ಬೆಂಗಳೂರು: ಸರ್ಕಾರದ ವಿರುದ್ಧ ಕಮಿಷನ್ ಆರೋಪ ಹೊರಿಸಿರುವ ದಿಂಗಾಲೇಶ್ವರ ಸ್ವಾಮೀಜಿ ವಿರುದ್ಧ ಸಚಿವ ಸಿ.ಸಿ.ಪಾಟೀಲ್ ವಾಗ್ದಾಳಿ ನಡೆಸಿದ್ದು, 'ಈ ಮನುಷ್ಯನ ಪೂರ್ವಾಪರ ಇತಿಹಾಸ ಏನಿದೆ?, ಇವರ ವಿರುದ್ಧ ಮೂರು ಪ್ರಕರಣಗಳಿವೆ. ಈ ಪೈಕಿ ಎರಡು ಪ್ರಕರಣಗಳಲ್ಲಿ ಜಾಮೀನಿನ ಮೇಲೆ ಇದ್ದಾರೆ. ಇವರ ಪೂರ್ವಾಶ್ರಮದ ಇತಿಹಾಸ ಏನು ಎಂಬುದು ಗದಗದ ಜನರಿಗೆ ಗೊತ್ತಿದೆ' ಎಂದು ಹೇಳಿದರು.
ವಿಧಾನಸೌಧದಲ್ಲಿ ಸುದ್ದಿಗೋಷ್ಟಿ ಉದ್ದೇಶಿಸಿ ಮಾತನಾಡಿದ ಅವರು, ತೋಂಟದಾರ್ಯ ಮಠದ ಲಿಂಗೈಕ್ಯ ಜಗದ್ಗುರು ಸಿದ್ದಲಿಂಗ ಶ್ರೀಗಳ ಗದ್ದುಗೆ ಉದ್ಘಾಟನಾ ಸಮಾರಂಭ ಆಯೋಜಿಸಲಾಗಿತ್ತು. ಆ ಕಾರ್ಯಕ್ರಮದಲ್ಲಿ ತೋಂಟದಾರ್ಯ ಸ್ವಾಮೀಜಿ ಹುಟ್ಟುಹಬ್ಬವನ್ನು ಭಾವೈಕ್ಯತೆಯ ದಿನವಾಗಿ ಸಿಎಂ ಘೋಷಿಸಿದ್ದರು. ತೋಂಟದಾರ್ಯ ಮಠದ ಮೇಲೆ ಜನರಿಗೆ ಇರುವ ಪೂಜ್ಯ ಭಾವನೆ ಗದಗದ ಶಿರಹಟ್ಟಿ ಮಠದ ಮೇಲೂ ಇದೆ. ಆದ್ರೆ ಅಲ್ಲಿಯ ಮಠದ ದಿಂಗಾಲೇಶ್ವರ ಸ್ವಾಮಿಗಳು ತೋಂಟದಾರ್ಯ ಸ್ವಾಮಿಗಳ ಹುಟ್ಟಿದ ದಿನವನ್ನು ಭಾವೈಕ್ಯತಾ ದಿನವನ್ನಾಗಿ ಆಚರಿಸಲು ವಿರೋಧ ವ್ಯಕ್ತಪಡಿಸಿದರು. ಸ್ವಾಮೀಜಿಗಳು ಬಳಸದ ಭಾಷೆಯನ್ನು ಅವರು ಬಳಸಿದ್ದಾರೆಂದು ವಾಗ್ದಾಳಿ ನಡೆಸಿದರು.
ಒಂದು ಮಠದ ಸಮಾಧಿಯನ್ನು ಉದ್ಘಾಟನೆ ಮಾಡಲು ಹೋಗಿ ಇನ್ನೊಂದು ಮಠವನ್ನು ಸಮಾಧಿ ಮಾಡಿದ್ದಾರೆಂದು ಹೇಳಿದ್ದಾರೆ. ಮಠಾಧೀಶರು ಇರುತ್ತಾರೆ, ಹೋಗುತ್ತಾರೆ. ಆದರೆ ಮಠದ ಘನತೆ, ಗಾಂಭೀರ್ಯತೆ ಕಾಪಾಡುವ ಕೆಲಸವನ್ನು ದಿಂಗಾಲೇಶ್ವರ ಸ್ವಾಮಿಗಳು ಮಾಡಬೇಕಿತ್ತು. ಸರ್ಕಾರದ ವಿರುದ್ಧ ಕಮಿಷನ್ ಆರೋಪ ಮಾಡಿದ್ದಾರೆ. ಮಠಾಧೀಶರಾಗಿ ಇನ್ನೊಂದು ಮಠದ ಬಗ್ಗೆ ಈ ರೀತಿ ವಿಷ ಕಾರುವುದು ಎಷ್ಟು ಸರಿ? ಎಂದು ಪ್ರಶ್ನಿಸಿದರು.
ಇದನ್ನೂ ಓದಿ: ದಿಂಗಾಲೇಶ್ವರ ಸ್ವಾಮೀಜಿ ಈ ರೀತಿ ಹೇಳಿಕೆ ನೀಡುವುದು ಅವರಿಗೆ ಶೋಭೆ ತರಲ್ಲ: ಬಿಎಸ್ವೈ
ರಾಜ್ಯದ ಸಿಎಂ ಮಠಕ್ಕೆ ಗೌರವ ತೋರಿದಾಗ ಅದನ್ನು ಸಹಿಸುವ ಶಕ್ತಿ ಇನ್ನೊಂದು ಮಠದ ಪೀಠಾಧಿಪತಿಗಳಿಗಿಲ್ಲ ಅಂದರೆ ಅವರಿಗೆ ಬಸವಣ್ಣನ ತತ್ವ ಹೇಳುವ ನೈತಿಕತೆ ಏನಿದೆ?. ದಿಂಗಾಲೇಶ್ವರ ಸ್ವಾಮಿಗಳು ಆ ಹೇಳಿಕೆಯನ್ನು ವಾಪಸ್ ಪಡೆಯಬೇಕೆಂದು ಸಚಿವರು ಇದೇ ವೇಳೆ ಆಗ್ರಹಿಸಿದರು.