ಬೆಂಗಳೂರು : ಎಸ್ಎಸ್ಎಲ್ಸಿ ಪರೀಕ್ಷೆಯಂತೆ ವಿದ್ಯಾರ್ಥಿ ಸ್ನೇಹಿಯಾಗಿ ದ್ವಿತೀಯ ಪಿಯು ಪರೀಕ್ಷೆ ನಡೆಯಲಿದೆ. ಪರೀಕ್ಷಾ ಕೇಂದ್ರಗಳಿಗೆ ಯಾವುದೇ ಧರ್ಮ ಸಂಕೇತದ ಬಟ್ಟೆಗಳನ್ನು ಧರಿಸುವಂತಿಲ್ಲ ಎಂದು ಶಿಕ್ಷಣ ಸಚಿವ ಬಿ.ಸಿ ನಾಗೇಶ್ ಸ್ಪಷ್ಟಪಡಿಸಿದರು. ವಿಧಾನಸೌಧದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಮಕ್ಕಳು ದ್ವಿತೀಯ ಪಿಯುಸಿ ಪರೀಕ್ಷೆಯನ್ನು ನಿರ್ಭೀತಿಯಿಂದ ಬರೆಯಿರಿ. ಯಾವುದೇ ಆತಂಕ ಪಡುವ ಅಗತ್ಯ ಇಲ್ಲ. ಮಾಡೆಲ್ ಪೇಪರ್ ರೀತಿಯಲ್ಲಿ ಎಗ್ಸಾಂ ಪೇಪರ್ ಇರುತ್ತದೆ. ಪೋಷಕರಿಗೂ ಯಾವುದೇ ಭಯ ಬೇಡ. ಮಕ್ಕಳಿಗೆ ಧೈರ್ಯ ತುಂಬಿ. ಏಪ್ರಿಲ್ 22 ರಿಂದ ಮೇ 18ರವರೆಗೂ ಪಿಯು ಪರೀಕ್ಷೆ ನಡೆಯಲಿದೆ. ಬೆಳಗ್ಗೆ 10.15 ರಿಂದ ಮಧ್ಯಾಹ್ನ 1.30 ಗಂಟೆವರೆಗೆ ಪರೀಕ್ಷೆ ನಡೆಯಲಿದೆ ಎಂದರು.
ಪರೀಕ್ಷೆಗೆ ಒಟ್ಟು 6,84,255 ವಿದ್ಯಾರ್ಥಿಗಳು ನೋಂದಾಯಿಸಿಕೊಂಡಿದ್ದಾರೆ. ಈ ಪೈಕಿ 6,00,519 ರೆಗ್ಯುಲರ್ ವಿದ್ಯಾರ್ಥಿಗಳು, 61,808 ಪುನಾರಾವರ್ತಿತ (Repeater) ವಿದ್ಯಾರ್ಥಿಗಳು ಹಾಗೂ 21,928 ಖಾಸಗಿ ವಿದ್ಯಾರ್ಥಿಗಳು ಇದ್ದಾರೆ. 3,46,936 ಬಾಲಕರು ಹಾಗೂ 3,37,319 ಬಾಲಕಿಯರು ಪರೀಕ್ಷೆ ಬರೆಯಲಿದ್ದಾರೆ. ಕಲಾ ವಿಭಾಗದಲ್ಲಿ 2,28,167, ವಾಣಿಜ್ಯ ವಿಭಾಗದಲ್ಲಿ 2,25,519 ಹಾಗೂ ವಿಜ್ಞಾನ ವಿಭಾಗದಲ್ಲಿ 2,10,569 ವಿದ್ಯಾರ್ಥಿಗಳಿದ್ದಾರೆ. ಒಟ್ಟು 1076 ಪರೀಕ್ಷಾ ಕೇಂದ್ರಗಳಿವೆ ಎಂದು ಸಚಿವರು ವಿವರಿಸಿದರು.
ಎಲ್ಲಾ ಅಧಿಕಾರಿಗಳ ಜತೆಗೆ ವಿಸ್ತೃತವಾದ ಸಭೆ ಮಾಡಲಾಗಿದೆ. ಗೃಹ ಇಲಾಖೆಯ ಜತೆಗೆ ಕೂಡ ಸಭೆ ನಡೆಸಲಾಗಿದೆ. ಸಿಸಿಟಿವಿಗಳನ್ನು ಚೆಕ್ ಮಾಡಲಾಗಿದೆ. ಪ್ರಶ್ನೆ ಪತ್ರಿಕೆ ಪರೀಕ್ಷಾ ಕೊಠಡಿಗೆ ಹೋಗುವವರೆಗೂ ವಿಡಿಯೋ ರೆಕಾರ್ಡ್ ಮಾಡಲಾಗುತ್ತದೆ. ಎಸ್ಒಪಿ ಅನುಷ್ಠಾನ ಆಗುತ್ತದೆ. ಪರೀಕ್ಷಾ ಕೇಂದ್ರಗಳ ಸುತ್ತಮುತ್ತ 200 ಮೀಟರ್ ವ್ಯಾಪ್ತಿಯಲ್ಲಿ 144 ಸೆಕ್ಷನ್ ಜಾರಿಯಲ್ಲಿರುತ್ತದೆ. ಪರೀಕ್ಷಾ ಕೊಠಡಿಗೆ ಮೊಬೈಲ್, ಎಲೆಕ್ಟ್ರಾನಿಕ್ ಉಪಕರಣಗಳನ್ನು ತೆಗೆದುಕೊಂಡು ಹೋಗುವಂತಿಲ್ಲ. 2152 ವಿಶೇಷ ಜಾಗೃತ ದಳ ರಚಿಸಲಾಗಿದೆ. ತಾಲೂಕು ಮಟ್ಟದಲ್ಲಿ 858, ಜಿಲ್ಲಾ ಮಟ್ಟದಲ್ಲಿ 64 ಜಾಗೃತ ದಳ ನಿಯೋಜಿಸಲಾಗುವುದು ಸಚಿವ ಬಿ.ಸಿ ನಾಗೇಶ್ ತಿಳಿಸಿದರು.
ಸೂಚನೆಗಳೇನು?:
- ಯಾವುದೇ ಧಾರ್ಮಿಕ ವಸ್ತ್ರಗಳಿಗೆ ಅವಕಾಶ ಇಲ್ಲ.
- ವಿದ್ಯಾರ್ಥಿಗಳು ಸಮವಸ್ತ್ರ ಧರಿಸಿ ಪರೀಕ್ಷಾ ಕೇಂದ್ರಗಳಿಗೆ ಬರಬೇಕು.
- ಎಲ್ಲಿ ಸಮವಸ್ತ್ರ ನಿಗದಿ ಮಾಡಿಲ್ಲ ಅಲ್ಲಿ ಯಾವುದೇ ಬಟ್ಟೆ ಧರಿಸಿ ಮಕ್ಕಳು ಪರೀಕ್ಷಾ ಕೇಂದ್ರಗಳಿಗೆ ಬರಬಹುದು. ಆದರೆ, ಹಿಜಾಬ್ ಸೇರಿ ಧಾರ್ಮಿಕ ವಸ್ತುಗಳು ಧರಿಸುವಂತಿಲ್ಲ ಎಂದು ಸಚಿವರು ಸ್ಪಷ್ಟಪಡಿಸಿದರು.
- ಮೇ 2ನೇ ವಾರ SSLC ಫಲಿತಾಂಶ : ಎಸ್ಎಸ್ಎಲ್ಸಿ ಪರೀಕ್ಷೆ ಫಲಿತಾಂಶವನ್ನು ಮೇ ಎರಡನೇ ವಾರ ಪ್ರಕಟಿಸಲಾಗುವುದು. ಶೀಘ್ರದಲ್ಲೇ ದಿನಾಂಕವನ್ನು ನಿಗದಿ ಪಡಿಸಲಾಗುತ್ತದೆ ಎಂದು ಸಚಿವ ಬಿ.ಸಿ ನಾಗೇಶ್ ಹೇಳಿದರು. ಈ ಬಾರಿ ಎಸ್ಎಸ್ಎಲ್ಸಿ ರಿಪೀಟರ್ಸ್ ಪರ್ಸೆಂಟೇಜ್ ಕಡಿಮೆ ಇದೆ. ಬೆಳಗಾವಿ, ಚಿಕ್ಕೋಡಿಯಲ್ಲಿ 1300 ಮಕ್ಕಳು ಎಸ್ಎಸ್ಎಲ್ಸಿ ಪರೀಕ್ಷೆಗೆ ಗೈರಾಗಿದ್ದಾರೆ. ಎನ್‌ರೋಲ್‌ಮೆಂಟ್‌ನಲ್ಲಿ ಏನಾದ್ರೂ ಹೆಚ್ಚು ಕಡಿಮೆ ಆಗಿದೆಯಾ ನೋಡಬೇಕು ಎಂದರು.
ಇದನ್ನೂ ಓದಿ: ಸಮವಸ್ತ್ರ ಕುರಿತು ವಿವಾದಿತ ಹೇಳಿಕೆ: ಶಿಕ್ಷಣ ಸಚಿವರಿಗೆ ವಕೀಲರ ಸಂಘಟನೆಯಿಂದ ನೋಟಿಸ್