ಬೆಂಗಳೂರು : ಅಮೃತ ಮಹೋತ್ಸವದ ನೆನಪಿಗಾಗಿ ಅಮೃತ ಸ್ವಸಹಾಯ ಕಿರು ಉದ್ದಿಮೆ ಯೋಜನೆ ಘೋಷಿಸಲಾಗಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವ ಹಾಲಪ್ಪ ಆಚಾರ್ ವಿಧಾನಸಭೆಯಲ್ಲಿ ತಿಳಿಸಿದರು.
ಪ್ರಶ್ನೋತ್ತರ ವೇಳೆ ಜೆಡಿಎಸ್ ಶಾಸಕ ರವೀಂದ್ರ ಶ್ರೀಕಂಠಯ್ಯ ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವರು, ಈ ಯೋಜನೆಯಡಿ ಆಯ್ದ 7500 ಸ್ವಸಹಾಯ ಗುಂಪುಗಳಿಗೆ ತಲಾ ಒಂದು ಲಕ್ಷದಂತೆ ಬೀಜ ಧನ ಒದಗಿಸಲು ಕ್ರಮವಹಿಸಲಾಗಿದೆ. ಇದಕ್ಕಾಗಿ 75 ಕೋಟಿ ರೂ. ಅನುದಾನ ಒದಗಿಸಲಾಗಿದೆ ಎಂದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಡಿ ಕಾರ್ಯ ನಿರ್ವಹಿಸುವ 64,423 ಅಂಗನವಾಡಿ ಕಾರ್ಯಕರ್ತೆಯರು ಮತ್ತು 59,169 ಅಂಗನವಾಡಿ ಸಹಾಯಕಿಯರಿಗೆ ಕೋವಿಡ್ 19ರ ಹಿನ್ನೆಲೆಯಲ್ಲಿ ವಿಶೇಷ ಪ್ಯಾಕೇಜ್‍ನಲ್ಲಿ ಪ್ರತಿಯೊಬ್ಬರಿಗೂ ಒಂದು ಬಾರಿಗೆ ಎರಡು ಸಾವಿರ ರೂ. ಪರಿಹಾರ ವಿತರಿಸಲು ಕ್ರಮಕೈಗೊಳ್ಳಲಾಗಿದೆ.
ಇದಕ್ಕಾಗಿ 24.07 ಕೋಟಿ ರೂ.ಗಳ ಅನುದಾನವನ್ನು ಜಿಲ್ಲೆಗಳಿಗೆ ಬಿಡುಗಡೆಗೊಳಿಸಲಾಗಿದೆ. ಅವರಿಗೆ ಪರಿಹಾರ ಧನ ಹೆಚ್ಚಿಗೆ ಮಾಡುವ ಬಗ್ಗೆ ಪರಿಶೀಲಿಸುವುದಾಗಿ ತಿಳಿಸಿದರು.
2000-01ರಿಂದ ಸ್ತ್ರೀಶಕ್ತಿ ಯೋಜನೆ ಜಾರಿಯಲ್ಲಿದ್ದು, ಪ್ರಸ್ತುತ 1,65,960 ಗುಂಪುಗಳು ಮತ್ತು 25 ಲಕ್ಷ ಮಹಿಳೆಯರನ್ನು ಸಂಘಟಿಸಲಾಗಿದೆ. ಆಶಾ ಕಾರ್ಯಕರ್ತರು ಅಂಗನವಾಡಿ ಕಾರ್ಯಕರ್ತರಿಗೆ ವೇತನ ಹೆಚ್ಚಳ ಮಾಡುವ ಬಗ್ಗೆ ಪರಿಶೀಲನೆ ಮಾಡುತ್ತೇನೆ ಎಂದು ಸಚಿವರು ತಿಳಿಸಿದರು.
ಇದಕ್ಕೂ ಮುನ್ನ ಶಾಸಕ ರವೀಂದ್ರ ಶ್ರೀಕಂಠಯ್ಯ ಅವರು, ಅಂಗನವಾಡಿ ಹಾಗೂ ಆಶಾ ಕಾರ್ಯಕರ್ತೆಯರಿಗೆ 2000 ರೂ. ಪರಿಹಾರ ಧನ ಸಾಲುವುದಿಲ್ಲ. ಇನ್ನೂ ಹೆಚ್ಚಿಗೆ ನೀಡಬೇಕು ಎಂದು ಒತ್ತಾಯಿಸಿದರು.
ನಗರೋತ್ಥಾನ ಯೋಜನೆಯಡಿ ಅನುದಾನ ಶೀಘ್ರವೇ ಬಿಡುಗಡೆ : ಶಿವಮೊಗ್ಗ ಜಿಲ್ಲೆ ಹೊಸನಗರದ ಪಟ್ಟಣ ಪಂಚಾಯತ್ ಕಚೇರಿಯ ಕಟ್ಟಡ ಕಾಮಗಾರಿಗೆ ನಗರೋತ್ಥಾನ ಯೋಜನೆಯಡಿ ಅನುದಾನವನ್ನು ಶೀಘ್ರವೇ ಬಿಡುಗಡೆ ಮಾಡುವುದಾಗಿ ಪೌರಾಡಳಿತ ಸಚಿವ ಎಂಟಿಬಿ ನಾಗರಾಜ್ ಹೇಳಿದರು.
ವಿಧಾನಸಭೆಯಲ್ಲಿ ಶಾಸಕ ಹರತಾಳ್ ಹಾಲಪ್ಪ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ನಗರ ಸ್ಥಳೀಯ ಸಂಸ್ಥೆಗಳ ಕಚೇರಿ ಕಟ್ಟಡ ನಿರ್ಮಾಣ ಕುರಿತಾಗಿ 64.68 ಕೋಟಿ ರೂ.ಗಳ ಕಾಮಗಾರಿಗಳು ಬಾಕಿ ಉಳಿದಿವೆ ಎಂದು ಹೇಳಿದರು.
ತುಮಕೂರು ಜಿಲ್ಲೆ ತುರುವೇಕೆರೆ ಪಟ್ಟಣಕ್ಕೆ 2ನೇ ಹಂತದ ಒಳಚರಂಡಿ ವ್ಯವಸ್ಥೆ ಕಲ್ಪಿಸುವ ಕಾಮಗಾರಿಯನ್ನು 11.84 ಕೋಟಿಗಳ ಸರ್ಕಾರದ ಆಡಳಿತಾತ್ಮಕ ಅನುಮೋದನೆಗೆ ಸಲ್ಲಿಸಿದ್ದೇವೆ ಎಂದು ನಗರಾಭಿವೃದ್ಧಿ ಸಚಿವ ಭೈರತಿ ಬಸವರಾಜ್, ಶಾಸಕ ಮಸಾಲೆ ಜಯರಾಂ ಅವರ ಪ್ರಶ್ನೆಗೆ ಉತ್ತರಿಸಿದರು.
ಶಾಸಕ ಮಹಾದೇವ ಅವರ ಮತ್ತೊಂದು ಪ್ರಶ್ನೆಗೆ ಉತ್ತರಿಸಿದ ಭೈರತಿ ಅವರು, ಮೈಸೂರು ಜಿಲ್ಲೆ ಪಿರಿಯಾಪಟ್ಟಣಕ್ಕೆ ಕಾವೇರಿ ನದಿಮೂಲದಿಂದ 2ನೇ ಹಂತದ ನೀರು ಸರಬರಾಜು ಮಾಡುವ 126 ಕೋಟಿ ಅಂದಾಜು ಪಟ್ಟಿಯನ್ನು ಕರ್ನಾಟಕ ನೀರು ಸರಬರಾಜು ಮಂಡಳಿಗೆ ಕಳುಹಿಸಿ ಕೊಡಲಾಗಿದೆ ಎಂದರು.