ಬೆಂಗಳೂರು: ಸಚಿವ ಭೈರತಿ ಬಸವರಾಜ ಎನ್ಆರ್ಐ ಬಡವಾಣೆಯಲ್ಲಿ 35 ಎಕರೆ ಜಮೀನನ್ನು ನಕಲು ದಾಖಲು ಸೃಷ್ಟಿಸಿ ಮೊಸ ಮಾಡಿದ್ದಾರೆಂದು ಕಾಂಗ್ರೆಸ್ ನಾಯಕರು ಆರೋಪ ಮಾಡಿದ್ದು, ಇದೇ ವಿಚಾರವಾಗಿ ಅಧಿವೇಶನದಲ್ಲಿ ಕೋಲಾಹಲ ಉಂಟಾಗಿದೆ.
ಈ ವಿಚಾರವಾಗಿ ಭೂಮಿಯನ್ನು ಮಾರಿರುವ ಆದೂರು ಅಣ್ಣಯ್ಯಪ್ಪ ಕುಟುಂಬಸ್ಥರು ಇಂದು ಮಾಧ್ಯಮಗೋಷ್ಠಿ ನಡೆಸಿ, ಕಾಂಗ್ರೆಸ್ ನಾಯಕರ ವಿರುದ್ದ ಆಕ್ರೋಶ ವ್ಯಕ್ತಪಡಿಸಿದರು.
ಕೆ.ಆರ್.ಪುರ ಕ್ಷೇತ್ರದ ಕಲ್ಕೆರೆ ಗ್ರಾಮದ ಎಂ. ಮಾದಪ್ಪರವರ ಮನೆಯಲ್ಲಿ ಆದೂರು ಅಣ್ಣಯ್ಯಪ್ಪ ಕುಟುಂಬದ ಕೊನೆಯ ಮಗ ಮಾದಪ್ಪ ಮಾತನಾಡಿ ಬೈರತಿ ಬಸವರಾಜ ಅವರು ನಮಗೆ ಯಾವುದೇ ಮೋಸ ಮಾಡಿಲ್ಲ. ಸಚಿವರ ಮೇಲೆ ಸುಖಾ ಸುಮ್ಮನೆ ಆರೋಪ ಮಾಡುವುದು ಸರಿಯಲ್ಲ ಎಂದರು. ನಮ್ಮ ಕುಟುಂಬದ ವಿಚಾರದ ಬಗ್ಗೆ ಮಾತನಾಡುವುದು ಸರಿಯಲ್ಲ ಎಂದು ಎಚ್ಚರಿಕೆ ನೀಡಿದರು.
ನಾವೆಲ್ಲ ಸಹೋದರರು 2003ರಲ್ಲಿ ವಿಭಾಗೀಯ ಪತ್ರ ಮಾಡಿಕೊಂಡೆವು. 2013ರಲ್ಲಿ ಜಮೀನು ಮಾರಾಟ ಮಾಡಿದ್ದೇವೆ. ನಮ್ಮ ಕುಟುಂಬದಲ್ಲಿ ಎಲ್ಲರೂ ಒಗ್ಗಟ್ಟಾಗಿದ್ದೇವೆ. ಸಚಿವರಾಗಿರುವ ಬೈರತಿ ಬಸವರಾಜ ಅವರು ನಮಗೆ ಅನ್ಯಾಯ ಮಾಡಿಲ್ಲ. ನಾವು ಎಲ್ಲಿ ಬೇಕಾದ್ರು ಇದನ್ನು ಹೇಳುತ್ತೇವೆ ಎಂದು ಕಲ್ಕೆರೆ ಗ್ರಾಮದ ಮಾದಪ್ಪ ಸ್ಪಷ್ಟಪಡಿಸಿದರು.
ಇದನ್ನೂ ಓದಿರಿ: ನಾನು ಯಾವುದೇ ತಪ್ಪು ಮಾಡಿಲ್ಲ, ರಾಜೀನಾಮೆ ನೀಡುವ ಪ್ರಶ್ನೆ ಇಲ್ಲ: ಭೈರತಿ ಬಸವರಾಜ್
ಎಲ್ಲ ಕುಟುಂಬಸ್ಥರು ಎಲ್ಲಿ ಬೇಕಾದರೂ ಹೇಳ್ತೀವಿ ನಮಗೆ ಯಾವುದೇ ರೀತಿಯ ಮೋಸ ಆಗಿಲ್ಲ. ಎಲ್ಲಾರೂ ಸೇರಿ ಜಾಗವನ್ನ ಮಾರಿದ್ದೇವೆ. ಕಾಂಗ್ರೆಸ್ ನಾಯಕರು ನಮ್ಮ ಮನೆತನದ ಹೆಸರು ಹೇಳುವುದು ನಿಲ್ಲಿಸಬೇಕೆಂದು ತಿಳಿಸಿದರು. ಸದನದಲ್ಲಿ ಜಮೀನಿನ ಬಗ್ಗೆ ಸಚಿವರ ಬಗ್ಗೆ ಮಾತನಾಡುವುದು ಸರಿಯಲ್ಲ ಎಂದರು.
ಪ್ರತಿಭಟನೆಗೆ ನಮ್ಮ ವಿರೋಧ
ಸಚಿವ ಭೈರತಿ ಬಸವರಾಜ ವಿರುದ್ಧ ನಾಳೆ ಕೆ.ಆರ್.ಪುರದಲ್ಲಿ ಪ್ರತಿಭಟನೆ ಹಮ್ಮಿಕೊಂಡಿದ್ದು, ಇದಕ್ಕೆ ಆದೂರು ಅಣ್ಣಯ್ಯಪ್ಪ ಕುಟುಂಬದವರು ವಿರೋಧಿಸಿದ್ದಾರೆ.ಈ ಪ್ರತಿಭಟನೆ ಮಾಡಬಾರದೂ ನಮ್ಮ ಕುಟುಂಬದ ಹೆಸರನ್ನು ಬಳಸಿಕೊಳ್ಳಬಾರದು ಎಂದು ಎಚ್ಚರಿಕೆ ನೀಡಿದರು.