ಬೆಂಗಳೂರು : ಜಿಲಿಟನ್ ಸ್ಫೋಟದಿಂದ ಕೆಲ ದಿನಗಳಿಂದ ಸ್ಥಗಿತಗೊಂಡಿರುವ ಶಿವಮೊಗ್ಗ ಜಿಲ್ಲೆಯ ಹುಣಸೋಡಿನ ಕಲ್ಲು ಗಣಿಗಾರಿಕೆಯನ್ನು ಪುನಾರಂಭ ಮಾಡುವಂತೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ.ಎಸ್.ಈಶ್ವರಪ್ಪ ನೇತೃತ್ವದ ಕಲ್ಲು ಮತ್ತು ಕ್ವಾರಿ ಅಸೋಸಿಯೇಷನ್ ನಿಯೋಗವು ಮನವಿ ಮಾಡಿತು.
ಗುರುವಾರ ಸಂಜೆ ವಿಕಾಸಸೌಧದಲ್ಲಿ ಗಣಿ ಮತ್ತು ಭೂವಿಜ್ಞಾನ ಸಚಿವ ಮುರುಗೇಶ್ ನಿರಾಣಿ ಅವರನ್ನು ಭೇಟಿಯಾಗಿ ಮನವಿ ಪತ್ರ ಸಲ್ಲಿಸಲಾಗಿದ್ದು, ಈ ಸಂದರ್ಭದಲ್ಲಿ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಮೋಹನ್ ಲಿಂಬೆಕಾಯಿ, ಗಣಿ ಇಲಾಖೆಯ ಕಾರ್ಯದರ್ಶಿ ಪಂಕಜ್ ಪಾಂಡೆ ಸೇರಿದಂತೆ ಅಸೋಸಿಯೇಷನ್ನ ಪ್ರಮುಖರು ಹಾಜರಿದ್ದರು.
ಇದಕ್ಕೂ ಮುನ್ನ ಸಾರ್ವಜನಿಕರಿಗೆ ಬ್ಯಾಗ್ಗಳಲ್ಲಿ ಮರಳು ವಿತರಣೆ ಹಾಗೂ ಚಿನ್ನದ ನಾಣ್ಯಗಳನ್ನು ಬಿಡುಗಡೆ ಮಾಡುವ ಕುರಿತಾಗಿ ತೆಗೆದುಕೊಳ್ಳಬಹುದಾದ ರೂಪುರೇಷೆಗಳ ಬಗ್ಗೆ ಗಣಿ ಮತ್ತು ಭೂವಿಜ್ಞಾನ ಸಚಿವ ಮುರುಗೇಶ್ ನಿರಾಣಿ ಅವರು ಅಧಿಕಾರಿಗಳ ಜೊತೆ ಸಭೆ ನಡೆಸಿದರು.
ಇಲಾಖೆಯ ( ಗಣಿ ) ಕಾರ್ಯದರ್ಶಿ ಪಂಕಜ್ ಪಾಂಡೆ, ಗಣಿ ಮತ್ತು ಭೂವಿಜ್ಞಾನ ಇಲಾಖೆಯ ನಿರ್ದೇಶಕ ಶ್ರೀ ಪಿ.ಎನ್.ರವೀಂದ್ರ, ಹಟ್ಟಿ ಚಿನ್ನದ ಗಣಿಯ ವ್ಯವಸ್ಥಾಪಕ ನಿರ್ದೇಶಕ ಪ್ರಭುಲಿಂಗ ಕವಳಿಕಟ್ಟಿ, ಕರ್ನಾಟಕ ರಾಜ್ಯ ಅದಿರು ನಿಗಮದ ವ್ಯವಸ್ಥಾಪಕ ನಿರ್ದೇಶಕ ಶಿವನಾಂದ ಕಪಸಿ ಸೇರಿದಂತೆ ಮತ್ತಿತರರು ಭಾಗವಹಿಸಿದ್ದರು.