ಳಾರಿ, ಬಾಗಲಕೋಟೆ, ಗದಗ, ಬೆಳಗಾವಿ, ಹಾಸನ ಸೇರಿದಂತೆ ರಾಜ್ಯದ 14 ಜಿಲ್ಲೆಗಳನ್ನು ಕೇಂದ್ರ ಸರ್ಕಾರವೇ ಆಯ್ಕೆ ಮಾಡಿದೆ. ಇಲ್ಲಿ ಅಂತರ್ಜಲ ಮಟ್ಟ ಏರಿಕೆ ಮಾಡಲು ಮುಂದಾಗಿದೆ. 1,119 ಗ್ರಾಪಂಗಳು ಈ ಯೋಜನೆಗೆ ಆಯ್ಕೆಯಾಗಿವೆ ಎಂದು ಸಚಿವರು ತಿಳಿಸಿದರು.
ಕೆರೆ, ಹಳ್ಳಗಳಲ್ಲಿ ಮಳೆಗಾಲದಲ್ಲೂ ನೀರು ನಿಲ್ಲುತ್ತಿಲ್ಲ. ಅರಣ್ಯೀಕರಣ, ಮೀನುಗಾರಿಕೆ, ಕೃಷಿ ತೋಟಗಾರಿಕೆ, ಸಣ್ಣ ನೀರಾವರಿ ಸೇರಿ ಎಲ್ಲವನ್ನೂ ಸೂಕ್ತವಾಗಿ ಬಳಸಿಕೊಳ್ಳುತ್ತೇವೆ. ಕೃಷಿಗೆ ನೀರಿನ ಮಿತವ್ಯಯ ಮಾಡುವುದು ಮತ್ತು ನೀರಿನ ಮರು ಬಳಕೆ ಬಗ್ಗೆ ಪ್ರಯೋಗ ಮಾಡಲಾಗುವುದು. ಅರಣ್ಯ ಬಳಸಿ ಕಡಿಮೆ ನೀರನ್ನು ಬಳಕೆ ಮಾಡಲಾಗುತ್ತದೆ. ಈ ಪ್ರಾಯೋಗಿಕ ಯೋಜನೆಗೆ ವಿಶ್ವ ಬ್ಯಾಂಕ್ ಮೆಚ್ಚುಗೆ ವ್ಯಕ್ತಪಡಿಸಿದೆ ಎಂದು ಹೇಳಿದರು. ಈ ಯೋಜನೆಯನ್ನು ಇಡೀ ರಾಜ್ಯಕ್ಕೆ ವಿಸ್ತರಿಸಲು ಚಿಂತಿಸಲಾಗಿದೆ ಎಂದರು.