ಬೆಂಗಳೂರು: ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ ಮಾಧುಸ್ವಾಮಿಗೆ ಕೋವಿಡ್ ಸೋಂಕು ದೃಢಪಟ್ಟಿದ್ದು, ಗೃಹ ಸಚಿವ ಆರಗ ಜ್ಞಾನೇಂದ್ರ ಅವರ ವರದಿ ನೆಗೆಟಿವ್ ಬಂದಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ಸಚಿವ ಮಾಧುಸ್ವಾಮಿ ಕೋವಿಡ್ ಪರೀಕ್ಷೆಗೊಳಪಟ್ಟಿದ್ದರು.
ಅವರ ವರದಿ ಪಾಸಿಟಿವ್ ಬಂದಿದೆ. ಆದರೆ ಸೌಮ್ಯ ರೋಗ ಲಕ್ಷಣಗಳಿದ್ದು, ಹೋಂ ಐಸೊಲೇಟ್ ಆಗಿದ್ದಾರೆ. ಇನ್ನು ಕೊರೊನಾ ವಿರುದ್ಧದ ಹೋರಾಟದಲ್ಲಿ ಪೊಲೀಸ್ ಸಿಬ್ಬಂದಿ ಜೊತೆ ಸಕ್ರಿಯವಾಗಿ ತೊಡಗಿಸಿಕೊಂಡು ಬೆಂಗಳೂರು ನಗರದಲ್ಲಿ ಸಿಟಿ ರೌಂಡ್ಸ್ ನಡೆಸಿದ್ದ ಗೃಹ ಸಚಿವ ಆರಗ ಜ್ಞಾನೇಂದ್ರ ಅವರೂ ಆರ್ಟಿಪಿಸಿಆರ್ ಟೆಸ್ಟ್ ಮಾಡಿಸಿಕೊಂಡಿದ್ದು, ವರದಿ ನೆಗೆಟಿವ್ ಬಂದಿದೆ.
ಇದನ್ನೂ ಓದಿ: ಸಿಎಂಗೆ ಕೋವಿಡ್ ಪಾಸಿಟಿವ್: ಆರೋಗ್ಯ ವಿಚಾರಿಸಿದ ಸಿದ್ದರಾಮಯ್ಯ
ಮೊದಲಿಗೆ ಶಿಕ್ಷಣ ಸಚಿವ ನಾಗೇಶ್, ನಂತರ ಕಂದಾಯ ಸಚಿವ ಆರ್.ಅಶೋಕ್ ಅವರಿಗೆ ವೈರಸ್ ಅಂಟಿತ್ತು. ನಿನ್ನೆ ಸೋಮವಾರ ಮುಖ್ಯಮಂತ್ರಿ ಕರೆದ ಸಭೆಯಲ್ಲಿ ಅನೇಕ ಅವರು ಪಾಲ್ಗೊಂಡಿದ್ದರು.
ಅಲ್ಲದೇ ಕಳೆದ ವಾರದಲ್ಲಿ ಹಲವು ಬಾರಿ ಸಿಎಂ ಸಂಪರ್ಕದಲ್ಲಿದ್ದರು. ನಿನ್ನೆ ಸಿಎಂಗೆ ಕೋವಿಡ್ ದೃಢಪಡುತ್ತಿದ್ದಂತೆಯೇ ಅವರ ಸಂಪರ್ಕಕ್ಕೆ ಬಂದಿದ್ದ ಎಲ್ಲಾ ಸಚಿವರು ಸಾರ್ವಜನಿಕರು ಹಾಗೂ ಅಧಿಕಾರಿಗಳನ್ನು ಭೇಟಿ ಮಾಡದೇ ಐಸೋಲೇಷನ್ನಲ್ಲಿದ್ದಾರೆ. ಸಿಎಂ ಸಂಪುಟ ಹಾಗೂ ಸಚಿವಾಲಯ ಸಿಬ್ಬಂದಿಗೆ ಕೋವಿಡ್ ಆತಂಕ ಕಾಡುತ್ತಿದೆ.