ಬೆಂಗಳೂರು : ಕೃಷಿ ಸಚಿವ ಬಿ.ಸಿ.ಪಾಟೀಲ್ ಇಂದು ಅನ್ನದಾತರೊಂದಿಗೆ ಅಂತರಾಳದ ಮಾತುಗಳನ್ನಾಡಲಿದ್ದಾರೆ. ಕೃಷಿ ಸಚಿವರಾಗಿ ಫೆ.11ಕ್ಕೆ ಎರಡು ವರ್ಷ ಪೂರೈಸುತ್ತಿದ್ದಾರೆ. ಹೀಗಾಗಿ, ರೈತರ ಸೇವೆ ಮಾಡಲು ಅವಕಾಶವನ್ನು ನೀಡಿರುವ ಈ ಫೆ.11ರ ಈ ದಿನವನ್ನು ಉಸ್ತುವಾರಿ ಜಿಲ್ಲೆ ಚಿತ್ರದುರ್ಗದಲ್ಲಿ ರೈತರೊಂದಿಗೆ ಕಳೆಯಲು ನಿರ್ಧರಿಸಿದ್ದಾರೆ.
ಚಿತ್ರದುರ್ಗ ಜಿಲ್ಲೆಯ ಭರಮಸಾಗರದ ಬೇಡರ ಶಿವನಕೆರೆ ರೈತ ಗಿರೀಶ್ ಅವರ ಜಮೀನಿನಲ್ಲಿ ಕಳೆಯಲಿದ್ದು,ಅನ್ನದಾತರೊಂದಿಗೆ ಅಂತರಾಳದ ಮಾತುಗಳನ್ನಾಡಲಿದ್ದಾರೆ. ಬಳಿಕ ಕೃಷಿ ಇಲಾಖೆಯ ಅಧಿಕಾರಿಗಳೊಂದಿಗೆ ಪ್ರಗತಿ ಪರಿಶೀಲನಾ ಸಭೆ ನಡೆಸಲಿದ್ದಾರೆ.
ಇದನ್ನೂ ಓದಿರಿ: ಫೆ. 14 ರಿಂದ ಅಧಿವೇಶನ: ನಿಷೇಧಾಜ್ಞೆ ಜಾರಿಗೊಳಿಸಿ ಪೊಲೀಸ್ ಆಯುಕ್ತ ಕಮಲ್ ಪಂತ್ ಆದೇಶ
ನ್ಯಾಯಾಲಯದ ಆದೇಶ ಪಾಲನೆ ಮಾಡಬೇಕು : ನಿನ್ನೆ ಸುದ್ದಿಗಾರರ ಜೊತೆ ಮಾತನಾಡಿದ ಸಚಿವ ಬಿ.ಸಿ. ಪಾಟೀಲ್, ನ್ಯಾಯಾಲಯದ ಆದೇಶವನ್ನು ಎಲ್ಲರು ಪಾಲನೆ ಮಾಡಬೇಕು. ಸಮವಸ್ತ್ರ ಬಿಟ್ಟು, ಬೇರೆ ಏನು ಧರಿಸದಂತೆ ಕೋರ್ಟ್ ಸೂಚಿಸಿದೆ. ಅದರಂತೆ ಸರ್ಕಾರ ಮುಂದಿನ ತೀರ್ಮಾನ ಮಾಡಲಿದೆ ಎಂದರು. ವಿದ್ಯಾರ್ಥಿಗಳು ಶಾಂತಿಯುತವಾಗಿರಬೇಕು. ವಿದ್ಯೆ ಸಿಕ್ಕರೆ ಸರ್ವಸ್ವವು ಸಿಕ್ಕಿದಂತಾಗುತ್ತದೆ. ಯಾವುದೇ ರೀತಿಯ ಪ್ರಚೋದನೆಗೆ ಒಳಗಾಗದೆ ಶಾಂತ ರೀತಿಯಲ್ಲಿ ಇರಬೇಕು ಎಂದು ಮನವಿ ಮಾಡಿದರು.
ಇದಕ್ಕೂ ಮುನ್ನ ಶಕ್ತಿ ಭವನದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಕೃಷಿ ಸಚಿವ ಬಿ.ಸಿ. ಪಾಟೀಲ್ ಅವರ ಎರಡು ವರ್ಷದ ಸಾಧನೆಯ ' ಪ್ರಯತ್ನದ ಫಲ ಭರವಸೆಯ ಪ್ರತಿಫಲ ' ಎಂಬ ಕಿರುಹೊತ್ತಿಗೆಯನ್ನು ಬಿಡುಗಡೆ ಮಾಡಿದರು. ಈ ಸಂದರ್ಭದಲ್ಲಿ ಕೃಷಿ ಸಚಿವ ಬಿ.ಸಿ.ಪಾಟೀಲ್, ಕೃಷಿ ಬೆಲೆ ಆಯೋಗ ಅಧ್ಯಕ್ಷ ಹನುಮನಗೌಡ ಬೆಳಗುರ್ಕಿ ಸೇರಿದಂತೆ ಇಲಾಖೆಯ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.
ಇದೇ ವೇಳೆ ಕೃಷಿ ಬೆಲೆ ಆಯೋಗದ ಅಧ್ಯಕ್ಷ ಹನುಮಗೌಡ ಬೆಳಗುರ್ಕಿ ಅವರು ಕರ್ನಾಟಕದಲ್ಲಿ ಕಬ್ಬು ಬೆಳೆ ಆರ್ಥಿಕದಾಯಕತೆ ಮತ್ತು ಕಬ್ಬು ಆಧಾರಿತ ಉದ್ಯಮಗಳ ವರದಿಯನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಸಲ್ಲಿಸಿದರು.